Advertisement

ಗ್ರಾಮೀಣ ಪ್ರದೇಶದಲ್ಲಿ ರಂಗೇರಿದ ರಂಗೋತ್ಸವ

07:06 PM Apr 18, 2019 | Team Udayavani |

ನವಸುಮ ರಂಗ ಮಂಚ (ರಿ.) ಕೊಡವೂರು, ಸಹಯೋಗ ಯುವಕ ಮಂಡಲ (ರಿ.) ಮೂಡಬೆಟ್ಟು , ಇವರ ಐದನೇ ವರ್ಷದ ರಂಗೋತ್ಸವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಶಾರದಾ ವಾಸುದೇವ ಕಿಣಿ ಹಿರಿಯ ಪ್ರಾಥಮಿಕ ಶಾಲೆ ಮೂಡಬೆಟ್ಟು ವಠಾರದಲ್ಲಿ ನಡೆಯಿತು. ಗ್ರಾಮೀಣ ಪ್ರದೇಶದಲ್ಲಿ ನಡೆದ ಈ ರಂಗೋತ್ಸವ ಅಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಹೊಸ ಅನುಭವ ನೀಡಿತು.

Advertisement

ಪ್ರಥಮ ದಿನ ರಂಗ ಸಂಗಾತಿ ಮಂಗಳೂರು ಇವರಿಂದ ಶಶಿರಾಜ್‌ ಕಾವೂರು ವಿರಚಿತ, ಮೊಹನ ಚಂದ್ರ ಯು. ನಿರ್ದೇಶನದ “ನೆಮ್ಮದಿ ಅಪಾರ್ಟ್‌ಮೆಂಟ್‌ ಫ್ಲಾಟ್‌ ನಂ. 252′ ರಂಗ ಪ್ರಯೋಗ ನಡೆಯಿತು. ಆಧುನಿಕ ಜಗತ್ತಿನಲ್ಲಿ ಜಗತ್ತೇ ಕೈಯಲ್ಲಿದೆ ಎನ್ನುವ ಭ್ರಮೆ ಸಂಸಾರ ಮತ್ತು ಹಳ್ಳಿಯ ಬಗ್ಗೆ ತಿರಸ್ಕಾರ ಭಾವ ಇದೆ. ಈ ಭ್ರಮೆಯೇ ನಿ ಎಂದು ಅವರು ಬದುಕು ಕಟ್ಟಿಕೊಳ್ಳುತ್ತಾರೆ. ಆಧುನಿಕ ಯುಗದ ಅಪಾರ್ಟ್‌ಮೆಂಟ್‌ ಸಂಸ್ಕೃತಿಯಲ್ಲಿ ಬರುವ ಜನ, ನಯ, ನಾಜೂಕು , ತಾವು, ತಮ್ಮವರು, ಸಂಬಂಧವನ್ನು ಕಳಚಿಕೊಂಡು ನಾಲ್ಕು ಗೋಡೆಯ ಮಧ್ಯೆ ಯಾವುದೇ ಸಂಬಂಧಗಳಿಲ್ಲದೆ ನಿರ್ಭಾವುಕರಾಗಿ ಹಾಗೆ ಬದುಕುತ್ತಿದ್ದಾರೆ.

ಇಪ್ಪತ್ತೈದನೇ ಮಹಡಿಯ ಪ್ಲಾಟ್‌ ನಂ. 252ರಲ್ಲಿ ಕೇಶವ ರಾವ್‌ ಎನ್ನುವ ದಢೂತಿ ಮನುಷ್ಯನ ಸಾವು ಸಂಭವಿಸುತ್ತದೆ.ಸಾವಿನ ಸುದ್ದಿಯನ್ನು ಕಮಲವ್ವ ಎನ್ನುವ ಕೆಲಸದವಳಿಂದ ತಿಳಿದ ಸ್ನೇಹಿತ ವರದರಾಜ್‌ ಅಲ್ಲಿಗೆ ಬರುತ್ತಾನೆ. ನಂತರ ವಾಚ್‌ಮ್ಯಾನ್‌ ಸೇರಿ ಹೆಣ ಕೆಳಗೆ ತೆಗೆದುಕೊಂಡು ಹೋಗುವ ಚರ್ಚೆಯಾಗಿ ಫೈಯರ್‌ಮ್ಯಾನ್‌ಗೆ ಫೋನ್‌ ಮಾಡುತ್ತಾರೆ. ಅನಂತರ ಲಾಯರ್‌, ಮಗಳು, ಅಳಿಯ , ಕಾರ್ಪೊರೇಟರ್‌, ಪೊಲೀಸ್‌ ಹೀಗೆ ಒಬ್ಬೊಬ್ಬರೆ ಬರುತ್ತಾರೆ. ವಕೀಲರಿಗೆ ಕೇಶವ ರಾವ್‌ ಸಾಯಲಿಲ್ಲ ಎನ್ನುವ ಸತ್ಯ ಗೊತ್ತಾಗಿ ಆಸ್ಪತ್ರೆಗೆ ಸೇರಿಸುತ್ತಾರೆ. ವಕೀಲರ ಸಹಾಯದಿಂದ ಎಲ್ಲವೂ ಸಸೂತ್ರವಾಗಿ ಇತ್ಯರ್ಥವಾಗುತ್ತದೆ. ವರದರಾಜ್‌ ಆಗಿ ಗೋಪಿನಾಥ ಭಟ್‌, ಕಮಲವ್ವಳಾಗಿ ಮಂಜುಳಾ ಜನಾರ್ದನ್‌, ವಾಚ್‌ಮ್ಯಾನ್‌ ಆಗಿ ಚಂದ್ರಹಾಸ ಉಳ್ಳಾಲ ಮನೋಜ್ಞವಾಗಿ ನಟಿಸಿದರು. ಬೆಳಕು ಮತ್ತು ಉತ್ತಮ ಹಿನ್ನಲೆ ಸಂಗೀತ ನಾಟಕಕ್ಕೆ ಪೂರಕವಾಗಿ ಸಹಕರಿಸಿ ರಂಜಿಸಿತು.

