ಇದೂ ಚುಕ್ಕಿಗಳ ಲೆಕ್ಕದ ರಂಗೋಲಿಯೇ. ಆದರೆ, ಅಕ್ಷಯ್ ಜಾಲಿಹಾಳ್ ಆಚಾರ್ಯ ಅವರು ಬಿಡಿಸುವ ರಂಗೋಲಿ, ಈ ಬಗೆಯದ್ದಲ್ಲ. ಇವರು ಚುಕ್ಕಿಯಿಟ್ಟರೆ, ಅಲ್ಲಿ ಸಾಲುಮರದ ತಿಮ್ಮಕ್ಕ ಬಗೆಬಗೆಯ ಬಣ್ಣದಲ್ಲಿ ನಗುತ್ತಾರೆ; ಬಾಪೂ ಚರಕ ನೇಯುತ್ತಾರೆ; ಸಿದ್ದಗಂಗಾ ಶ್ರೀಗಳು ಮೌನದಲ್ಲಿ ಪಿಸುಗುಡುತ್ತಾರೆ; ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ ಅನ್ನು ಆಲಿಂಗಿಸಿಕೊಳ್ಳುತ್ತಾರೆ…
ಚುಕ್ಕಿಗಳು ಚಾರಣ ಹೊರಟಾಗ ಒಂದು ರಂಗೋಲಿ ಹುಟ್ಟುತ್ತದಂತೆ. ಮನೆಯ ಅಂಗಳದಲ್ಲಿ, ಗುಡಿಯೊಳಗೆ, ದೇಗುಲ ಕಟ್ಟೆಯ ಮುಂದಿನ ರಂಗೋಲಿಗಳು, ಬಣ್ಣದಲ್ಲಿ, ಬಣ್ಣವಿಲ್ಲದೆಯೂ ಭಕ್ತಿ-ಭಾವದ ರೂಪಕಗಳಂತೆ ಸೆಳೆಯುತ್ತವೆ. ರಂಗೋಲಿಯೆಂಬ ಚಿತ್ರದಲ್ಲಿಯೇ ನಮ್ಮ ಸಂಸ್ಕೃತಿಯ ಶ್ರದ್ಧೆ ಅಡಗಿದೆ. ಇಲ್ಲಿ ಒಂದೊಂದು ದೇವರಿಗೆ, ಒಂದೊಂದು ಆಚರಣೆಗೆ ಪ್ರಿಯವಾದ ರಂಗೋಲಿಗಳಿವೆ. ದೈವಿಕಭಾವದ ವಿಸ್ಮಯಗಳಂತೆ ಅವು ತೋರುತ್ತವೆ.
ಆದರೆ, ಬೆಂಗಳೂರಿನ ಚಂದಾಪುರದ ಅಕ್ಷಯ್ ಜಾಲಿಹಾಳ್ ಆಚಾರ್ಯ ಅವರು ಬಿಡಿಸುವ ರಂಗೋಲಿ, ಈ ಬಗೆಯದ್ದಲ್ಲ. ಅವರು ಚುಕ್ಕಿಯಿಟ್ಟರೆ, ಸಾಲುಮರದ ತಿಮ್ಮಕ್ಕ ಬಗೆಬಗೆಯ ಬಣ್ಣದಲ್ಲಿ ನಗುತ್ತಾರೆ; ಬಾಪೂ ಚರಕ ನೇಯುತ್ತಾರೆ; ಸಿದ್ದಗಂಗಾ ಶ್ರೀಗಳು ಮೌನದಲ್ಲಿ ಪಿಸುಗುಡುತ್ತಾರೆ; ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ ಅನ್ನು ಆಲಿಂಗಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಹಡಗು ನೀರನ್ನು ಸೀಳಿ ಚಲಿಸುವಂತೆ, ವಿಮಾನಗಳು ಆಕಾಶದ ನೀಲಿಯಲ್ಲಿ ಒಂದಾದಂತೆ, ಮರದ ರೆಂಬೆ ಮೇಲೆ ಕುಳಿತ ಹಕ್ಕಿ ಇನ್ನೇನು ಜಿಗಿಯುವಂಥ ದೃಶ್ಯಗಳು ಬೆರಗುಮೂಡಿಸುತ್ತವೆ.
ಇವೆಲ್ಲವೂ, ರಂಗೋಲಿ ಚಿತ್ರಗಳು ಸೃಷ್ಟಿಸೋ ಅವ ಅಕ್ಷಯ್, ಬಾಲ್ಯದಲ್ಲಿ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾಪೀಠಕ್ಕೆ ಸೇರಿಕೊಂಡಾಗ, ರಂಗೋಲಿ ಅವರನ್ನು ಮೊದಲ ಬಾರಿಗೆ ಸೆಳೆಯಿತು. ಅಲ್ಲಿ ಪೂಜೆಗೂ ಮುನ್ನ ಮಂಡಲ ಹಾಕಿ, ಅಲಂಕರಿಸುವ ಕಲೆಯ ಬಗ್ಗೆ ಆಕರ್ಷಿತರಾದರಂತೆ. ಹಾಗೆ ಮಂಡಲ ಹಾಕುವುದನ್ನು ಅಭ್ಯಸಿಸುತ್ತಲೇ, ರಂಗೋಲಿಯಲ್ಲಿ ನಾನಾ ಪ್ರಯೋಗಗಳಿಗೆ ಮುಂದಾದರು. ರಂಗೋಲಿ ಚಿತ್ರಕಲೆಯ ಅಭ್ಯಾಸವನ್ನೇ ತಪಸ್ಸಿನಂತೆ ಆಚರಿಸಿದರು. ಅದರ ಫಲಶ್ರುತಿಯೇ, ಈ ಚಿತ್ರ ರಂಗೋಲಿ.
ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವೇಶ್ವ ತೀರ್ಥರ ಮುಂದೆ ರಂಗೋಲಿ ಹಾಕಿದ್ದು, ಅಕ್ಷಯ್ ಬದುಕಿನ ದೊಡ್ಡ ಟರ್ನಿಂಗ್ ಪಾಯಿಂಟ್. ಶ್ರೀಗಳು ತನ್ಮಯರಾಗಿ ನೋಡುತ್ತಾ ಇದ್ದಾಗ, ಕೆಲವೇ ಗಂಟೆಗಳಲ್ಲಿ ಅವರದ್ದೇ ಚಿತ್ರವುಳ್ಳ ರಂಗೋಲಿ ನೆಲದ ಮೇಲೆ ಮೂಡಿತ್ತು. “ರಂಗೋಲಿಯೊಳಗೆ ಇಂಥ ಚಿತ್ರಕಲೆ ಇರುವುದು ಗೊತ್ತೇ ಇರಲಿಲ್ಲ. ಈ ವಿಶೇಷತೆಯನ್ನು ಮುಂದುವರಿಸಿ’ ಎಂಬ ಅವರ ಆಶೀರ್ವಾದ, ನಾರಾಯಣ ಯಜ್ಞಶಾಲೆಯ ಅಕ್ಷಯ್‌ಗೆ ಪ್ರೇರಣೆ ನೀಡಿತು.
“ರಂಗೋಲಿಯನ್ನು ಕೇವಲ ದೇವರ ಮುಂದೆ, ಅಂಗಳಕ್ಕೆ ಸೀಮಿತ ಮಾಡಲಾಗಿದೆ. ಆದರೆ, ರಂಗೋಲಿಯಲ್ಲಿ ನಾವು ಲೆಕ್ಕಿಸದಷ್ಟು ಭಾವಧ್ವನಿಗಳಿವೆ. ಅದು ಕಲಾಕೃತಿಯ ಬಹುದೊಡ್ಡ ಮಾಧ್ಯಮ’ ಎನ್ನುವುದು ಅಕ್ಷಯ್‌ರ ಮಾತು. ಇದುವರೆಗೆ ಅವರು 1500ಕ್ಕೂ ಅಧಿಕ ರಂಗೋಲಿ ಚಿತ್ರಗಳನ್ನು ಬಿಡಿಸಿದ್ದಾರೆ. ಒಂದೊಂದು ಚಿತ್ರ ಬಿಡಿಸಲು 10 ನಿಮಿಷದಿಂದ 8 ಗಂಟೆಗಳ ವರೆಗೂ ತೆಗೆದುಕೊಳ್ಳುತ್ತಾರೆ. ಇವರು ಬಿಡಿಸುವ ರಂಗೋಲಿಗಳು ಜಲವರ್ಣ, ತೈಲವರ್ಣದ ಚಿತ್ರಗಳಿಗಿಂತ ಹೆಚ್ಚು ಮೆರುಗಿನಿಂದ ಕೂಡಿದೆ ಎನ್ನುವುದು ಇನ್ನೊಂದು ವಿಶೇಷ.
ಎಷ್ಟು ಬಣ್ಣ ಬೇಕು?: ಒಂದು ಚಿತ್ರ ಬಿಡಿಸಲು 1 ಕಿಲೋದಿಂದ ಒಂದೂವರೆ ಕಿಲೋದಷ್ಟು ರಂಗೋಲಿ ಪುಡಿ ಇದ್ದರೆ ಸಾಕು. ಮಾರುಕಟ್ಟೆಯಲ್ಲಿ ನೈಸರ್ಗಿಕವಾಗಿ ರಂಗೋಲಿ ಪುಡಿ ಸಿಗುತ್ತದೆ. ಅದರ ಜೊತೆಗೆ ಕಪ್ಪೆಚಿಪ್ಪಿನ ಪುಡಿ, ವಿಭಿನ್ನ ಬಣ್ಣಗಳನ್ನು ಬಳಸಿಕೊಂಡು, ರಂಗೋಲಿ ಭಾವಚಿತ್ರ ತಯಾರಿಸುತ್ತಾರೆ.
ರಂಗೋಲಿಯಲ್ಲಿ ನಾನು ಕೇವಲ ದೇವರನ್ನಷ್ಟೇ ಕಾಣಲಿಲ್ಲ. ಜಗತ್ತನ್ನು ಕಂಡೆ. ಪ್ರಕೃತಿಯನ್ನು ನೋಡಿದೆ. ಸಮಾಜಕ್ಕಾಗಿ ಮಿಡಿದ ಹೃದಯಗಳನ್ನು ಚಿತ್ರಿಸಿದೆ.
-ಅಕ್ಷಯ್ ಜಾಲಿಹಾಳ್ ಆಚಾರ್ಯ, ಚಂದಾಪುರ
* ಬಳಕೂರು ವಿ.ಎಸ್. ನಾಯಕ್