“ರಂಗಸ್ಥಳ’ ಎಂಬ ಹೊಸ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಡಾ.ರೇವಣ್ಣ ಈ ಸಿನಿಮಾದ ನಿರ್ಮಾಪಕರು.
ಈ ಚಿತ್ರದ ನಿರ್ಮಾಪಕ ಡಾ. ರೇವಣ್ಣ ಮಾತನಾಡಿ, “ಈಗಾಗಲೇ ಚಿತ್ರೀಕರಣ ಶುರುವಾಗಿದೆ. ತಂಡ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದೆ. ನಮ್ಮಿಂದ 150 ಕುಟುಂಬಗಳಿಗೆ ಅನುಕೂಲವಾದರೆ ಸಾಕು. ನಮಗೆ ಲಾಭ ಬೇಡ ಹಾಕಿದ ಹಣ ಬಂದರೆ ಸಾಕು. ನಮ್ಮ ಸಂಸ್ಥೆಯಿಂದ ಹೊಸಬರಿಗೆ ಮುಂದೆಯೂ ಅವಕಾಶ ಕೊಡುವ ಉದ್ದೇಶವಿದೆ. ಹಾಗೆಯೇ ವಾಲಿಬಾಲ್‌ಗೆ ಸಂಬಂಧಪಟ್ಟ ಚಿತ್ರವನ್ನು ನಿರ್ಮಿಸುವ ಆಸೆಯೂ ನನಗಿದೆ’ ಎಂದರು.
ಯುವ ಪ್ರತಿಭೆ ಈಶ್ವರ್ ನಿತಿನ್ ಪ್ರಥಮ ಪ್ರಯತ್ನ ಇದಾಗಿದೆ. “ಇದೊಂದು ಗ್ರಾಮೀಣ ಸೊಗಡಿನ ಕಥೆಯಾಗಿದ್ದು, ನಮ್ಮ ಪುತ್ತೂರು, ಸುಳ್ಯ, ಭಾಗದ ಭಾಷೆ, ಸೊಗಡು, ಆಚಾರ, ವಿಚಾರ, ಕಲೆ, ಬದುಕಿನ ಸುತ್ತ ನೈಜತೆಗೆ ಪೂರಕ ಎನ್ನುವಂತಹ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ರಂಗಸ್ಥಳ ಎಂದರೆ ನನ್ನ ಪ್ರಕಾರ ಒಂದು ವೇದಿಕೆ, ರಂಗ ಕಲೆಗಳ ಪ್ರದರ್ಶನ ನಡೆಯುವ ಸ್ಥಳ. ಅದೇ ರೀತಿ ನನ್ನ ಕಥೆಗೆ ಬರುವ ಪಾತ್ರಧಾರಿಗಳ ಒಬ್ಬೊಬ್ಬರದು ಒಂದೊಂದು ರೀತಿಯ ಮನಸ್ಥಿತಿ. ಅದು ಹೇಗೆ, ಯಾವ ರೀತಿ, ಏನೆಲ್ಲಾ ತೊಂದರೆಗಳನ್ನು ನೀಡುತ್ತದೆ. ಈ ರಂಗ ಮಂಟಪದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದೇನೆ. ಈ ಚಿತ್ರದಲ್ಲಿ ನಾಯಕ ಒಬ್ಬ ಯಕ್ಷಗಾನ ಕಲಾವಿದ ಹಾಗೂ ನಾಯಕಿ ವೈಲ್ಡ್ ಲೈಫ್ ಫೋಟೋಗ್ರಾಫರ್. ಹಾಗೆಯೇ ಮಲಯಾಳಂನ ಖ್ಯಾತ ನಟ ಮನೋಜ್. ಕೆ. ಜಯನ್ ಒಂದು ನೆಗೆಟಿವ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಹಳಷ್ಟು ಹೊಸಬರು ಹಾಗೂ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದು , ಈಗಾಗಲೇ 25 ದಿನಗಳ ಕಾಲ ಚಿತ್ರೀಕರಣ ಮಾಡಿದ್ದು , 40% ಕೆಲಸ ಮುಗಿದಿದೆ’ ಎಂದರು.
