ಮೈಸೂರಿನ ನಾಟಕ ಕರ್ನಾಟಕ ರಂಗಾಯಣ ಈಗ ರಂಗಭೂಮಿ ವಲಯದಲ್ಲಿ ವಿವಾದದ ಕೇಂದ್ರ ಬಿಂದು. ಎಡ-ಬಲ ಚಿಂತಕರ ಹಗ್ಗಜಗ್ಗಾಟದ ವಸ್ತುವಾಗಿಬಿಟ್ಟಿದೆ. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಅತಿಥಿಗಳನ್ನು ಆಹ್ವಾನಿಸುವ ಕುರಿತು ಎದ್ದ ವಿವಾದ ಈಗ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಪೊಲೀಸ್ ಠಾಣೆ ಮೆಟ್ಟಿಲೇರುವವರೆಗೂ ಹೋಗಿರುವುದು ದುರಂತ.
ರಂಗಕರ್ಮಿಗಳು, ರಂಗಾಸಕ್ತರು ಈ ವಿಷಯದಲ್ಲಿ ತಮ್ಮದೇ ಆದ ನಿಲುವು ತಳೆದು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಎಡ-ಬಲ ಪಂಥದಿಂದ ಅಂತರ ಕಾಪಾಡಿಕೊಂಡಿರುವ ರಂಗಕರ್ಮಿಗಳು, ರಂಗಾಸಕ್ತರು ಮೌನಕ್ಕೆ ಶರಣಾಗಿದ್ದಾರೆ. ರಂಗಾಯಣವನ್ನು ಆರಂಭಿಸಿದಾಗ ಅದನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಕಟ್ಟಬೇಕೆಂಬ ಉದ್ದೇಶವೇ ಇತ್ತು. ರಂಗಾಯಣ ಅಂದಿನ ಸಿಎಂ ರಾಮಕೃಷ್ಣ ಹೆಗಡೆ ಹಾಗೂ ಅಂದು ಸಚಿವರಾಗಿದ್ದ ಸಾಂಸ್ಕೃತಿಕ ಚಿಂತಕ ಎಂ.ಪಿ.ಪ್ರಕಾಶ್ ಅವರ ಕನಸಿನ ಕೂಸು. ಬಿ.ವಿ.ಕಾರಂತರು ರಂಗಾಯಣದ ಸ್ಥಾಪಕ ನಿರ್ದೇಶಕರು. ಕಾರಂತರು ಎಂದೂ ಸಿದ್ಧಾಂತದ ಚೌಕಟ್ಟಿನಲ್ಲಿ ರಂಗಾಯಣವನ್ನು ಸೀಮಿತಗೊಳಿಸಿ ಕಟ್ಟಿ ಬೆಳೆಸಲಿಲ್ಲ. ಕಾರಂತರು ರಂಗಭೂಮಿಯ ಸಾಧ್ಯತೆಗಳನ್ನು ವಿಸ್ತರಿಸಿದ ರಂಗತಜ್ಞರಾಗಿದ್ದರು. ಆದರೆ ಇಂದು ರಂಗಾಯಣದ ಸುತ್ತ ವಿವಾದದ ಹುತ್ತ ಬೆಳೆಯುತ್ತಿದೆ. ಎಡ-ಬಲ ಎರಡೂ ಬಣದ ಅತಿರೇಕಗಳ ನಡುವೆ ಸಿಲುಕಿ ರಂಗಾಯಣ ವಿವಾದದ ಕೇಂದ್ರ ಬಿಂದುವಾಗಿದೆ.
ರಂಗಭೂಮಿ ಎನ್ನುವುದೇ ಎಲ್ಲರನ್ನೂ ಒಳಗೊಳ್ಳುವ ಒಂದು ಸಮೂಹ ಸಂವಹನ ಮಾಧ್ಯಮ. ಇಂತಹ ಸಮೂಹ ಮಾಧ್ಯಮದಲ್ಲಿ ಒಬ್ಬರು ಮತ್ತೂಬ್ಬರನ್ನು ಬೇಡ ಎಂದು ಹೇಳುವುದೇ ಅರ್ಥಹೀನ. ಎಲ್ಲರ ಸಾಂಸ್ಕೃತಿಕ ಚಿಂತನೆಗಳನ್ನು ಇಲ್ಲಿ ಒರೆಗೆ ಹಚ್ಚಬೇಕಾಗುತ್ತದೆ. ಎಲ್ಲರನ್ನೂ ಒಳಗೊಳ್ಳುವ ಶಕ್ತಿ ಇರುವ ರಂಗಭೂಮಿಯನ್ನೇ ಕೆಲವರು ತಮ್ಮ ಮೂಗಿನ ನೇರಕ್ಕೆ ಸೀಮಿತಗೊಳಿಸಿ ನೋಡುವುದೇ ವಿಪರ್ಯಾಸ. ಇದು ರಂಗಭೂಮಿಯ ಇತಿಮಿತಿಯಲ್ಲ, ಅದನ್ನು ಅರ್ಥೈಸಿಕೊಳ್ಳುವವರ ಇತಿಮಿತಿಯಾಗುತ್ತದೆ ಅಷ್ಟೇ.
