Advertisement

ರಂಗಾಯಣದ ಗೌರ್ಮೆಂಟ್‌ ಬ್ರಾಹ್ಮಣ -ಇದಕ್ಕೆ ಕೊನೆ ಎಂದು…?-ಟ್ರಾನ್ಸ್‌ನೇಷನ್‌

06:24 PM Nov 14, 2019 | mahesh |

ಗೌರ್ಮೆಂಟ್‌ ಬ್ರಾಹ್ಮಣ
ರಂಗಾಯಣ ಮೂರು ನಾಟಕಗಳನ್ನು ಇತ್ತೀಚೆಗೆ ಪ್ರದರ್ಶಿಸಿತು.ಮೊದಲ ನಾಟಕ “ಗೌರ್ಮೆಂಟ್‌ ಬ್ರಾಹ್ಮಣ’ (ಆತ್ಮಕಥೆ: ಡಾ| ಅರವಿಂದ ಮಾಲಗತ್ತಿ. ಪರಿಕಲ್ಪನೆ ಮತ್ತು ನಿರ್ದೇಶನ : ಡಾ| ಎಂ. ಗಣೇಶ) ಭಾರತೀಯ ಜನಜೀವನದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದ ಅಸ್ಪೃಶ್ಯತೆ, ದಲಿತ ಜನಾಂಗವನ್ನು ಅನೇಕ ಬಗೆಯಿಂದ ಉಚ್ಚ ಕುಲದವರು ಹೇಗೆ ನಡೆಸಿಕೊಳ್ಳುತ್ತಿದ್ದರು ಎಂಬುದನ್ನು ಪರಿಣಾಮಕಾರಿ ದೃಶ್ಯ ಜೋಡಣೆಗಳಿಂದ ನಾಟಕವನ್ನು ಕಟ್ಟಿದ್ದಾರೆ. ವಸ್ತು ಈಗ ಕ್ಲೀಶೆ ಎನಿಸಿದರೂ ಸ್ಮತಿಯ ಭಾಗವಾಗಿದ್ದರಿಂದ ನಮ್ಮ ಹಿಂದಿನ ಜಾತಿ ಪದ್ಧತಿಯನ್ನು, ಅದರ ಕ್ರೌರ್ಯವನ್ನು ಯಥಾವತ್ತಾಗಿ ಮತ್ತು ವಿಡಂಬನಾತ್ಮಕವಾಗಿಯೂ ನಾಟಕ ಹೇಳುತ್ತದೆ.

Advertisement

ಅನಕ್ಷರಸ್ಥರಾಗಿದ್ದ ಈ ಶೋಷಿತ ಸಮುದಾಯ ಶಾಲೆಯಲ್ಲಿ ಅನುಭವಿಸಿದ ಸಂಕಟಗಳನ್ನು – ಹಲಗೆಯ ಮೇಲೆ ಕೂರುವಂತಿರಲಿಲ್ಲ, ಗೋಣಿತಾಟದಲ್ಲಿ ಒಂದೇ ಸಾಲಿನಲ್ಲಿ ಕೂರುವಂತಿರಲಿಲ್ಲ, ಕುಳಿತರೆ ಅಣಕ, ಸದಾ ಮೇಲು ಜಾತಿಯವರ ಅಪಹಾಸ್ಯ, ಕಸಗುಡಿಸಲು ಹೇಳಿ ನಿರಂತರ ಶೋಷಣೆ, ಹೆಸರು, ಕರೆಯುವುದರಲ್ಲಿ ಅಣಕ (ಮಾಲಗತ್ತಿ – ಮಾಲಕತ್ತಿ) … ತಪ್ಪಿದರೆ ಅರೆಬೆತ್ತಲೆ ಮಾಡಿ ಛಡಿ ಏಟು… (ದಲಿತ ಹುಡುಗ – ಮಂಜು ಶಿಕಾರಿಪುರ) ಈ ಸಂದರ್ಭಗಳಲ್ಲಿ ಚೆನ್ನಾಗಿ ನಟಿಸಿದ್ದಾರೆ.