ಎರಡನೇ ದಿನದ ನಾಟಕ “ಒಂಜಿ ಸಿರೆ ಅಸರ್‌’. ಡಾ| ರಾಜಪ್ಪ ದಳವಾಯಿ ಕನ್ನಡದಲ್ಲಿ ರಚಿಸಿದ ನಾಟಕವನ್ನು ನವಸುಮ ರಂಗಮಂಚ (ರಿ.) ಕೊಡವೂರು ಇವರಿಗಾಗಿ ತುಳುವಿಗೆ ಅನುವಾದಿಸಿ ನಿರ್ದೇಶಿಸಿದವರು ಬಾಲಕೃಷ್ಣ ಕೊಡವೂರು.

ಈ ಲೋಕವೇ ಅಚ್ಚರಿಯ ಸೃಷ್ಟಿ. ಅಂತಹ ಸೃಷ್ಟಿಯನ್ನು ಅಹಂಕಾರದಿಂದ ಮೆಟ್ಟಿ ಮನುಷ್ಯನು ಮೇಲೇರಿದರೆ ಅನಾಹುತ ತಪ್ಪದು ಎಂಬ ಸಂದೇಶ ಈ ನಾಟಕದ್ದು. ಅಹಂಕಾರ ಮನುಷ್ಯನ ಮೂಲ ಪ್ರವೃತ್ತಿಯಲ್ಲಿ ಒಂದು. ಆಧುನಿಕ ಯುಗದಲ್ಲಿ ಎಷ್ಟೋ ಎಷ್ಟೋ ಮಂದಿ ಅಹಂಕಾದಿಂದಲೇ ಸೋತು ಮಣ್ಣಾಗಿದ್ದನ್ನು ನೋಡಿದ್ದೇವೆ.

Advertisement

ಅಲೆಕ್ಸಾಂಡರ್‌ ಮಹಾನುಭಾವ ಗುರು ಅರಿಸ್ಟಾಟಲ್‌, ತಾಯಿ, ಪ್ರೀತಿಯ ಹೆಂಡತಿಯ ಮಾತನ್ನು ಧಿಕ್ಕರಿಸಿ ತನ್ನ ಮಹತ್ವಾಕಾಂಕ್ಷೆಗೆ ಬಲಿಬಿದ್ದು ತನ್ನ ನಾಶದ ಗೋರಿಯನ್ನು ತಾನೇ ತೋಡಿಕೊಂಡ. ಅಲೆಕ್ಸಾಂಡರ್‌ನ ದಾರುಣ ಕತೆಯೇ “ಒಂಜಿ ಸಿರೆ ಅಸರ್‌’. ಅರಿಸ್ಟಾಟಲನಾಗಿ ಹರಿಪ್ರಸಾದ್‌ ಕುಂಪಲ, ತಾಯಿಯಾಗಿ ಪುಷ್ಪಲತಾ ಶಿವಕುಮಾರ್‌ ಕೊಳಲಗಿರಿ, ಪೆಂಬೂನಿಯಾಗಿ -ಆರಾಧ್ಯ ಆಚಾರ್ಯ, ಪೆಪೊಲಿಯಾ ಆಗಿ ಪ್ರಶಾಂತ ಪೂಜಾರಿ, ಅಚ್ಚುಮನಾಗಿ ಪ್ರಶಾಂತ್‌ ಮೂಡಬೆಟ್ಟು, ದೇವತೆಯಾಗಿ ದಿನೇಶ್‌ ಅಮೀನ್‌ ಇವರ ನಟನೆ ಮೆಚ್ಚುವಂತದ್ದು. ರಂಗ ವಿನ್ಯಾಸ ಗ್ರೀಕ್‌ ಶೈಲಿಯನ್ನ ಹೊಂದಿತ್ತು. ಅಖಂಡವಾದ ವಿನ್ಯಾಸ, ಅದೇ ರೀತಿಯಲ್ಲಿ ಬೆಳಕಿನ ವಿನ್ಯಾಸ ನಾಟಕಕ್ಕೆ ಪೂರಕವಾಗಿ ಕಥನವನ್ನು ಇನ್ನೂ ಹೆಚ್ಚಿಸಿತು. ಬೆಳಕಿನ ವಿನ್ಯಾಸ ಜಯಶೇಖರ ಮಡಪ್ಪಾಡಿ , ಸಂಗೀತ ಮತ್ತು ವಸ್ತ್ರ ವಿನ್ಯಾಸ ರಂಗಕ್ಕೆ ಪೂರಕವಾಗಿ ಮೂಡಿಬಂತು. ಒಟ್ಟಾರೆ ನಾಟಕ ಜನರ ಮನ ಗೆದ್ದಿತು.