ಸರಕಾರಿ ಸಂಸ್ಥೆಯೊಂದಕ್ಕೆ ಅತಿಥಿಗಳನ್ನು ಆಹ್ವಾನಿಸುವ ವಿಚಾರದಲ್ಲಿ ಹಾಗೂ ನಾಟಕದ ವಿಷಯದ ಆಯ್ಕೆಯಲ್ಲಿ ಇಷ್ಟೊಂದು ರಾದ್ಧಾಂತ ಏಕೆನ್ನುವುದೇ ಅರ್ಥವಾಗದ ವಿಚಾರ. ಇಲ್ಲಿ ಸ್ವಪ್ರತಿಷ್ಠೆಗಳು ಮೇಲುಗೈ ಸಾಧಿಸಿಬಿಟ್ಟರೆ ಸಾಂಸ್ಕೃತಿಕ ವೇದಿಕೆ ಅವಸಾನವಾಗಿಬಿಡುತ್ತದೆ. ಹಾಗೆಯೇ ಇಂಥ ಸಮಾರಂಭಗಳಿಗೆ ಆಹ್ವಾನ ನೀಡುವಾಗ ಇವರು ಎಡದವರು, ಅವರು ಬಲದವರು ಎಂದು ಗುರುತಿಸುವುದೂ ತಪ್ಪಾಗುತ್ತದೆ. ಇದು ಈಗಷ್ಟೇ ಅಲ್ಲ, ಬಹು ಹಿಂದಿನಿಂದಲೂ ನಡೆದುಬಂದಿರುವ ಸಂಪ್ರದಾಯ. ಸಮಷ್ಟಿ ಲೆಕ್ಕಾಚಾರದಲ್ಲಿ ಹೇಳುವುದಾದರೆ ರಂಗಭೂಮಿಯಲ್ಲಿ ಎಲ್ಲರ ಪ್ರಾತಿನಿಧ್ಯ ಮುಖ್ಯವಾಗುತ್ತದೆ. ಹಾಗೆಯೇ ಅತಿಥಿಯಾಗಿ ಬಂದವರು, ತಮ್ಮ ಸಿದ್ಧಾಂತವನ್ನು ಮತ್ತೂಬ್ಬರ ಮೇಲೆ ಹೇರುವುದಕ್ಕಾಗಿಯೇ ಬರುತ್ತಾರೆ ಎಂದು ಅರ್ಥೈಸಿಕೊಳ್ಳುವುದು ಅದಕ್ಕಿಂತ ದೊಡ್ಡ ತಪ್ಪಾಗುತ್ತದೆ.
ಯಾವುದೇ ಚಿಂತನೆಯ ಸರ್ವಾಧಿಕಾರಿ ಪ್ರವೃತ್ತಿಯನ್ನು ರಂಗಭೂಮಿ ಎಂದಿಗೂ ಒಪ್ಪುವುದಿಲ್ಲ. ಅಂತಹ ಸಂದರ್ಭಗಳೆಲ್ಲೆಲ್ಲ ರಂಗಭೂಮಿ ಒಂದು ಪ್ರತಿಭಟನೆಯ ಅಸ್ತ್ರವೇ ಆಗಿದೆ. ರಂಗಕರ್ಮಿಗಳು ಯಾವುದೇ ಸಿದ್ದಾಂತವನ್ನು ಬೇಕಾದರೂ ಅಪ್ಪಿಕೊಳ್ಳಲಿ, ಅದು ಅವರ ವೈಯಕ್ತಿಕ ವಿಚಾರ ಹಾಗೂ ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ಹಾಗೆಂದ ಮಾತ್ರಕ್ಕೆ ಸರಕಾರಿ ಸಂಸ್ಥೆಯಲ್ಲಿ ಈ ಸಿದ್ಧಾಂತಗಳ ಹೇರಿಕೆಗೆ ಇಕ್ಕೆಡೆಯವರೂ ಅವಕಾಶ ಕೊಡಬಾರದು.