ಸದಾ ರೊಟ್ಟಿ ತಿನ್ನುತ್ತಿದ್ದ ಈ ಸಮುದಾಯಕ್ಕೆ ಶ್ರೀಮಂತರ ಮದುವೆಯ ಊಟ ಎಂದರೆ ಅದೊಂದು ಅನ್ನ, ಸಿಹಿ ತಿನ್ನುವ‌ ಸಂಭ್ರಮ. ಈ ಮದುವೆಯ ಊಟದಲ್ಲೂ ಹಸಿವು ಮತ್ತು ಆಸೆಗಳಿಂದ ಆಗುವ ಜಾಣ ಕಳ್ಳತನ, ಹಸಿವಿನ ಹಪಹಪಿಕೆ … ಇವೆಲ್ಲವೂ ಹೃದಯಂಗಮವಾಗಿ ಮೂಡಿ ಬಂದಿದೆ. ದಲಿತರು ವಿದ್ಯಾವಂತರಾಗದಂತೆ – ದೀಪ (ಜ್ಞಾನದ ದೀಪವನ್ನೂ)ವನ್ನು ಆರಿಸಿ ಕಗ್ಗತ್ತಲು ಮಾಡುವುದು ಎರಡು ಕಾರಣಗಳಿಗಾಗಿ ಒಂದು, ಆ ಸಮುದಾಯ ಶಿಕ್ಷಣವನ್ನು ಪಡೆಯಬಾರದು, ಎರಡನೆಯದು ರಾತ್ರಿಯಲ್ಲಿ ಸವರ್ಣೀಯರು ತಾವು ನಡೆಸುವ ಕುಟಿಲ ಕಾರಸ್ಥಾನಗಳು ಹೊರಗೆ ಬರಬಾರದೆಂದು. ಒಂದರಲ್ಲಿ ಶೋಷಣೆ ಇನ್ನೊಂದರಲ್ಲಿ ದುಷ್ಕೃತ್ಯಗಳ ಸಂರಕ್ಷಣೆ.

ಎಮ್ಮೆಯ ಗರ್ಭಧಾರಣೆಗೆ ದೇಸಾಯಿ ಗೌಡರ ಕೋಣ ಬೇಕು. ಇದೂ ಒಂದು ಗಟ್ಟಿಯಾದ ರೂಪಕವೇ. ಶ್ರೀಮಂತರ ರಸಿಕ ಚೆಲ್ಲಾಟಕ್ಕೆ ಅಸ್ಪೃಶ್ಯ ಜನಾಂಗ ಬೆಲೆ ತೆರಬೇಕಾಗಿದೆ. ಅದು ಇನ್ನೂ ಸ್ಪಷ್ಟವಾಗುವುದು ಅವರ ಮನರಂಜನೆಯಾಟದಲ್ಲಿ . ದಲಿತ ಸಮುದಾಯದವರ ಗಂಡು – ಹೆಣ್ಣುಗಳ ಓಕುಳಿ – ಹೊಡೆದಾಟದಲ್ಲಿ ಮೋಜು ಅನುಭವಿಸುವವರು ಸವರ್ಣಿಯರೇ.

ಚುರುಕು ಅಭಿನಯ, ಸರಾಗ ದೃಶ್ಯ ಬದಲಾವಣೆ, ಹಿತಮಿತವಾದ ಬೆಳಕು, ಸಂಗೀತಗಳಿಂದ ಈ ನಾಟಕ ಬಹುಕಾಲ ನಮ್ಮನ್ನು ಕಾಡುತ್ತದೆ. ಮರಿಯಮ್ಮ (ಅಜ್ಜಿ ) ಮಮತೆ, ಗಟ್ಟಿತನ, ಅಂತಃಕರಣ ಎಲ್ಲಾ ಸಂದರ್ಭಗಳಲ್ಲೂ ಸೃಜನಶೀಲತೆಯಿಂದ ನಟಸಿದ್ದಾರೆ. ಆಕೆ ಒಂದು ರೀತಿಯಲ್ಲಿ ದಲಿತ ಶಕ್ತಿಯ ಸಂಕೇತ. ಕೊನೆಯಲ್ಲಿ ಮಹಿಳೆಯರೇ ಕೋಲು ತೆಗೆದುಕೊಂಡು ಗಂಡಸರನ್ನು ಓಡಿಸುವುದು ಒಂದು ರೂಪಕವೇ. ಮಹಿಳೆಯರೇ ಕೋಲು ಹಿಡಿದಾಗ ಬದಲಾವಣೆಯ ಚಕ್ರ ತಿರುಗುತ್ತದೆ ಎಂಬುದರದ್ದು.

