ಕನ್ನಡ ಚಿತ್ರರಂಗದಲ್ಲಿ ಮೊದಲು ನಟ-ನಟಿಯರಾಗಿ ಗುರುತಿಸಿಕೊಂಡವರು ನಂತರ ಗಾಯಕರಾದ ಉದಾಹರಣೆ ಸಾಕಷ್ಟಿದೆ. ಈಗ ಈ ಸಾಲಿಗೆ ನಟ ರಂಗಾಯಣ ರಘು ಹೆಸರು ಕೂಡ ಸೇರ್ಪಡೆಯಾಗುತ್ತಿದೆ. ಹೌದು, ಇಲ್ಲಿಯವರೆಗೆ ಹತ್ತಾರು ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸಿ ಸಿನಿಪ್ರಿಯರ ಮನ ಗೆದ್ದಿರುವ ನಟ ರಂಗಾಯಣ ರಘು ಈಗ ಗಾಯಕರಾಗುತ್ತಿದ್ದಾರೆ. ರಂಗಾಯಣ ರಘು ಇದೇ ಮೊದಲ ಬಾರಿಗೆ ‘ಭಾನು ವೆಡ್ಸ್ ಭೂಮಿ’ ಚಿತ್ರದ ಗೀತೆಯೊಂದಕ್ಕೆ ಧ್ವನಿ ನೀಡುವ ಮೂಲಕ ಗಾಯಕರಾಗಿದ್ದಾರೆ. ‘ಭಾನು ವೆಡ್ಸ್ ಭೂಮಿ’ ಚಿತ್ರದಲ್ಲಿ ಬರುವ ಗೌಸ್‌ಪೀರ್ ಸಾಹಿತ್ಯದ ‘ಕಲರ್ ಕಲರ್ ಕನಸುಗಳು…’ ಎಂಬ ಗೀತೆಯನ್ನು ರಘು ಹಾಡಿದ್ದು, ಎ.ಎಂ ನೀಲ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ.
ಸದ್ಯ ತನ್ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಭಾನು ವೆಡ್ಸ್ ಭೂಮಿ’ ಚಿತ್ರತಂಡ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದ್ದು, ಇತ್ತೀಚೆಗೆ ತನ್ನ ಹಾಡುಗಳನ್ನು ಬಿಡುಗಡೆಗೊಳಿಸಿದೆ. ‘ಭಾನು ವೆಡ್ಸ್ ಭೂಮಿ’ ಚಿತ್ರದ ನಾಯಕ ನಟ ಸೂರ್ಯಪ್ರಭು, ನಾಯಕಿ ರಶ್ಮಿತಾ ಮಲ್ನಾಡ್, ರಂಗಾಯಣ ರಘು, ಶೋಭರಾಜ್ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಸಮ್ಮುಖದಲ್ಲಿ ಚಿತ್ರದ ಹಾಡುಗಳು ಬಿಡುಗಡೆಗೊಂಡವು.
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಜಿ.ಕೆ ಆದಿ, ‘ನಮ್ಮ ಸುತ್ತಮುತ್ತ ನಡೆಯುವ ಪಾತ್ರಗಳನ್ನೇ ಗಮನದಲ್ಲಿ ಇಟ್ಟುಕೊಂಡು ಈ ಚಿತ್ರವನ್ನು ಮಾಡಲಾಗಿದೆ. ಇಲ್ಲಿನ ಪಾತ್ರಗಳಿಗೆ ಯಾವುದೇ ಅಡಿಪಾಯವಿಲ್ಲ. ನಾವುಗಳು ಹೊರಗಡೆ ಬಂದಾಗ ಏನೇನು ಸಮಸ್ಯೆ ಎದುರಿಸುತ್ತೇವೆ ಅನ್ನೋದನ್ನೆ ಚಿತ್ರದಲ್ಲಿ ಹೇಳಿದ್ದೇವೆ. ಇದರಲ್ಲಿ ನವಿರಾದ ಪ್ರೇಮಕಥೆ ಇದೆ. ಎಮೋಶನ್ ಅಂಶಗಳಿವೆ. ಅದೆಲ್ಲ ಹೇಗೆ ಬಂದಿದೆ ಅನ್ನೋದನ್ನ ಥಿಯೇಟರ್‌ನಲ್ಲೇ ನೋಡಬೇಕು’ ಎಂದರು.
ಚಿತ್ರದ ನಾಯಕ ಪ್ರಭು ಸೂರ್ಯ ಸಭ್ಯ ಕುಟುಂಬದ ಹುಡುಗನಾಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಪ್ರಭು ಸೂರ್ಯ, ‘ಚಿತ್ರದಲ್ಲಿ ನಾನೊಬ್ಬ ಒಳ್ಳೆಯ ಮನೆತನದ ಹುಡುಗ, ಮದುವೆ ಬಗ್ಗೆ ಆಸಕ್ತಿ ಇರದ ನನಗೆ ಭೂಮಿ ಎನ್ನುವ ಹುಡುಗಿಯ ಪರಿಚಯವಾಗುತ್ತದೆ. ಮುಂದೆ ಅವಳು ನನಗೆ ದಕ್ಕುತ್ತಾಳಾ, ಇಲ್ಲವಾ ಎಂಬುದೇ ಚಿತ್ರದ ಒನ್‌ಲೈನ್ ಸ್ಟೋರಿ’ ಎಂದು ಪಾತ್ರ ಪರಿಚಯ ಮಾಡಿಕೊಟ್ಟರು. ಚಿತ್ರದ ನಾಯಕಿ ರಶ್ಮಿತಾ ಮಲ್ನಾಡ್ ಮಾತನಾಡಿ, ‘ಊರು ಬಿಟ್ಟು ಇನ್ನೊಂದು ಸ್ಥಳಕ್ಕೆ ಬಂದು, ತನ್ನ ಪ್ರೀತಿಯನ್ನು ಹುಡುಕಿಕೊಂಡು ಬಂದಾಗ ಅದು ಸಿಗುತ್ತದಾ ಎನ್ನುವುದು ನನ್ನ ಪಾತ್ರ’ ಎಂದು ತನ್ನ ಪಾತ್ರದ ಬಗ್ಗೆ ವಿವರಣೆ ಕೊಟ್ಟರು.
ಬೆಳಗಾವಿ ಮೂಲದ ಕಿಶೋರ್ ಶೆಟ್ಟಿ ‘ಭಾನು ವೆಡ್ಸ್ ಭೂಮಿ’ ಚಿತ್ರವನ್ನು ನಿರ್ಮಿಸುತ್ತಿದ್ದು, ಚಿತ್ರಕ್ಕೆ ಗಣೇಶ್ ಹೆಗಡೆ ಛಾಯಾಗ್ರಹಣ, ಶ್ರೀನಿವಾಸ್ ಬಾಬು ಸಂಕಲನ ಕಾರ್ಯವಿದೆ. ಸದ್ಯ ಬಿಡುಗಡೆಯಾಗಿರುವ ‘ಭಾನು ವೆಡ್ಸ್ ಭೂಮಿ’ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಚಿತ್ರವು ಆಗಸ್ಟ್ ವೇಳೆಗೆ ತೆರೆಕಾಣುವ ಸಾಧ್ಯತೆ ಇದೆ.