ಬೀದರ: ರಂಗೋಲಿ ಬಿಡಿಸುವಿಕೆ ಇದೊಂದು ಜನಪದ ಸಂಸ್ಕೃತಿಯಾಗಿದ್ದು, ರಂಗೋಲಿ ಸ್ಪರ್ಧೆಯಿಂದ ರಾಷ್ಟ್ರೀಯ ಭಾವೈಕ್ಯ ವೃದ್ಧಿಸುತ್ತದೆ ಎಂದು ಗ್ರಾಮೀಣ ಠಾಣೆಯ ಪಿಎಸ್‌ಐ ಸುವರ್ಣಾ ನುಡಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಮಂಗಳವಾರ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ ನಾಗಪೂರ, ಜಿಲ್ಲಾ ಜಾನಪದ ಪರಿಷತ್ ಮಹಿಳಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಮಹಿಳೆಯರು ರಂಗೋಲಿ ಹಾಕಿ, ಮನೆಯಂಗಳ ಪರಿಶುದ್ಧವಾಗಿಡುತ್ತಿದ್ದರು. ಆದರೆ, ಇಂದು ಆಧುನಿಕತೆ ಭರಾಟೆಯಲ್ಲಿ ರಂಗೋಲಿ ಬಿಡಿಸುವ ಸಂಸ್ಕೃತಿಯಿಂದ ಮಹಿಳೆಯರು ದೂರ ಸರಿಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ಪರ್ಧೆಯಲ್ಲಿ ಮಹಿಳೆಯರಿಂದ ಒಂದಕ್ಕಿಂತ ಒಂದು ಚೆಂದದ ರಂಗೋಲಿ ಅರಳಿವೆ. ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್, ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಹಾಗೂ ಇನ್ನಿತರ ದೇಶಭಕ್ತಿಯನ್ನು ಸಾರುವ ಚಿತ್ತಾಕರ್ಷಕ ರಂಗೋಲಿ ಬಿಡಿಸಿ ಸಭಿಕರ ಗಮನ ಸೆಳೆದಿರುವುದು ಅತ್ಯಂತ ಖುಷಿ ತಂದಿದೆ ಎಂದು ಹೇಳಿದರು.
ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ| ರಾಜಕುಮಾರ ಹೆಬ್ಟಾಳೆ ಮಾತನಾಡಿ, ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಇಡೀ ದೇಶದಾದ್ಯಂತ ರಂಗೋಲಿ ಸ್ಪರ್ಧೆ ನಡೆಯುತ್ತಿದೆ. ಇಂದು ಬೀದರನಲ್ಲಿ ಆಯೋಜಿಸಿದ ಸ್ಪರ್ಧೆಯಲ್ಲಿ ಉತ್ಸಾಹದಿಂದ ಮಹಿಳೆಯರು ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಇದರಿಂದ ರಾಜ್ಯ, ರಾಷ್ಟ್ರ ಹಾಗೂ ಜಿಲ್ಲಾಮಟ್ಟದಲ್ಲಿ ಮಹಿಳೆಯರು ಗುರುತಿಸುವಂತಾಗಲಿದೆ. ಹಳ್ಳಿ ಸಂಸ್ಕೃತಿಯ ಪ್ರತೀಕವಾದ ರಂಗೋಲಿ ಬಿಡಿಸುವಿಕೆ ಹಾಗೂ ಇನ್ನಿತರ ಜನಪದ ಸಂಸ್ಕೃತಿಯ ವೃದ್ಧಿಯೇ ನಮ್ಮ ಧ್ಯೇಯವಾಗಿದೆ. ಹಲವಾರು ಜನಪದ ಕಲಾವಿದರಿಗೆ ಇದುವರೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಮಾಸಾಶನ ಮಾಡಿಸಲಾಗಿದೆ ಎಂದರು.
ಹಿರಿಯ ಸಾಹಿತಿ ಭಾರತಿ ವಸ್ತ್ರದ ಅಧ್ಯಕ್ಷತೆ ವಹಿಸಿದ್ದರು. ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಡಾ| ನೀಲಗಂಗಾ ಹೆಬ್ಟಾಳೆ, ಮಹಿಳಾ ಚಿಂತಕಿ ಸವಿತಾ ಹೆಗ್ಗೆ ವೇದಿಕೆಯಲ್ಲಿದ್ದರು. ಡಾ| ಸುನಿತಾ ಕೂಡ್ಲಿಕರ್ ಮಾತನಾಡಿದರು. ಮಲ್ಲಮ್ಮ ಸಂತಾಜಿ ಸ್ವಾಗತಿಸಿದರು. ಡಾ| ಮಹಾನಂದ ಮಡಕಿ ವಂದಿಸಿದರು.