Advertisement

ಇದಕ್ಕೆ ಕೊನೆ ಎಂದು…?
ಎರಡನೇ ನಾಟಕ ರೈತರ ಸರಣಿ ಆತ್ಮಹತ್ಯೆಗಳ ಕಥನ “ಇದಕ್ಕೆ ಕೊನೆ ಎಂದು…?’ (ಪರಿಕಲ್ಪನೆ ಮತ್ತು ನಿರ್ದೇಶನ: ಜಾಯ್‌ ಮೈಸ್ನಾಂ – ಸಂಗೀತ: ದೇಬರತಿ ಮಜುಂದಾರ್‌). “ಬೇ ಸಾಯ ಎನ್ನುವುದು ಈಗ ಬೇಗ ಸಾಯ’ ಎಂಬ ಸ್ಥಿತಿ ತಲುಪಿದೆ. ಪ್ರಸ್ತಿಕೆಯಲ್ಲಿ ಹೇಳಿಕೊಂಡಂತೆ “ನಮ್ಮ ರೈತನನ್ನು ಆಡಳಿತ ವ್ಯವಸ್ಥೆ ವ್ಯವಸ್ಥಿತವಾಗಿ ಇನ್ನಿಲ್ಲದಂತೆ ಕಾಡುತ್ತಾ ಬಂದಿದೆ. ಅವನ ಅರಿವಿಗೆ ಬಾರದೆಯೇ ಅವನನ್ನು ಸುತ್ತುವರಿಯುವ ಸಾಲದ ಸುಳಿ, ಅದರಿಂದ ಅವನು ಹೊರಬರಲಾರದೆ ಒದ್ದಾಡುವ ಪರಿ, ಅವನೊಡನೆ ಕಣ್ಣಾಮುಚ್ಚಾಲೆಯಾಡುವ ಮಳೆ, ಮುನಿಸಿಕೊಳ್ಳುವ ಇಳೆ, ಮುರುಟಿಹೋಗುವ ಬೆಳೆ, ಒಂದೇ ಎರಡೇ…? ಕೊನೆಗೂ ಉಣ್ಣಲು ಗತಿ ಇಲ್ಲದೆ ಹತಾಶೆ ಮತ್ತು ಅಸಹಾಯಕತೆಯಿಂದ ಸುಂದರ ಬದುಕನ್ನು ಕೊನೆಯಾಗಿಸಿಕೊಳ್ಳುತ್ತಾನೆ ನಮ್ಮ ರೈತ’

ಇದೊಂದು ಅದ್ಭುತ ದೃಶ್ಯ ವೈಭವ. ದೈಹಿಕ ಮಾಂಸಖಂಡಗಳ ಕಸರತ್ತಿನ ಮೂಲಕವೇ ಒಂದು ಅಭೂತಪೂರ್ವ ಸಂಗತಿಗಳನ್ನು ಮನಮುದ್ರೆಯಲ್ಲಿ ನಿಲ್ಲಿಸುವ ನಾಟಕ ಇದು. ನಾಟಕಕ್ಕೆ ಸಂಭಾಷಣೆಯು ಮುಖ್ಯ ಎಂಬ ಮಾತನ್ನು ನಿರಾಕರಿಸಿ ಆಂಗಿಕ ಅಭಿನಯ, ಚಲನೆ ಮತ್ತು ಕೆಲವೇ ಮಾತುಗಳ ಮೂಲಕ ಧ್ವನಿ ಪೂರ್ಣವಾಗಿ ನಾಟಕವನ್ನು ಕಡಿದು, ಕೆತ್ತಿ ನಿಲ್ಲಿಸಬಹುದು ಎಂಬುದಕ್ಕೆ ಈ ನಾಟಕ ಸಾಕ್ಷಿಯಾಗಿದೆ.ನಾಳೆ ಏನಾದರೂ ಮೂರನೇ ಮಹಾ ಜಾಗತಿಕ ಯುದ್ಧವಾದರೆ ಅದು ನೀರಿಗಾಗಿ ಎನ್ನುವುದು ಈಗ ರೂಢಿಯ ಮಾತಾಗಿದೆ. ಆದರೂ ನೀರಿನ ನಿರ್ವಹಣೆಯ ಬಗ್ಗೆ ಜಾಗೃತಿ ಇಲ್ಲ. ಇಡೀ ಲೋಕ ಒಂದು ರೀತಿಯ ವಿಸ್ಮತಿಯಲ್ಲಿದೆ. ಈ ವಿಸ್ಮತಿಯ ಪೊರೆಗಳನ್ನು ಹರಿದು ತೋರಿಸುವ ನಾಟಕ ಇದು.