ನಾಯಕನಾಗಿ ಅಭಿನಯಿಸುತ್ತಿರುವ ವಿಲೋಕ್ ರಾಜ್ ಚಿತ್ರರಂಗದಲ್ಲಿ ಬಹಳಷ್ಟು ವರ್ಷ ಕೆಲಸ ಮಾಡಿದ್ದು, ಸುಮಾರು 9 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗಿರ್ಕಿ ಚಿತ್ರದ ನಂತರ ಈ “ರಂಗಸ್ಥಳ’ ವಿಲೋಕ್ ಚಿತ್ರ ಜೀವನಕ್ಕೆ ಒಂದು ತಿರುವು ನೀಡುವಂತಹ ಸಿನಿಮಾ ವಾಗಲಿದೆಯಂತೆ. ಈ ಚಿತ್ರದಲ್ಲಿ ಒಬ್ಬ ಯಕ್ಷಗಾನ ಕಲಾವಿದನಾಗಿ ಅಭಿನಯಿಸುತ್ತಿದ್ದು, ಇದಕ್ಕಾಗಿ ಮೂರು ತಿಂಗಳ ತರಬೇತಿಯನ್ನು ಕೂಡ ಪಡೆದಿದ್ದಾರಂತೆ. ಹಾಗೆಯೇ ಭಾಷೆಯ ವಿಚಾರವಾಗಿಯೂ ಬಹಳ ಸೂಕ್ಷ್ಮವಾಗಿ ಗಮನಹರಿಸುತ್ತಿದ್ದು , ನಿರ್ದೇಶಕರು ಹೇಳಿದಂತೆ ಬಹಳ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ನಾವು ಮೊದಲು ಸಣ್ಣ ಬಜೆಟ್ ಪ್ಲಾನ್ ಮಾಡಿಕೊಂಡಿದ್ದೇವು, ಆದರೆ ನಿರ್ಮಾಪಕರ ಪುತ್ರ ವಿನೋದ್ ಸಹಕಾರದೊಂದಿಗೆ ಈ ಚಿತ್ರ ಬೇರೆದೇ ರೂಪ ಪಡೆಯುತ್ತಿದೆ ಎನ್ನುವುದು ಅವರ ಮಾತು.
ಇನ್ನು ಮಂಗಳೂರು ಮೂಲದ ಬೆಡಗಿ ಶಿಲ್ಪಾ ಕಾಮತ್ ಶಾರ್ಟ್ ಮೂವೀಸ್ ನಲ್ಲಿ ಅಭಿನಯಿಸಿದ್ದು, ಆಡಿಷನ್ ಮೂಲಕ ಈ ಚಿತ್ರ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ
ಚಿತ್ ದಲ್ಲಿ ಒಬ್ಬ ವೈಲ್ಡ್ ಲೈಫ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಮನೋಜ್ ಜೆಬೆ ಎಂಬ ಮಲಯಾಳಂ ಪ್ರತಿಭೆ ಕಾಮಿಡಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರಕ್ಕೆ ಎನಾಷ್ ಒಲಿವೇರ ಛಾಯಾಗ್ರಹಣ ಮಾಡುತ್ತಿದ್ದು, ಜ್ಯೂಡಾ ಸ್ಯಾಂಡಿ ಆರು ಹಾಡುಗಳಿಗೆ ಸಂಗೀತವನ್ನು ನೀಡುತ್ತಿದ್ದು, ಪ್ರಭಾಕರನ್ ರಾಮು ಕಲಾ ನಿರ್ದೇಶನ ಈ ಚಿತ್ರಕ್ಕೆ ಇದೆ.