Advertisement

Ranganayaka Movie Review; ಗುರುವಿನ ಆದಿ ಪುರಾಣ

12:16 PM Mar 09, 2024 | Team Udayavani |

ಸಿನಿಮಾ ಎಂದ ಮೇಲೆ ಅಲ್ಲೊಂದಿಷ್ಟು ಲಾಜಿಕ್‌ ಇರಬೇಕು, ಕಥೆಯ ಒಂದು ಸಣ್ಣ ಎಳೆಯಾದರೂ ಇರಬೇಕು, ನಾಯಕನಿಗಾಗಿಯೇ ಪ್ರಮುಖ ದೃಶ್ಯವಿರಬೇಕು, ನಾಯಕಿ ಸೇರಿದಂತೆ ಇತರ ಪ್ರಮುಖ ಪಾತ್ರಗಳಿಗೆ ಒಂದಷ್ಟು ಪ್ರಾಮುಖ್ಯತೆ ಇರಲೇಬೇಕು… ಹೀಗೆಂದುಕೊಂಡು ಸಿನಿಮಾ ಮಾಡುವ ಅದೆಷ್ಟೋ ನಿರ್ದೇಶಕರ ಮಧ್ಯೆ ನಿರ್ದೇಶಕ ಗುರುಪ್ರಸಾದ್‌ ಮಾತ್ರ “ರಂಗನಾಯಕ’ ಚಿತ್ರದಲ್ಲಿ ಅವೆಲ್ಲವನ್ನು ಪಕ್ಕಕ್ಕೇ ಸರಿಸಿ “ಭಿನ್ನ’ವಾಗಿ ಯೋಚಿಸಿದ್ದಾರೆ.

Advertisement

“ನಾನೊಬ್ಬ ಇದ್ದರೆ ಸಾಕು, ಎಲ್ಲವೂ, ಎಲ್ಲರೂ ಇದ್ದಂತೆ’ ಎಂಬ ಭಾವದೊಂದಿಗೆ ಸಿನಿಮಾ ಪೂರ್ತಿ ಆವರಿಸಿಕೊಂಡು ಬಿಟ್ಟಿದ್ದಾರೆ ಗುರು. ಹಾಗಾದರೆ, ಜಗ್ಗೇಶ್‌ ಏನು? ಎಂಬ ಪ್ರಶ್ನೆ ಬರಬಹುದು. ಜಗ್ಗೇಶ್‌ ಅವರಿಲ್ಲಿ ಗೆಸ್ಟ್‌ ಅಪಿಯರೆನ್ಸ್‌ಗೆ ಸೀಮಿತ! ಸಿನಿಮಾ ನೋಡಿ ಹೊರಬರುವ ಪ್ರೇಕ್ಷಕರಲ್ಲಿ ಹೀಗೊಂದು ಭಾವ ಮೂಡದೇ ಇರದು.

ಜನ “ಸಂಭಾಷಣೆಗಷ್ಟೇ’ ಖುಷಿಪಡುತ್ತಾರೆ ಎಂಬ ನಿರ್ದೇಶಕ ಗುರುಪ್ರಸಾದ್‌ ಅವರ ನಂಬಿಕೆಯ “ಫ‌ಲ’ವೋ ಏನೋ, ಅವರಿಲ್ಲಿ ಕಥೆ, ಚಿತ್ರಕಥೆಗಿಂತ ಮಾತಿಗಷ್ಟೇ ಮಹತ್ವ ನೀಡಿದ್ದಾರೆ. ಆ ಸಂಭಾಷಣೆಯಲ್ಲಿ ಪ್ರೇಕ್ಷಕನಿಗಿಂತ ಹೆಚ್ಚು ಅವರೇ ಖುಷಿಕಂಡಿದ್ದಾರೆ ಕೂಡಾ. ಅದು ತೆರೆಮೇಲೆ “ಎದ್ದು-ಬಿದ್ದು’ ಕಾಣುತ್ತದೆ. ಸಿನಿಮಾ ಪ್ರಮೋಶನ್‌ ವೇಳೆ “ರಂಗನಾಯಕ’ ಚಿತ್ರದ ಬಗ್ಗೆ ಮಾತನಾಡುತ್ತಾ ಕೆಟ್ಟ ಸಿನಿಮಾಗಳನ್ನು ನೋಡಿ ಹತಾಶನಾದ ಪ್ರೇಕ್ಷಕನ ಮನದ ಮಾತಿದು ಎಂದಿದ್ದರು. ಆದರೆ, ಅಂತಹ ಪ್ರೇಕ್ಷಕ ಮತ್ತೆ ಹತಾಶನಾಗಲು ಬಯಸುವುದಿಲ್ಲ ಎಂಬ ಯೋಚನೆ ಗುರುಪ್ರಸಾದ್‌ ಅವರಿಗೆ ಬಂದಂತಿಲ್ಲ. ಅದೇ ಕಾರಣದಿಂದ “ರಂಗನಾಯಕ’ ಒಂದು ನಿರ್ದಿಷ್ಟ “ಫ್ರೇಮ್‌’ಗೆ ಸಿಗುವುದೇ ಇಲ್ಲ. ಇಲ್ಲಿ ಗುರು ಮಾತೇ “ಪ್ರಸಾದ’. ಪ್ರೇಕ್ಷಕ ಅದನ್ನು ಕಣ್ಣಿಗೊತ್ತಿಗೊಂಡು “ಎದೆ’ಗೆ ಹಾಕಿಕೊಂಡರೆ ಸಿನಿಮಾ ಖುಷಿಕೊಡಬಹುದು. ಖ್ಯಾತ ನಿರ್ದೇಶಕನೊಬ್ಬ ಪೂರ್ವಜನ್ಮದ ಕಾರ್ಯಕ್ರಮಕ್ಕೆ ಬಂದು ತಾನು ಮೊಟ್ಟ ಮೊದಲ ಕನ್ನಡ ಸಿನಿಮಾ ಮಾಡಲು ಹೊರಟಾಗ ಏನಾಯಿತು ಎಂದು ಹೇಳುವುದೇ ಚಿತ್ರದ ಒನ್‌ಲೈನ್‌. ಸಿನಿಮಾ ಆರಂಭವಾಗಿ ಇಂಟರ್‌ವಲ್‌ ಬರುವವರೆಗೆ ಗುರುಪ್ರಸಾದ್‌ ಅವರದ್ದೇ “ಆಟ’.

