Advertisement

ರಾಚವಿ: ಸಿಬಿಸಿಎಸ್‌ ಪಠ್ಯಕ್ರಮ ಶೀಘ್ರ

03:21 PM Aug 03, 2019 | Suhan S |

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2019ರ ಅನುಗುಣವಾಗಿ ಪದವಿ ಹಾಗೂ ಸ್ನಾತಕೋತ್ತರ ಪಠ್ಯಕ್ರಮದಲ್ಲಿ ಸಿಬಿಸಿಎಸ್‌ (ಚಾಯ್ಸ ಬೇಸ್ಡ್ ಕ್ರೆಡಿಟ್ ಸಿಸ್ಟ್‌ಂ) ಪದ್ಧತಿಯನ್ನು 2020-21ನೇ ಸಾಲಿನಿಂದ ಅಳವಡಿಸಲಾಗುವುದು ಎಂದು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಈಗಾಗಲೇ ಸಿಬಿಸಿಎಸ್‌ ಪಠ್ಯಕ್ರಮದ ಬಗ್ಗೆ ಮಾಹಿತಿ ಮಾಹಿತಿ ನೀಡಲಾಗಿದೆ. ಈ ಪಠ್ಯಕ್ರಮದಿಂದ ಜಾಗತಿಕ ಗುಣಮಟ್ಟದ ಉನ್ನತ ಶಿಕ್ಷಣವನ್ನು ಈ ಭಾಗದ ಜನತೆಗೆ ಒದಗಿದಂತಾಗುತ್ತದೆ. ಕೌಶಲ ಆಧರಿತ ಪಠ್ಯಕ್ರಮ ಸಿದ್ಧಪಡಿಸುವಂತೆ ಎಲ್ಲ ವಿಭಾಗಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದರು.

ವಿವಿಯಲ್ಲಿ ಸದ್ಯ 19 ಸ್ನಾತಕೋತ್ತರ ಕೋರ್ಸ್‌ಗಳು ಇವೆ. ಹೆಚ್ಚಿನ ಕೋರ್ಸ್‌ಗಳಿಗಾಗಿ ಈ ಭಾಗದ ವಿದ್ಯಾರ್ಥಿಗಳು ಬೇರೆ ಬೇರೆ ವಿಶ್ವವಿದ್ಯಾಲಯಗಳಿಗೆ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಬೇರೆ ವಿಶ್ವವಿದ್ಯಾಲಯಗಳಲ್ಲಿ 70ರಿಂದ 80 ಸ್ನಾತಕೋತ್ತರ ಪದವಿ ಕೋರ್ಸ್‌ಗಳು ಇರುತ್ತವೆ. ಹೀಗಾಗಿ ನಮ್ಮಲ್ಲಿಯೂ ಹೆಚ್ಚಿನ ಕೋರ್ಸ್‌ಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಭೂತರಾಮನಹಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ 168.76 ಎಕರೆ ಪ್ರದೇಶ ವಿಶ್ವವಿದ್ಯಾಲಯಕ್ಕೆ ಇನ್ನೂ ಸ್ಥಳಾಂತರವಾಗಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುತ್ತಿದೆ. ಕೇಂದ್ರ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಪರ್ಯಾಯ ಭೂಮಿ ಹುಡುಕಾಟ ಮಾಡುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿ ವಿಶ್ವವಿದ್ಯಾಲಯಕ್ಕೆ ಪ್ರಸ್ತಾವ ಹಿಂತಿರುಗಿಸಿದೆ. ನಗರದಲ್ಲಿ ಜಮೀನು ಸಿಗದಿದ್ದಲ್ಲಿ ಇತರ ತಾಲೂಕುಗಳಲ್ಲಿಯ ಜಾಗಕ್ಕೆ ವಿವಿಯನ್ನು ಸ್ಥಳಾಂತರಿಸಿ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ಚನ್ನಮ್ಮನ ಕಿತ್ತೂರು ಬಳಿ ಹಾಗೂ ನಗರದ ಸೇನೆಗೆ ಸೇರಿದ ಜಾಗವನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಇಲ್ಲಿನ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನಲ್ಲಿ 2ನೇ ಹಂತದಲ್ಲಿ 4.80 ಕೋಟಿ ರೂ. ವೆಚ್ಚದ ಕಟ್ಟಡ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದೆ. 3ನೇ ಹಂತದಲ್ಲಿ 10 ಕೋಟಿ ವೆಚ್ಚದಲ್ಲಿ ಮತ್ತೂಂದು ಕಟ್ಟಡ ಇನ್ನೆರಡು ತಿಂಗಳಲ್ಲಿ ನಿರ್ಮಿಸಲಾಗುವುದು. ಉತ್ತಮ ಗ್ರಂಥಾಲಯ, ಅತ್ಯಾಧುನಿಕ ಪ್ರಯೋಗಾಲಯ, ಗುಣಮಟ್ಟದ ಶೈಕ್ಷಣಿಕ ಉಪಕ್ರಮಕ್ಕೆ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ ಎಂದರು.

Advertisement

ವಿಜಯಪುರ, ಬಾಗಲಕೋಟೆ, ಜಮಖಂಡಿ ಸ್ನಾತಕೋತ್ತರ ಕೇಂದ್ರಗಳಲ್ಲಿ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಿ ಕೌಶಲ ಹಾಗೂ ಮಾರುಕಟ್ಟೆ ಆಧಾರಿತ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವ ಅತ್ಯಾಧುನಿಕ 4ರಿಂದ 5 ಕೋರ್ಸ್‌ಗಳನ್ನು ಆರಂಭಿಸಲಾಗುವುದು. ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಯೋಜಿಸಲಾಗಿದೆ. ವಿಜಯಪುರದಲ್ಲಿ 31 ಎಕರೆ, ಜಮಖಂಡಿಯಲ್ಲಿ 72 ಎಕರೆ ಹಾಗೂ ಬಾಗಲಕೋಟೆಯಲ್ಲಿ ಜಮೀನು ಪಡೆದುಕೊಳ್ಳಲು ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿವರಿಸಿದರು. ಕುಲಸಚಿವ ಪ್ರೊ. ಬಸವರಾಜ ಪದ್ಮಸಾಲಿ, ಮೌಲ್ಯಮಾಪನ ಕುಲಸಚಿವ ಪ್ರೊ. ರಂಗರಾಜ ವನದುರ್ಗ, ಹಣಕಾಸು ಅಧಿಕಾರಿ ಶಂಕರಾನಂದ ಬನಶಂಕರಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next