ಹೊಸದಿಲ್ಲಿ: ಭಾರತೀಯ ವನಿತಾ ಹಾಕಿ ತಂಡದ ನ್ಯೂಜಿಲ್ಯಾಂಡ್ ಪ್ರವಾಸವು ಜ. 25ರಿಂದ ಆರಂಭವಾಗಲಿದ್ದು ಖ್ಯಾತ ಸ್ಟ್ರೈಕರ್ ರಾಣಿ ರಾಂಪಾಲ್ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರವಾಸದ ಮೊದಲ ಪಂದ್ಯವು ಆಕ್ಲಂಡ್‌ನಲ್ಲಿ ನಡೆಯಲಿದೆ.
ಪ್ರವಾಸದ ವೇಳೆ ಗೋಲ್‌ಕೀಪರ್ ಸವಿತಾ ಉಪನಾಯಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹಾಕಿ ಇಂಡಿಯಾ ತಿಳಿಸಿದೆ. ಭಾರತದ ಮೊದಲ ಪಂದ್ಯವು ಜ. 25ರಂದು ನ್ಯೂಜಿಲ್ಯಾಂಡ್ ಡೆವಲಪ್‌ಮೆಂಟ್ ತಂಡದ ಜತೆ ನಡೆಯಲಿದೆ. ಇನ್ನೆರಡು ಪಂದ್ಯಗಳು ಜ. 27 ಮತ್ತು 29ರಂದು ನ್ಯೂಜಿಲ್ಯಾಂಡ್ ವನಿತಾ ತಂಡದೆದುರು ಜರಗಲಿದೆ.
ಭಾರತೀಯ ತಂಡವು ಫೆ. 4ರಂದು ಇಂಗ್ಲೆಂಡ್ ವಿರುದ್ಧವೂ ಆಡಲಿದೆ. ಆಬಳಿಕ ಫೆ. 5ರಂದು ನ್ಯೂಜಿಲ್ಯಾಂಡ್ ವನಿತಾ ತಂಡದ ಜತೆ ಇನ್ನೊಂದು ಪಂದ್ಯವನ್ನಾಡಿ ಪ್ರವಾಸ ಅಂತ್ಯಗೊಳಿಸಲಿದೆ.
ನಾವು 20 ಸದಸ್ಯರ ತಂಡದ ಜತೆ ಪ್ರವಾಸಗೈಯುತ್ತಿದ್ದರೂ ಕೆಲುವೊಂದು ಪಂದ್ಯಗಳಲ್ಲಿ ನಾವು ಕೇವಲ 16 ಸದಸ್ಯರನ್ನು ಬಳಸಿಕೊಳ್ಳಲಿದ್ದೇವೆ. ಯಾಕೆಂದರೆ ಒಲಿಂಪಿಕ್ಸ್‌ನಲ್ಲಿ ನಾವು 16 ಸದಸ್ಯರೊಂದಿಗೆ ಆಡಬೇಕಾಗುತ್ತದೆ. ಕೆಲವು ಪಂದ್ಯಗಳಲ್ಲಿ 18 ಆಟಗಾರ್ತಿಯರು ತಂಡದಲ್ಲಿ ಇರಲಿದ್ದಾರೆ ಎಂದು ಭಾರತ ವನಿತಾ ತಂಡದ ಮುಖ್ಯ ಕೋಚ್ ಜೋರ್ಡ್ ಮರಿಜ್ನೆ ಹೇಳಿದ್ದಾರೆ.
ಆಟಗಾರ್ತಿಯರೆಲ್ಲರೂ ತಮ್ಮ ಶ್ರೇಷ್ಠ ನಿರ್ವಹಣೆ ನೀಡಲು ಪ್ರಯತ್ನಿಸಬೇಕು.
ಒತ್ತಡದಲ್ಲಿ ಅವರೆಲ್ಲ ಹೇಗೆ ಆಡುತ್ತಾರೆ ಎಂಬುದನ್ನು ಗಮನಿಸಲಿದ್ದೇನೆ ಎಂದ ಅವರು ವಿಶ್ವದ 5 (ಇಂಗ್ಲೆಂಡ್) ಮತ್ತು 6ನೇ (ನ್ಯೂಜಿಲ್ಯಾಂಡ್) ರ್‍ಯಾಂಕಿನ ತಂಡದೆದುರು ಯಾವುದೇ ಭಯವಿಲ್ಲದೇ ಆಡುವ ಅವಕಾಶ ಭಾರತೀಯ ಆಟಗಾ ರ್ತಿಯರಿಗೆ ಲಭಿಸಿದೆ. ಇದನ್ನು ಅವರು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ ಎಂದರು.
ಭಾರತೀಯ ವನಿತಾ ತಂಡ
ರಾಣಿ ರಾಂಪಾಲ್ (ನಾಯಕಿ), ಸವಿತಾ (ಉಪನಾಯಕಿ), ರಜಿನಿ ಎತಿಮಾರ್ಪು, ದೀಪ್ ಗ್ರೇಸ್ ಎಕ್ಕ, ಗುರ್ಜಿತ್ ಕೌರ್, ರೀನಾ ಖೋಖರ್, ಸಲಿಮಾ ಟೆಟೆ, ಸುಶೀಲಾ ಚಾನು, ನಿಶಾ, ನಮಿತಾ ತೊಪ್ಪೊ, ಉದಿತಾ, ಮೋನಿಕಾ, ಲಿಲಿಮಾ ಮಿಂಝ್, ನೇಹಾ, ಸೋನಿಕಾ, ಶರ್ಮಿಳಾ ದೇವಿ, ನವನೀತ್ ಕೌರ್, ಲಾಲ್‌ರೆಮಿÏಯಾಮಿ, ವಂದನಾ ಕಟಾರಿಯಾ, ನವಜ್ಯೋತ್ ಕೌರ್.