ತಮ್ಮ ಬರವಣಿಗೆಯ ಪಾಂಡಿತ್ಯ, ವೈಯಕ್ತಿಕ ಸಿಟ್ಟನ್ನು ಪ್ರದರ್ಶಿಸಲು ಗುರುಪ್ರಸಾದ್‌ ಇಡೀ ಸಿನಿಮಾವನ್ನು ದುಡಿಸಿ, “ದಣಿಸಿ’ದ್ದಾರೆ. ಅಲ್ಲಲ್ಲಿ ಬರುವ ಜಗ್ಗೇಶ್‌ ಅವರು ಈ ಸಿನಿಮಾದ “ಜೀವಾಳ’. ಹಾಗಂತ ಇಲ್ಲಿ ಅವರಿಗಾಗಲೀ, ನಾಯಕಿಗಾಗಲೀ ಅಥವಾ ಇತರ ಪಾತ್ರಗಳಿಗಾಗಲೀ ಒಂದೇ ಒಂದು ಗುರುತರವಾದ ದೃಶ್ಯವಿಲ್ಲ. ಅದೇ ಕಾಮಿಡಿ, ಅದೇ “ಹಾವ-ಭಾವ’ ಗಳಿಗಷ್ಟೇ ಜಗ್ಗೇಶ್‌ ಅವರನ್ನು ಸೀಮಿತಗೊಳಿಸಲಾಗಿದೆ. ಸಿನಿಮಾದಲ್ಲಿ ಕನ್ನಡತನವಿದೆ, ಕನ್ನಡದ ಮೇಲಿನ ಪ್ರೀತಿ ಇದೆ, ಕನ್ನಡಕ್ಕೆ ಎಲ್ಲರೂ ಜೈ ಅನ್ನಬೇಕು ಎಂಬ ಕಾಳಜಿ ಇದೆ. ಆದರೆ, ಇದನ್ನು ಕಟ್ಟಿಕೊಟ್ಟ ರೀತಿ ಮಾತ್ರ ಚಿತ್ರದ “ಮೂಲ ಆಶಯ’ವೇ ಕಳೆದು ಹೋಗುವಂತಿದೆ.

ನಾಯಕ ಜಗ್ಗೇಶ್‌ ಆಗಾಗ ಬಂದು ನಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, 40 ವರ್ಷಗಳಿಂದ ಕನ್ನಡ ಪ್ರೇಕ್ಷಕರನ್ನು ರಂಜಿಸುತ್ತಾ ಬಂದ ಅಪ್ರತಿಮ ಕಲಾವಿದನಿಂದ ಮತ್ತೆ ಹೊಸದೇನನ್ನೋ ಮಾಡಿಸುವ ಅವಕಾಶ ನಿರ್ದೇಶಕರಿಗಿತ್ತು. ಇನ್ನು, ಸಿನಿಮಾ ತುಂಬಾ “ಆವರಿಸಿಕೊಂಡಿರುವ’ ಗುರುಪ್ರಸಾದ್‌ ಮಾತಲ್ಲೇ “ರಂಜಿಸುತ್ತಾ’ ಕ್ಲೋಸಫ್ ಫ್ರೇಮ್‌ನಲ್ಲೇ ಖುಷಿಕಂಡಿದ್ದಾರೆ. ರಚಿತಾ ಮಹಾಲಕ್ಷ್ಮೀ ಜಗ್ಗೇಶ್‌ ಜೋಡಿಯಾಗಿ ನಟಿಸಿದ್ದಾರೆ. ಚಿತ್ರದ ಹಾಡು, ಹಿನ್ನೆಲೆ ಸಂಗೀತದಲ್ಲಿ ಅನೂಪ್‌ ಸೀಳೀನ್‌ ಗಮನ ಸೆಳೆಯುತ್ತಾರೆ.

Advertisement

ರವಿಪ್ರಕಾಶ್ ರೈ

Advertisement

Udayavani is now on Telegram. Click here to join our channel and stay updated with the latest news.

Next