ರಾಣಿಬೆನ್ನೂರ: ವಾಣಿಜ್ಯ ನಗರ ಹಾಗೂ ಬೀಜೋತ್ಪಾದನೆ ಕಣಜವೆಂದೇ ವಿಶ್ವದಲ್ಲಿ ಪ್ರಖ್ಯಾತಿ ಪಡೆದ ನಗರದ ರೈಲ್ವೇ ನಿಲ್ದಾಣದಲ್ಲಿ ಸ್ವಚ್ಛತೆ ಎನ್ನುವುದು ಮರಿಚಿಕೆಯಾಗಿದ್ದು, ಪ್ರಧಾನಿ ಮೋದಿಯವರ ಸ್ವಚ್ಛ ಭಾರತದ ಕನಸು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಲಾಖೆಯಲ್ಲಿಯೇ ಸಾಕಾರವಾಗದಿರುವುದು ವಿಪರ್ಯಾಸ.
ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿ 4 ವರ್ಷಗಳು ಗತಿಸಿದರೂ ಕೇಂದ್ರ ಸರ್ಕಾರದ ಅಧೀನದಲ್ಲಿರುವ ರೈಲ್ವೆ ನಿಲ್ದಾಣಗಳು ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿವೆ.ನಿಲ್ದಾಣದಲ್ಲಿನ ಶೌಚಾಲಯಕ್ಕೆ ಕಳೆದ 2 ತಿಂಗಳಿಂದ ಬೀಗ ಜಡಿಯಲಾಗಿದ್ದು, ಪ್ರಯಾಣಿಕರು ಶೌಚಾಲಯ ಬಳಸಬೇಕು ಎಂದರೇ ರೈಲು ಬರುವವರೆಗೆ ಕಾಯಬೇಕಿದೆ. ಈ ಕುರಿತು ಹಲವು ಬಾರಿ ಪ್ರಯಾಣಿಕರು ಸ್ಟೇಶನ್ ಅಧಿಕಾರಿಗಳಲ್ಲಿ ಮೌಖಿಕ ಮನವಿ ಮಾಡಿಕೊಂಡಿದ್ದರೂ ಯಾವ ಪ್ರಯೋಜನೆಯಾಗಿಲ್ಲ.
ಕಸಗುಡಿಸಲು ದಿನಗೂಲಿ: ಸಾಮಾನ್ಯವಾಗಿ ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಇಲಾಖೆಯ ಸಿಬ್ಬಂದಿಗಳೇ ತುಂಬಿರುತ್ತಾರೆ. ಅದರಲ್ಲೂ ಸ್ವತ್ಛತಾ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿಯೇ ಕಾರ್ಮಿಕರು ಇರುತ್ತಾರೆ. ಆದರೆ, ರಾಣಿಬೆನ್ನೂರಿನ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಇಬ್ಬರು ಕಾರ್ಮಿಕರನ್ನು ಸ್ವಚ್ಛತಾ ಕಾರ್ಯಕ್ಕೆ ತೆಗೆದುಕೊಳ್ಳಲಾಗಿದೆ. ಈ ಇಬ್ಬರೇ ಕಾರ್ಮಿಕರಿಂದ ಇಡೀ ರೈಲು ನಿಲ್ದಾಣ ಸ್ವಚ್ಛತೆ ಅಸಾಧ್ಯ. ಇಲಾಖೆ ಅಧಿಕಾರಿಗಳು ಈ ಕುರಿತು ಮುತುವರ್ಜಿ ವಹಿಸಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕಿದ್ದು, ಅಗತ್ಯ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕಿದೆ.
ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ: ರೈಲ್ವೆ ಇಲಾಖೆಯಿಂದ ಸ್ವಚ್ಛತೆ ಮಾಡುವ ಗುತ್ತಿಗೆದಾರರ ಟೆಂಡರ್ ಪ್ರಕ್ರಿಯೆ ಫೆ. 2018ರಲ್ಲಿಯೇ ನಡೆದಿದೆ. ಡಬಲ್ ಟ್ರ್ಯಾಕ್ ಕಾಮಗಾರಿ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಚಳಗೇರಿ (ಕರೂರು) ನಿಲ್ದಾಣದಿಂದ ರಾಣಿಬೆನ್ನೂರು-ಶಿಕಾರಿಪುರ -ಶಿವಮೊಗ್ಗ ಹೊಸ ರೈಲ್ವೆ ಮಾರ್ಗ ಪ್ರಾರಂಭವಾಗಲಿದೆ. ಪ್ರಯಾಣಿಕರ ಸಂಖ್ಯೆಯೂ ಹೆಚ್ಚಲಿದ್ದು, ಇಲಾಖೆ ನಿಲ್ದಾಣದ ಸ್ವತ್ಛತೆಗೆ ಮೊದಲ ಆದ್ಯತೆ ನೀಡಲಿ ಎನ್ನುವುದು ಪ್ರಯಾಣಿಕರ ಒತ್ತಾಸೆಯಾಗಿದೆ.
ಸಾರ್ವಜನಿಕರ ಸಹಕಾರ ಅಗತ್ಯ: ಕೇಂದ್ರ ಸರ್ಕಾರ ಸ್ವಚ್ಛ ಭಾರತ ಎನ್ನುವ ವಿಭಿನ್ನ ಘೋಷಣೆ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪಣತೊಟ್ಟಿದ್ದು ಶ್ಲಾಘನೀಯ.ಆದರೆ, ಇಂತಹ ಯೋಜನೆಗಳ ಯಶಸ್ಸಿಗೆ ಅಧಿಕಾರಿಗಳು ಶ್ರಮಿಸಬೇಕಿದೆ. ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದರೇ ಯಾವ ಯೋಜನೆಯೂ ಅರ್ಥಪೂರ್ಣವಾಗದು. ಸಾರ್ವಜನಿಕರ ಸಹಾಯ, ಸಹಕಾರವೂ ಮೊದಲು ಬೇಕಿದೆ. ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಕಂಡ ಕಂಡಲ್ಲಿ ಉಗುಳುವುದು, ಕಸ ಚೆಲ್ಲುವುದು ಮಾಡಿದರೆ ಸ್ವಚ್ಛ, ಸುಂದರ, ಆರೋಗ್ಯವಂತ ಸಮಾಜ ನಿರ್ಮಾಣವಾಗದು.
ಶೌಚಾಲಯದಲ್ಲಿ ಸಾರ್ವಜನಿಕರು ತಂಬಾಕು, ಎಲೆ,ಅಡಕೆ ತಿಂದು ಉಗುಳಿ ಹಾಗೂ ಕಸ ಹಾಕಿದ ಪರಿಣಾಮ ಪದೇ ಪದೆ ಚಂಬರ್ ಕಟ್ಟಿಕೊಳ್ಳುತ್ತಿವೆ. ಹೀಗಾಗಿ ಬೀಗ ಹಾಕಲಾಗಿದೆ. ಇಗಾಗಲೇ ಟೆಂಡರ್ ಕರೆದಿದ್ದು, ಶೀಘ್ರವೇ ದುರಸ್ತಿ ಮಾಡಿಸಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಲಾಗುವುದು.
ಕನ್ನಯ್ಯ, ಸ್ಟೇಶನ್ ಮಾಸ್ಟರ್
ಮಂಜುನಾಥ ಎಚ್.ಕುಂಬಳೂರು