Advertisement

ರಾಣಿಬೆನ್ನೂರ:ಪತ್ರಕರ್ತರು ನಿಭಾಯಿಸಬೇಕಿದೆ ವಸ್ತು ನಿಷ್ಠ ವರದಿಯ ಸವಾಲು

03:51 PM Jul 29, 2023 | Team Udayavani |

ರಾಣಿಬೆನ್ನೂರ: ಪತ್ರಕರ್ತರು ಇಂದು ತಮ್ಮ ವೈಯಕ್ತಿಕ ಜೀವನ, ಸಂಸಾರದ ಜಂಜಾಟ ಸೇರಿದಂತೆ ಇತರ ಮಾನಸಿಕ ಸಮಸ್ಯೆಗಳನ್ನು ಬದಿಗೊತ್ತಿ ಸಮಾಜದ ನೂರೆಂಟು ಸವಾಲುಗಳನ್ನು ಎದುರಿಸಿ, ಸಮಾಜದ ಸ್ವಾಸ್ಥ್ಯ ಕಾಪಾಡುವ ಗುರುತರ ಜವಾಬ್ದಾರಿ ಕೈಗೆತ್ತಿಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣನವರ ಹೇಳಿದರು.

Advertisement

ಶುಕ್ರವಾರ ನಗರದ ಬಿಎಜೆಎಸ್‌ಎಸ್‌ ಪದವಿ ಮಹಾವಿದ್ಯಾಲಯದ ಪ್ರೊ| ಐ.ಜಿ. ಸನದಿ ಸಭಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಕುರಿತು ಉಪನ್ಯಾಸ ನೀಡಿದರು.

ಇಂದಿನ ಬಹುತೇಕ ಪತ್ರಿಕೆಗಳು ಎಡ ಪಂಥೀಯ ಹಾಗೂ ಬಲ ಪಂಥೀಯ ವಿಚಾರಧಾರೆಗಳನ್ನು ಹೊಂದಿದ್ದು, ಅವುಗಳನ್ನು ಓದುಗರ ಮೇಲೆ ಹೇರುವ ಕೆಲಸ ಮಾಡುತ್ತಿವೆ. ಹೀಗಾಗಿ, ಇಂದಿನ ಪತ್ರಕರ್ತರ ಮೇಲೆ ಜನರಿಗೆ ವಸ್ತುನಿಷ್ಠ ವರದಿ ತಲುಪಿಸುವ ಗುರುತರ ಸವಾಲು ಹಾಗೂ ಜವಾಬ್ದಾರಿಯಿದೆ ಎಂದರು.

ಪತ್ರಕರ್ತರು ಅಡುಗೆಯಲ್ಲಿ ಬಳಸುವ ಕರಿಬೇವಿನಂತೆ, ಅದು ರುಚಿಗೆ ಬಹುಮುಖ್ಯವಾಗಿದ್ದರೂ ಊಟ ಮಾಡುವಾಗ ಅದನ್ನು ಹೊರಕ್ಕೆ ಚೆಲ್ಲಲಾಗುತ್ತದೆ. ಆ ರೀತಿ ಕೆಲಸವಾಗುವ ಮುನ್ನ ಪತ್ರಕರ್ತರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳುವ ರಾಜಕಾರಿಣಿಗಳು, ಕೆಲಸ ಮುಗಿದ ನಂತರ ಅವರನ್ನು ನಗಣ್ಯವಾಗಿ ಕಾಣುತ್ತಾರೆ ಎಂದು ಹೇಳಿದರು.

ನಮ್ಮ ಸಂವಿಧಾನದಲ್ಲಿ ಅವಕಾಶ ಇಲ್ಲದಿದ್ದರೂ ಅಸ್ಪೃಶ್ಯತೆ, ವರದಕ್ಷಿಣೆ, ಜೀತ ಪದ್ಧತಿ, ಪ್ರಾಣಿ ಬಲಿ ಮುಂತಾದ ಕೆಟ್ಟ ಆಚರಣೆಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಸಮಾಜದಲ್ಲಿ ಮೌಡ್ಯತೆಯಲ್ಲಿ ಮುಳುಗಿರುವವರನ್ನು ಎಚ್ಚರಿಸಿ ಅವರು ಸರಿದಾರಿಯಲ್ಲಿ ಸಾಗುವಂತೆ ಮಾಡುವವರೇ ಪತ್ರಕರ್ತರು. ಅವರ ಸೇವೆ, ತ್ಯಾಗ ಸ್ಮರಿಸುವ ಸಲುವಾಗಿ ಆಚರಿಸುವ ದಿನವೇ ಪತ್ರಿಕಾ ದಿನಾಚರಣೆ ಎಂದರು.

