Advertisement

ಗದಗ: ಜನಮಾನಸದಲ್ಲಿ ಅಚ್ಚಳಿಯದ ರಾಣಿ ಚನ್ನಮ್ಮ

05:02 PM Oct 29, 2024 | Team Udayavani |

■ ಉದಯವಾಣಿ ಸಮಾಚಾರ
ಗದಗ: ಬ್ರಿಟಿಷರ ವಿರುದ್ಧ ರಣಚಂಡಿಯಾಗಿ ಹೋರಾಟ ನಡೆಸಿ ಕಿತ್ತೂರು ಸಂಸ್ಥಾನದ ಸ್ವಾಭಿಮಾನ, ನಾಡಪ್ರೇಮವನ್ನು ದೇಶದ ಸ್ವಾತಂತ್ರ್ಯ ಪ್ರಿಯರಿಗೆ ತೋರಿಸಿಕೊಟ್ಟ ರಾಣಿ ಚನ್ನಮ್ಮ ಜನಮಾನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಉಪನ್ಯಾಸಕ
ಎಸ್‌.ಎ. ಆವಾರಿ ಹೇಳಿದರು.

Advertisement

ನಗರದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಜರುಗಿದ ಸಾಹಿತ್ಯ ಸಿಂಚನ ಮಾಲಿಕೆಯಲ್ಲಿ ಮಾತನಾಡಿದ ಅವರು, ಕಿತ್ತೂರು ರಾಣಿ ಚನ್ನಮ್ಮ ಕಾಕತಿ ದೇಸಾಯಿ ಧೂಳಪ್ಪಗೌಡ ಹಾಗೂ ಪದ್ಮಾವತಿ ದಂಪತಿಯ ಪುತ್ರಿಯಾಗಿ 1778ರಲ್ಲಿ ಜನಿಸಿದರು.

ಧೂಳಪ್ಪಗೌಡ ದೇಸಾಯಿ ಯುದ್ಧ ಕಲೆಯಲ್ಲಿ ನಿಪುಣರಾಗಿದ್ದರು. ಅವರು ತಮ್ಮ ಮಗಳಿಗೆ ಸರ್ವ ವಿದ್ಯೆಯನ್ನೂ ಕಲಿಸಿದ್ದರು. ರಾಜಕಳೆಯ ಹೆಣ್ಣು ಮಗುವೇ ಮುಂದೆ ಕಿತ್ತೂರು ಮಹಾಸಂಸ್ಥಾನದ ಮಹಾರಾಣಿ ಪಟ್ಟ ವಹಿಸಿಕೊಂಡು ಕಿತ್ತೂರು ನಾಡನ್ನು ಸಮೃದ್ಧ ನಾಡಾಗಿ ಬೆಳೆಸಿದರು ಎಂದರು.

ಬ್ರಿಟಿಷರು ಭಾರತದಲ್ಲಿ ಕಾಲೂರುವ ಸಮಯದಲ್ಲಿ ಇಲ್ಲಿಯ ರಾಜಕೀಯ ಪರಿಸ್ಥಿತಿ ವಿಲಕ್ಷಣವಾಗಿತ್ತು. ಉತ್ತರ ಹಿಂದೂಸ್ಥಾನದಲ್ಲಿ ಮೊಘಲ ಬಾದಶಾಹಿ ದುರ್ಬಲವಾಗಿತ್ತು. ದಕ್ಷಿಣದಲ್ಲಿ ಸ್ವರಾಜ್ಯದ ವಿಸ್ತರಣೆಗಾಗಿ ಹೋರಾಡುತ್ತಿದ್ದ ಪೇಶ್ವೆ, ಆಕ್ರಮಣಕಾರಿ ಧೋರಣೆಯ ಹೈದರಾಬಾದಿನ ನಿಜಾಮಶಾಹಿ ಹಾಗೂ ಮೈಸೂರಿನ ಹೈದರ್‌ ಅಲಿ, ಇವರೆಲ್ಲರ ನಡುವೆ ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದ ಚಿಕ್ಕಪುಟ್ಟ ಪಾಳೆಗಾರರು ಇಂತಹ ರಾಜಕೀಯ ಪರಿಸ್ಥಿತಿ ಧೂರ್ತ, ಕ್ರೂರ ಧೋರಣೆಯ ಬ್ರಿಟಿಷರ
ಈಸ್ಟ್‌ ಇಂಡಿಯಾ ಕಂಪನಿಗೆ ಸುವರ್ಣಾವಕಾಶವನ್ನು ಒದಗಿಸಿತ್ತು.

ಇಂತಹ ಸಮಯದಲ್ಲಿ ಮಲ್ಲಸಜ್ಜನ ದೊರೆಯನ್ನು ಟಿಪ್ಪು ಸುಲ್ತಾನ್‌ ಸೆರೆ ಹಿಡಿದು ಕಪಾಲದುರ್ಗದಲ್ಲಿ ಸೆರೆಯಿಟ್ಟಿದ್ದನು.
ಉಪಾಯದಿಂದ ತಪ್ಪಿಸಿಕೊಂಡ ದೊರೆ 1803ರಲ್ಲಿ ವೆಲ್ಲೆಸ್ಲಿಗೆ ನೆರವು ನೀಡಿ ಕಿತ್ತೂರನ್ನು ಭದ್ರಗೊಳಿಸಿದ್ದನ್ನು ಸ್ಮರಿಸಿದರು.

Advertisement

ವಿಶ್ರಾಂತ ಉಪನ್ಯಾಸಕ ಬಿ.ಎಸ್‌. ಮಾನೇದ ಮಾತನಾಡಿ, ದೇಶದ ಸ್ವಾತಂತ್ರ್ಯ ಸಂಗ್ರಾಮದ 1857ರ ಸಿಪಾಯಿ ದಂಗೆಯೇ ಮೊದಲನೆಯ ದಂಗೆ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅದಕ್ಕೂ ಮುಂಚೆ ಅಂದರೆ 1824ರಲ್ಲಿಯೇ ಕಿತ್ತೂರ ರಾಣಿ ಚನ್ನಮ್ಮ ತನ್ನ ಚಿಕ್ಕ ಸೈನ್ಯದ ಜತೆಗೂಡಿ ದೈತ್ಯ ಬ್ರಿಟಿಷ್‌ ಸೈನ್ಯದ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿಯಾಗಿ ಮಿಂಚಿದ್ದರು.

ಅವರ ಸಂಯಮ, ಔದಾರ್ಯತೆ, ನಿಷ್ಠೆ ಇಂದಿನ ಮಹಿಳೆಯರಿಗೆ ಮಾದರಿಯಾಗಿದೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕೆ.ಎಚ್‌. ಬೇಲೂರ, ಡಾ| ಧನೇಶ ದೇಸಾಯಿ, ಡಾ| ಜಿ.ಬಿ. ಪಾಟೀಲ,
ಸಿದ್ಧಲಿಂಗೇಶ ಸಜ್ಜನಶೆಟ್ಟರ, ಸಿ.ಎಂ. ಮಾರನಬಸರಿ, ಆರ್‌.ಡಿ. ಕಪ್ಪಲಿ, ಲಿಂಗನಗೌಡ ಪಾಟೀಲ, ಡಿ.ಎಸ್‌. ಬಾಪೂರಿ ಇದ್ದರು. ಶ್ರೀಕಾಂತ ಬಡ್ನೂರ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ನಿರೂಪಿಸಿದರು. ರಕ್ಷಿತಾ ಗಿಡ್ನಂದಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next