Advertisement

ರಂಗಾಯಣದಲ್ಲಿ ಜ.12ರಿಂದ 7 ದಿನ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

05:49 AM Jan 02, 2019 | Team Udayavani |

ಮೈಸೂರು: ಮೈಸೂರು ರಂಗಾಯಣ ಆಯೋಜಿಸುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಜ.12 ರಿಂದ 18ರವರೆಗೆ ರಂಗಾಯಣದಲ್ಲಿ ನಡೆಯಲಿದ್ದು, ನಾಟಕೋತ್ಸವದ ಯಶಸ್ಸಿಗಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಸೂಚನೆ ನೀಡಿದರು.

Advertisement

ಮಂಗಳವಾರ ರಂಗಾಯಣದ ಕುಟೀರದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಪೂರ್ವಸಿದ್ಧತಾ ಸಭೆ ನಡೆಸಿದ ಅವರು, ಬಹುರೂಪಿ ನಾಟಕೋತ್ಸವದಲ್ಲಿ ರಂಗಾಯಣ ಮತ್ತು ಕಲಾಮಂದಿರದಲ್ಲಿ ಬೇರೆ ಬೇರೆ ರಾಜ್ಯಗಳ 9 ಭಾಷೆಯ ನಾಟಕಗಳನ್ನು ಹಾಗೂ ನಾಟಕೋತ್ಸವ ನಡೆಯುವ 2 ದಿನಕ್ಕೊಮ್ಮೆ ಶ್ರೀರಾಮಾಯಣ ದರ್ಶನಂ ನಾಟಕ ಕೂಡ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

ವಸತಿ, ಸಾರಿಗೆ ವ್ಯವಸ್ಥೆ: ಹೊರ ರಾಜ್ಯಗಳಿಂದ ಕಲಾವಿದರು ಆಗಮಿಸುವುದರಿಂದ ಅವರಿಗೆ ಬೇಕಿರುವ ವಸತಿ ಹಾಗೂ ವಸತಿಯ ಸ್ಥಳದಿಂದ ಸಾರಿಗೆ ವ್ಯವಸ್ಥೆ ಮಾಡಬೇಕಿದ್ದು, ಲೋಕೋಪಯೋಗಿ ಇಲಾಖೆ, ಮೈಸೂರು ವಿಶ್ವವಿದ್ಯಾಲಯ, ಮುಕ್ತ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಅತಿಥಿಗೃಹಗಳನ್ನು ಕಾಯ್ದಿರಿಸಲು ಪತ್ರ ಬರೆಯುವಂತೆ ರಂಗಾಯಣದ ಅಧಿಕಾರಿಗಳಿಗೆ ತಿಳಿಸಿದರು.

ಪ್ರಚಾರ ನಡೆಸಿ: ಬಹುರೂಪಿ ನಾಟಕೋತ್ಸವ ನಡೆಯುವ ಸಂದರ್ಭದಲ್ಲಿ ಹೆಚ್ಚಿನ ಸರ್ಕಾರಿ ರಜೆ ಇದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆಯವರು ಹೋಟೆಲ್‌ ಮಾಲಿಕರ ಸಂಘದ ಜೊತೆಗೂಡಿ ಪ್ರಚಾರ ಕಾರ್ಯ ಕೈಗೊಳ್ಳುವಂತೆ ಅವರು ತಿಳಿಸಿದರು.

ಸ್ವತ್ಛತೆ ಕಾಪಾಡಿ: ನಾಟಕೋತ್ಸವ ಸಂದರ್ಭದಲ್ಲಿ ಮೈಸೂರು ಮಹಾ ನಗರಪಾಲಿಕೆ ವತಿಯಿಂದ ನೀರಿನ ಟ್ಯಾಂಕರ್‌, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ, ಸ್ವತ್ಛತಾ ವ್ಯವಸ್ಥೆ, ಪ್ರತಿ ದಿನ ಸೊಳ್ಳೆ ನಿಯಂತ್ರಣ ಔಷಧ ಸಿಂಪಡಿಸುವಂತೆ ಹೇಳಿದರು. ರಂಗಾಯಣದ ಹೊರ ಆವರಣದಲ್ಲಿ ಕುಕ್ಕರಹಳ್ಳಿ ಕೆರೆ ಇದ್ದು, ಈ ಭಾಗದಲ್ಲಿ ಕಸ ವಿಲೇವಾರಿ ಮಾಡದಂತೆ ರಂಗಾಯಣದವರು ನೋಡಿಕೊಳ್ಳಬೇಕು.

Advertisement

ನಿರಂತರವಾಗಿ ವಿದ್ಯುತ್‌ ವ್ಯವಸ್ಥೆ ಒದಗಿಸುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ನಗರಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್‌, ರಂಗಾಯಣ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ ಮತ್ತಿತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next