Advertisement

ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕಾ ರಂಗಕ್ಕೆ ಒಂದು ಗುರಿಯಿತ್ತು. ಮಹಾತ್ಮ ಗಾಂಧಿಧೀಜಿ, ಅಂಬೇಡ್ಕರ್‌, ಲಾಲಾರಜಪತರಾಯ್‌, ಜವಾಹರಲಾಲ್‌ ನೆಹರು ಮುಂತಾದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಕೂಡ ಪತ್ರಕರ್ತರಾಗಿದ್ದರು. ಸ್ವಾತಂತ್ರ್ಯ ತರುವಲ್ಲಿ ಮಾಧ್ಯಮ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿತು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಹೆಚ್ಚಾಗಿದೆ. ಅವುಗಳಲ್ಲಿ ಪ್ರಚುರಪಡಿಸಲಾಗುವ ಸಂಗತಿಗಳ ಸತ್ಯಾಸತ್ಯತೆ ಪರಿಶೀಲಿಸಿ ಸುದ್ದಿ ಮಾಡುವುದು ಇಂದಿನ ಪತ್ರಕರ್ತರಿಗೆ ನಿಜಕ್ಕೂ ಸವಾಲಿನ ಕೆಲಸವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಬಹುಮುಖ್ಯ ಪಾತ್ರ ವಹಿಸಿದ್ದ ಪತ್ರಿಕಾ ರಂಗ ಪ್ರಸ್ತುತ ಕಾಲಘಟ್ಟದಲ್ಲಿ ಉದ್ಯಮವಾಗಿ ಪರಿವರ್ತನೆಯಾಗಿರುವುದು ವಿಷಾದನೀಯ ಎಂದರು.

ಎಜೆಎಸ್‌ಎಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ|ಆರ್‌.ಎಂ. ಕುಬೇರಪ್ಪ, ನಗರಸಭೆ ಮಾಜಿ ಸದಸ್ಯ ಮಂಜುನಾಥ ಗೌಡಶಿವಣ್ಣನವರ ಮಾತನಾಡಿದರು. ತಾಲೂಕು ಕಾನಿಪ ಸಂಘದ ಅಧ್ಯಕ್ಷ ಎಸ್‌.ಟಿ. ವೇದಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕಾನಿಪ ಸಂಘದ ಅಧ್ಯಕ್ಷ ನಾಗರಾಜ ಕುರವತ್ತೇರ, ಕಾರ್ಯದರ್ಶಿ ವೀರೇಶ ಮಡ್ಲೂರ, ಖಜಾಂಚಿ ನಾರಾಯಣ ಹೆಗಡೆ, ನಗರಸಭಾ ಸದಸ್ಯರಾದ ಮಂಜುಳಾ ಹತ್ತಿ, ಗಂಗಮ್ಮ ಹಾವನೂರ, ಮಲ್ಲಿಕಾರ್ಜುನ ಅಂಗಡಿ, ಡಾ|ಗಿರೀಶ ಕೆಂಚಪ್ಪನವರ, ಡಾ|ರತ್ನಪ್ರಭಾ ಕೆಂಚಪ್ಪನವರ, ರೋಟರಿ ಕ್ಲಬ್‌ ಅಧ್ಯಕ್ಷ ಸುಜಿತ್‌ ಜಂಬಗಿ, ರೈತ ಮುಖಂಡರಾದ ಹನುಮಂತಪ್ಪ ಕಬ್ಟಾರ, ರವೀಂದ್ರಗೌಡ ಪಾಟೀಲ, ದೀಪಕ ಹರಪನಹಳ್ಳಿ, ಗದಿಗೆಪ್ಪ ಹೊಟ್ಟಿಗೌಡ್ರ, ಪ್ರೊ|ಬಿ.ಬಿ. ನಂದ್ಯಾಲ, ರುಕ್ಮಿಣಿ ಸಾವಕಾರ, ಡಾ|ಗಣೇಶ ದೇವಗಿರಿಮಠ, ಪರಮೇಶ ಗೂಳಣ್ಣನವರ, ಎ.ಬಿ. ಪಾಟೀಲ, ಚಂದ್ರಣ್ಣ ಬೇಡರ, ಸಂಕಪ್ಪ ಮಾರನಾಳ, ಪ್ರಭಾಕರ ಶಿಗ್ಲಿ, ಪರಶುರಾಮ ಕಾಳೇರ, ಆರ್‌.ಟಿ. ತಾಂಬೆ, ಏಕಾಂತ ಮುದಿಗೌಡ್ರ, ಯುವರಾಜ ಬಾರಾಟಕ್ಕಿ ಮತ್ತಿತರರು ಇದ್ದರು. ಬಿ.ಎ.ಸುನೀಲ ಪ್ರಾರ್ಥಿಸಿದರು. ಮುಕ್ತೇಶ್ವರ ಕೂರಗುಂದಮಠ ಸ್ವಾಗತಿಸಿ, ಕೆ.ಎಸ್‌. ನಾಗರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುರಾಜ ಶಿರಹಟ್ಟಿ ನಿರೂಪಿಸಿ, ಎಂ. ಚಿರಂಜೀವಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next