ರಾಣಿಬೆನ್ನೂರ: ಜೀವನ ವಿಕಾಸಗೊಳ್ಳಬೇಕಾದರೆ ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರೆ ಜೀವನದಲ್ಲಿ ಎಂಥ ಸಮಸ್ಯೆ ಬಂದರೂ ಎದುರಿಸಲು ಸಿದ್ಧರಾಗುವರು ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದೇವರಾಜು ಹೇಳಿದರು.
ತಾಲೂಕಿನ ಸುಣಕಲ್ಲಬಿದರಿಯ ಶ್ರೀ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ 2019-20ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳ ಜೀವನ ಪರಿಪೂರ್ಣವಾಗಿ ವಿಕಾಸಗೊಳ್ಳುತ್ತದೆ ಎಂದರು.
ವಿದ್ಯಾರ್ಥಿಗಳ ಜೀವನದಲ್ಲಿ ಪದವಿ ಹಂತ ಬಹಳ ಪ್ರಮುಖವಾದದು. ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗುವುದೇ ಈ ಹಂತದಲ್ಲಿ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ದಾರಿತಪ್ಪದೆ ಗುರುಗಳ ಮಾರ್ಗದರ್ಶನದಲ್ಲಿ ಸರಿಯಾಗಿ ಅಧ್ಯಯನ ಮಾಡಿ ಗುರುಗಳಿಗೂ, ಕಾಲೇಜಿಗೂ ಮತ್ತು ಪಾಲಕರಿಗೂ ಒಳ್ಳೆಯ ಹೆಸರು ತರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ|ಎನ್.ಎಂ.ಸಾಲಿ ಮಾತನಾಡಿ, ವಿದ್ಯಾರ್ಥಿಗಳು ಪದವಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗುವುದರ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಇದು ಸ್ಪರ್ಧಾತ್ಮಕ ಯುಗವಾಗಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆದು ಅಧ್ಯಯನ ಮಾಡಿ, ಉದ್ಯೋಗ ಪಡೆದುಕೊಂಡರೆ ನಿಮ್ಮ ಜೀವನ ಸಾರ್ಥಕವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಹಾಸ್ಯ ಭಾಷಣಕಾರ ಪ್ರಭುಲಿಂಗ ಕೋಡದ ಹಾಸ್ಯ ಭಾಷಣದ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಪ್ರಾಂಶುಪಾಲ ಡಾ|ರಮೇಶ ರಾಠೊಡ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕ ಡಾ|ಆನಂದ ಬೈರಾಪುರ ಪ್ರಸ್ತಾವಿಕವಾಗಿ ಮಾತನಾಡಿದರು. ಮಂಜಪ್ಪ ಲಿಂಗದಹಳ್ಳಿ, ಉಪನ್ಯಾಸಕರು ಮತ್ತು ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಮತ್ತಿತರರು ಇದ್ದರು.
ಸುಪ್ರೀತ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಹನುಮಂತರಾಜು ಸ್ವಾಗತಿಸಿದರು. ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಛಾಯಾಶ್ರೀ ವಂದಿಸಿದರು.