ನಾಟಕದ ನಡೆ ನಿಧಾನಗತಿ. ಒಮ್ಮೊಮ್ಮೆ ಇದು ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸಿದಂತೆ ಅನಿಸಿದರೂ ಈ ರೀತಿಯ ನಾಟಕಕ್ಕೆ ಅನಿವಾರ್ಯ. ಇಂಥ ನಾಟಕಕ್ಕೆ ವೇಗ ಗತಿ ಹಾಕಿದರೆ ಅದು ಮನರಂಜನೆಯಾಗಿ ನಾಟಕದ ಧ್ವನಿ ಸತ್ತು ಹೋಗುತ್ತದೆ. ಇಲ್ಲಿ ಯಾರೂ ಹೀರೋ ಅಲ್ಲ. ನಾಯಕಿಯೂ ಅಲ್ಲ. ಇದೊಂದು ಸಮುದಾಯದ ಗೋಳಿನ ಕಥಾನಕ. ಎಂಟು ದೃಶ್ಯಗಳ – ಭೂಮಿ ಪೂಜೆ, ಬರಗಾಲ, ಬಿತ್ತನೆಯ ನಿಷ್ಪಲತೆ, ಕನಸು ತರುವ ಆನಂದ, ನೀರಿಗಾಗಿ ಹಾಹಾಕಾರ, ಮಳೆಗಾಗಿ ಆರ್ತತೆ, ಬರಿಯ ಮೋಡದ ಘರ್ಜನೆ. ಸಾಲದ ಹೊರೆಯಿಂದ ಆತ್ಮಹತ್ಯೆ – ಕೊಲಾಜ್‌ ಇದು. ಗುಂಪುಗಳಿಂದ ಕರ್ನಾಟಕವನ್ನು ಧ್ವನಿಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.

ಟ್ರಾನ್ಸ್‌ನೇಷನ್‌
ಮೂರನೆಯ ನಾಟಕ “ಟ್ರಾನ್ಸ್‌ನೇಷನ್‌’ (ಪಠ್ಯ ಬರವಣಿಗೆ: ಪುನೀತ್‌ ಕಬ್ಬೂರ್‌ ಪರಿಕಲ್ಪನೆ ಮತ್ತು ನಿರ್ದೇ ಶನ: ಸವಿತರಾಗಿ) ಒಂದು ಡಿವೈಸ್ಡ್ ಪ್ಲೇ ಅಂದರೆ ದೃಶ್ಯ ವನ್ನು ಒಡೆಯುತ್ತಾ, ಕಟ್ಟುತ್ತಾ ನಾಟಕವನ್ನು ರೂಪಿಸುವುದು. ಅನೇಕ ಸಂಗತಿಗಳನ್ನು ಪ್ರೇಕ್ಷಕರ ಮುಂದೆ ಇಡುತ್ತಾ – ಒಂದು ಪಠ್ಯವಾಗಿ ಅದೇ ರೀತಿಯಲ್ಲಿ ಒಂದು ರೂಪವಾಗಿ ಕಾಣುತ್ತದೆ. ಇಂಥ ನಾಟಕಗಳು ಹೆಚ್ಚು ಮೂರ್ತವಾಗಿ ಪ್ರೇಕ್ಷಕರನ್ನು ಒಳಗೊಳಿಸುತ್ತಾ – ನೋಡುವುದು ಬೇರೆ ಅಲ್ಲ. ನಾಟಕದವರು ಬೇರೆ ಅಲ್ಲ.ಈ ನಾಟಕವೂ (ಇಂಥಾ ನಾಟಕಗಳು) ವರ್ತಮಾನದ ಸಮಸ್ಯೆಗಳನ್ನು ಎದ್ದು ತೋರಿಸಿ ಪ್ರಶ್ನಾರ್ಥಕವಾಗಿ ಪ್ರೇಕ್ಷಕರ ಮುಂದೆ ಇಡುತ್ತದೆ.

