ಕಳೆದ ನಾಲ್ಕು ವರ್ಷಗಳ ಹಿಂದೆ “ಮದರಂಗಿ’ ನಿರ್ದೇಶಿಸಿದ್ದ ಮಲ್ಲಿಕಾರ್ಜುನ ಮುತ್ತಲಗೇರಿ ಈಗ ಪುನಃ ಬಂದಿದ್ದಾರೆ. ತಡವಾದರೂ ಒಂದಷ್ಟು ರಂಗಾಗಿ ಬಂದಿದ್ದಾರೆ. ಅವರೀಗ “ರಂಗ್‌ಬಿರಂಗಿ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು
ಸಜ್ಜಾಗಿದ್ದಾರೆ. ಸಿನಿಮಾ ಅಂದರೆ, ಪ್ರೀತಿ-ಪ್ರೇಮ ಸಹಜ. ಅದರಲ್ಲೂ ಹದಿಹರೆಯದ ಹುಡುಗ-ಹುಡುಗಿಯರ ಕಥೆಗೆ ಹೆಚ್ಚು ಪ್ರಾಶಸ್ತ್ಯ. ಇಲ್ಲೂ ಕೂಡ ಅಂಥದ್ದೊಂದು ವಿಷಯ ಇಟ್ಟುಕೊಂಡೇ ಮುತ್ತಲಗೇರಿ ಬಂದಿದ್ದಾರೆ.
“ಹುಚ್ಚು ಕುದುರೆಯ ಬೆನ್ನೇರಿ’ ಎಂಬ ಅಡಿಬರಹ ಇಟ್ಟಿರುವ ನಿರ್ದೇಶಕರು, ಪಕ್ಕಾ ಯೂಥ್ಸ್ಗೆ ಸಂಬಂಧಿಸಿದ ಚಿತ್ರ ಮಾಡಿದ್ದಾರಂತೆ. ಬೆಂಗಳೂರು, ಗೋವಾ ಸೇರಿದಂತೆ ಇತರೆಡೆ ಸುಮಾರು 65 ದಿನಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. ಕಾಲೇಜು ಓದುವ ನಾಲ್ವರು ಹುಡುಗರು ಒಬ್ಬ ಹುಡುಗಿಯ ಹಿಂದೆ ಬೀಳುತ್ತಾರೆ. ಆಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತೆ ಎಂಬುದು ಕಥೆಯ ಸಾರಾಂಶ.
ಈ ಚಿತ್ರದ ಮೂಲಕ ಹೊಸ ಪ್ರತಿಭೆಗಳು ಕನ್ನಡಕ್ಕೆ ಕಾಲಿಟ್ಟಿವೆ. ಕ್ಯಾಮೆರಾ ಮುಂದೆ ನಿಲ್ಲಿಸುವ ಮುನ್ನ, ಎಲ್ಲರಿಗೂ ತರಬೇತಿ ಕೊಡಿಸಿ ಅಣಿಗೊಳಿಸಿದ್ದಾರೆ. ಇನ್ನು, ಜಯಂತ್ ಕಾಯ್ಕಿಣಿ, ಮಾರುತಿ, ಮನೋಜ್ ಹಾಗೂ ನಿರ್ದೇಶಕರೂ ಗೀತೆ ರಚಿಸಿದ್ದಾರೆ.
ಮಣಿಕಾಂತ್‌ಕದ್ರಿ ಅವರು ಸಂಗೀತ ಸಂಯೋಜಿಸಿದ್ದಾರೆ. ಪ್ರೀತಿ, ಭಾವನೆಗಳ ಮೇಲೆ ನಂಬಿಕೆ ಇಲ್ಲದ ಒರಟನಾಗಿ ಶ್ರೀಜಿತ್ ಕಾಣಿಸಿಕೊಂಡರೆ, ಮುಗ್ದ ಹುಡುಗನಾಗಿ ಪಂಚಾಕ್ಷರಿ ನಟಿಸಿದ್ದಾರೆ. ಚರಣ್‌ಸುಬ್ಬಯ್ಯ ಅವರು ಜೀವನದ ಬಗ್ಗೆ ಅರಿವೇ ಇರದ ಹುಡುಗನಾಗಿ ಅಭಿನಯಿಸಿದ್ದಾರೆ. ಕಾಲೇಜಿನಲ್ಲಿ ಮೋಜು ಮಾಡುವ ಹುಡುಗನಾಗಿ ಶ್ರೇಯಸ್ ಇಲ್ಲಿ ಹೊಸ ಅನುಭವ ಕಂಡುಕೊಂಡಿದ್ದಾರೆ. ತನ್ವಿ ರಾವ್ ಇವರಿಗೆ ನಾಯಕಿಯಾಗಿದ್ದಾರೆ.
ಉಳಿದಂತೆ ಸತ್ಯಜಿತ್, ಪ್ರಶಾಂತ್ ಸಿದ್ಧಿ, ಕುರಿ ಪ್ರತಾಪ್, ರಾಕ್‌ಲೈನ್ ಸುಧಾಕರ್ ಮುಂತಾದವರು ನಟಿಸಿದ್ದಾರೆ. ಹೊಸಬರ ಈ ಚಿತ್ರವನ್ನು ರಾಮನಗರದ ಶಾಂತಕುಮಾರ್ ನಿರ್ಮಿಸಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ನಿರ್ಧರಿಸಿದೆ ಚಿತ್ರತಂಡ.