Advertisement

ಕೊರೊನಾ ಭೀತಿ: ಅಬ್ಬರವಿಲ್ಲದ ರಂಗಪಂಚಮಿ

03:45 PM Mar 15, 2020 | Suhan S |

ಲಕ್ಷ್ಮೇಶ್ವರ: ಕೊರೊನಾ ವೈರಸ್‌ ಭೀತಿಯಿಂದ ತಾಲೂಕಾಡಳಿತ ರಂಗಪಂಚಮಿ ರದ್ದು ಘೋಷಿಸಿರುವ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದಲ್ಲಿ ರಂಗಪಂಚಮಿ ಆಚರಣೆ ಯಾವುದೇ ಸದ್ದು ಗದ್ದಲ, ಅಬ್ಬರವಿಲ್ಲದೇ ಸರಳವಾಗಿ ನೆರವೇರಿತು. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಶಾಲಾ-ಕಾಲೇಜಿಗೆ ರಜೆ ನೀಡಿದ್ದರಿಂದ ಚಿಣ್ಣರು ಬಣ್ಣವಾಡಿ ಕುಣಿದು ಕುಪ್ಪಳಿಸಿದರು.

Advertisement

ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ರತಿ ಮನ್ಮಥರ ಮತ್ತು ಹುಲಗಾಮನ ಮುಂದೆ ಪುಟ್ಟ ಮಕ್ಕಳು ಬಣ್ಣದ ನೀರು ತುಂಬಿದ್ದ ಪಿಚಕಾರಿ ಮತ್ತು ಪ್ಲಾಸ್ಟಿಕ್‌ ಬಾಟಲಿಗಳನ್ನು ಹಿಡಿದು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಅಣುಕು ಶವಯಾತ್ರೆ, ಆಕರ್ಷಕ ಉಡುಗೆ ತೊಟ್ಟು ಹಲಗೆಯ ತಾಳಕ್ಕೆ ತಕ್ಕಂತೆ ಕುಣಿಯುವುದು, ಬೈಕ್‌ನಲ್ಲಿ ಗಲ್ಲಿ ಸುತ್ತಿ ರಂಗಿನಾಟದಲ್ಲಿ ಮಿಂದೆದ್ದ ದೃಶ್ಯಗಳು ಕಂಡು ಬಂದರೂ ಪ್ರತಿ ವರ್ಷದ ಜೋಶ್‌ ಮಾತ್ರ ಮರೆಯಾಗಿತ್ತು. ಪಟ್ಟಣದ ಸೋಮೇಶ್ವರ ಶ್ರಮದಾನ ಸೇವಾ ಸಮಿತಿಯವರು 20 ಅಡಿ ಎತ್ತರದ ಹುಲಗಾಮನನ್ನು ನಿಲ್ಲಿಸಿದ್ದರೂ ಅಲ್ಲಿ ಪ್ರತಿ ವರ್ಷದಂತೆ ಸಾಮೂಹಿಕ ಪಾಲ್ಗೊಳ್ಳುವಿಕೆಯೊಂದಿಗಿನ ರಂಗಿನಾಟದ  ವಿಶೇಷತೆ ಮರೆಯಾಗಿತ್ತು.

ಹಳ್ಳದ ಕೇರಿ ಓಣಿಯ ಯುವಕ ಸಂಘದವರು ಮತ್ತು ಪೇಟೆ ಹನಮಂತ ದೇವಸ್ಥಾನದ ಯುವಕ ಸಂಘದವರು ಎಂದಿನಂತೆ ಟ್ರ್ಯಾಕ್ಟರ್‌ನಲ್ಲಿ ರತಿ-ಕಾಮಣ್ಣನ ಮೂರ್ತಿಯನ್ನು ಸಿಂಗರಿಸಿ ಹಲಗೆ ಹಾಗೂ ಧ್ವನಿವರ್ಧಕ ಸಂಗೀತದ ಅಬ್ಬರಕ್ಕೆ ಕುಣಿದು ಕುಪ್ಪಳಿಸುತ್ತಾ ಸಾಂಪ್ರದಾಯಿಕ ರಂಗಿನ ಹೋಳಿ ಹಬ್ಬಕ್ಕೆ ಮೆರಗು ತಂದರು. ಮಧ್ಯಾಹ್ನ 2ರ ಹೊತ್ತಿಗಾಗಲೆ ಬಹುತೇಕ ಬಣ್ಣದ ಹಬ್ಬದ ಸಂಭ್ರಮ ಮಂಕಾಗಿದ್ದು, ಕೆಲವೇ ಜನ ಯುವಕರು, ಮಕ್ಕಳು ಸೇರಿ ತಮ್ಮ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಿದ್ದ ರತಿಕಾಮನ ಮೂರ್ತಿ ದಹನ ಮಾಡಿ ರಂಗಿನಾಟಕ್ಕೆ ತೆರೆ ಎಳೆದರು.

ಕೊರೊನಾ ವೈರಸ್‌ನ ಭೀಕರತೆಗೆ ಮುಂಜಾಗೃತ ಕ್ರಮವಾಗಿ ತಹಶೀಲ್ದಾರರು ಪಟ್ಟಣದಲ್ಲಿ ಸಾರ್ವಜನಿಕ ಓಕುಳಿ ರದ್ದು ಪಡಿಸಲಾಗಿದೆ ಎಂದು ಹೇಳಿದ್ದರಿಂದ ಪಾಲಕರಿಗೆ ಮಕ್ಕಳಿಗೆ ಬಣ್ಣದ ಬದಲಾಗಿ ಅರಿಷಿಣ ಪುಡಿ ಕೊಟ್ಟು ಕಳುಹಿಸಿದ್ದು ನೈಸರ್ಗಿಕ ರಗಿನಾಟಕ್ಕೆ ಮುನ್ನುಡಿಯಾಗಿತ್ತು. ಇನ್ನು ಅನೇಕರು ಹಬ್ಬದ ಗೊಡವೆಯೇ ಬೇಡ ಎಂದು ಒಂದು ದಿನ ಮೊದಲೇ ಪ್ರವಾಸ ಕೈಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next