ಇಲ್ಲೂ ಒಟ್ಟಾಗುತ್ತಾ ಮತ್ತೆ ಬೇರೆಯಾಗುತ್ತಾ ಹೋಗುತ್ತದೆ. ಹೀಗಾಗಿ ಭಾಷಾ ಗಲಾಟೆ, ಶಾಸಕಾಂಗಗಳು ನಡೆದುಕೊಳ್ಳುವ ರೀತಿ, ಕಪಟ ಸನ್ಯಾಸಿಗಳ ಕಥಾನಕ, ಮಹಿಳೆಯರ ಮೇಲಿನ ಅತ್ಯಾಚಾರ ಇಂಥ ಅನೇಕ ದುರಂತ ಘಟನೆಗಳ ನಡುವೆ – ಪ್ಯಾಷನ್‌ ಲೋಕದ ಮಾದರಿಗಳು ಡಯಲ್‌ 100, ಬಿ ಅವೇರ್‌, ವುಮೆನ್‌ ಹೆಲ್ಪ್ಲೈನ್‌ ಇತ್ಯಾದಿಗಳು ಇರುವುದು. ಒಂದು ರೀತಿಯ ಕ್ರೂರ ವ್ಯಂಗ್ಯವಾಗಿ ಕಾಣುತ್ತದೆ. ಒಂದು ಕಡೆ “ನನಗೇಕೆ ಯಾರೂ ಸಹಾಯ ಮಾಡಲಿಲ್ಲ. ಒಬ್ಬರಲ್ಲಿ ಹನ್ನೆರಡು ಜನರು’ ಎಂದು ನಟಿ (ರೇವತಿ ರಾಮ್‌ ಕುಂದನಾಡು) ಕೂಗುತ್ತಿರುವಾಗಲೇ ಫ್ಯಾಷನ್‌ ಷೋಗಳ ಭರಾಟೆ ನಡೆಯುತ್ತಿರುತ್ತದೆ. ಪ್ರಚಾರದ ಅಬ್ಬರದಲ್ಲಿ ಆಕೆಯ ಧ್ವನಿ ಕ್ಷೀಣವಾಗುತ್ತದೆ. ಸ್ವಾಮೀಜಿ (ರವಿಕುಮಾರ ಜಸರಳ್ಳಿ)ಯ ಪಾತ್ರವೂ ಕಪಟ ಸನ್ಯಾಸಿಗಳ ಕತೆಯನ್ನು ಬಿಚ್ಚಿ ತೋರಿಸುತ್ತದೆ – ತಿಳಿ ಹಾಸ್ಯದ ಮೂಲಕ. ಈ ಸಂದರ್ಭದಲ್ಲಿ ಹುಡುಗಿಯರು ಗಂಟೆಯನ್ನು ಹಿಡಿದು ಕೊಂಡಿರುವುದೂ ಒಂದು ವಿಭಿನ್ನ ಕಥೆಯನ್ನು ಹೇಳುತ್ತದೆ. “ಯತ್ತನಾರ್ಯಸ್ತೋ ಪೂಜ್ಯಂತೆ…’ ಎಂದು ಹೇಳಿದ ನಾಡಿನಲ್ಲಿಯೇ ಮಹಿಳೆಯರನ್ನೂ ಎಷ್ಟು ಕ್ರೂರವಾಗಿ, ಭಯಾನಕವಾಗಿ ನಡೆಸಿಕೊಳ್ಳುತ್ತಾರೆ. ಮೂಢನಂಬಿಕೆಯನ್ನು ಭಿತ್ತಿ ವಶ ಪಡಿಸಿಕೊಂಡು ಶೋಷಣೆ ಮಾಡುತ್ತಾರೆ ಎಂಬುದನ್ನು ಬಯಲು ಮಾಡುತ್ತದೆ ವ್ಯಂಗ್ಯದಿಂದ. ಧ್ಯಾನದ ಪ್ರಚಾರ ಇತರೆ…

ಒಟ್ಟಾರೆಯಾಗಿ ವಿಭಿನ್ನ ವಸ್ತುಗಳಿಂದ ಕೂಡಿದ ಈ ಮೂರೂ ನಾಟಕಗಳು ವಸ್ತುವಿನ ಆಯ್ಕೆ, ಪ್ರದರ್ಶನದ ಕುಶಲತೆಗಳಿಂದ ಸಮುದಾಯವನ್ನು ಎಚ್ಚರಗೊಳಿಸುವ ಕ್ರಿಯೆಯಲ್ಲಿ ಸಫ‌ಲವಾಗಿವೆ.

ಡಾ| ಜಯಪ್ರಕಾಶ ಮಾವಿನಕುಳಿ

Advertisement

Udayavani is now on Telegram. Click here to join our channel and stay updated with the latest news.

Next