ಮೂರನೇ ದಿನದ ನಾಟಕ ಭೂಮಿ ಗೀತೆ ಸಾಂಸ್ಕೃತಿಕ ವೇದಿಕೆ’ ಪಟ್ಲ ಇವರ “ಟ್ರೈನ್‌ ಟು ಪಾಕಿಸ್ತಾನ’. ಖುಷÌಂತ್‌ ಸಿಂಗ್‌ರ ಪ್ರಸಿದ್ಧ ಕಾದಂಬರಿ ಆಧಾರಿತ ನಾಟಕವನ್ನು ಕನ್ನಡಕ್ಕೆ ರೂಪಾಂತರಿಸಿದವರು ಡಾ| ಎಂ.ಬಿ. ರಾಮಮೂರ್ತಿ. ರಂಗರೂಪ ಮತ್ತು ನಿರ್ದೇಶನ ಸಂತೋಷ ಕುಮಾರ್‌ ಪಟ್ಲ. ತುಳು ಅನುವಾದ ಉದ್ಯಾವರ ನಾಗೇಶ್‌ ಕುಮಾರ್‌.

ಒಂದೆಡೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮ, ಜೊತೆಗೆ ದೇಶ ಭಾರತ ಮತ್ತು ಪಾಕಿಸ್ಥಾನ ಎಂಬ ಹೋಳಾಗುವಿಕೆಯ ನೋವು. ನಾಟಕದಲ್ಲಿ ಮನೋಮಜ್ರಾ ಎಂಬ ಕಾಲ್ಪನಿಕ ಪಂಜಾಬ್‌ ಪ್ರಾಂತ್ಯದ ಹಳ್ಳಿಯ ಯುವಕ ಹುಕುಮ್‌ ಚಂದ್‌ ಎನ್ನುವ ಅಧಿಕಾರಿ, ಇನ್ಸ್‌ಫೆಕ್ಟರ್‌ನ ಸ್ವ ಪ್ರತಿಷ್ಠೆ, ಇಕ್ಬಾಲ್‌ ಎನ್ನುವ ಕ್ರಾಂತಿಕಾರಿಯ ಹುಂಬತನ ಜಗ್ಗತ್‌ ಸಿಂಗ್‌ ಎಂಬ ದುರುಳನ ಸರಳ ಪ್ರೀತಿ, ಮಲ್ಲಿಯ ಡಕಾಯಿತಿ ಇವೆಲ್ಲವೂ ಸೇರಿ ಮನೋಮಜ್ರಾವನ್ನು ನಾಶ ಮಾಡುತ್ತದೆ.

ಹಗುರವಾದ ರಂಗಸಜ್ಜಿಕೆ, ರಂಗ ಸಂಗೀತ ನಾಟಕದ ಕಾವನ್ನು ಹೆಚ್ಚಿಸಿತು. ಗಣೇಶ್‌ ರಾವ್‌ ಎಲ್ಲೂರು ಅವರ ಸಂಗೀತಕ್ಕೆ ಶೋಧನ್‌ ಕುಮಾರ್‌ ಎರ್ಮಾಳ್‌ ಅವರ ಹಾಡುಗಾರಿಕೆ, ಬೆಳಕು ನಿತೇಶ್‌ ಬಂಟ್ವಾಳ ಎಲ್ಲರೂ ನಾಟಕದ ಗೆಲುವಿಗೆ ಕಾರಣರಾದರು.

ಜಯರಾಂ ನೀಲಾವರ

Advertisement

Udayavani is now on Telegram. Click here to join our channel and stay updated with the latest news.

Next