Advertisement

ರಂಗನತಿಟ್ಟು ಪಕ್ಷಿಧಾಮಕ್ಕೆ 4.07 ಕೋಟಿ ಆದಾಯ

02:38 PM May 01, 2019 | Team Udayavani |

ಶ್ರೀರಂಗಪಟ್ಟಣ: ಸದಾ ಪಕ್ಷಿಗಳ ಕಲರವ ಕೇಳಿಬರುವ ರಂಗನತಿಟ್ಟು ಪಕ್ಷಿಧಾಮ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿಯಾಗಿರುವುದಲ್ಲದೆ, ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಆದಾಯ ಮೂಲವನ್ನೂ ಸೃಷ್ಟಿಸಿಕೊಂಡಿದೆ.

Advertisement

ಕಳೆದ ವರ್ಷ 2017-18ನೇ ಸಾಲಿನಲ್ಲಿ ರಂಗನತಿಟ್ಟು ಪಕ್ಷಿಧಾಮ ಪ್ರವಾಸಿಗರ ಆಗಮನದಿಂದ 3.67 ಕೋಟಿ ರೂ. ಆದಾಯ ಗಳಿಸಿತ್ತು. ಆ ವರ್ಷ 2.50 ಲಕ್ಷ ಜನ ಪ್ರವಾಸಿಗರು ರಂಗನತಿಟ್ಟು ವೀಕ್ಷಣೆಗೆ ಆಗಮಿಸಿದ್ದರು. ಪ್ರಸ್ತುತ 2018-19ನೇ ಸಾಲಿನಲ್ಲಿ 3.27 ಲಕ್ಷ ಪ್ರವಾಸಿಗರ ಭೇಟಿ ನೀಡಿದ್ದು, 4.07 ಕೋಟಿ ರೂ ಆದಾಯ ಗಳಿಸಿದೆ.

ಪ್ರವಾಸಿಗರ ಸಂಖ್ಯೆ ಹೆಚ್ಚಳ: ಪ್ರವಾಸಿಗರ ಸಂಖ್ಯೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚುವರಿಯಾಗಿ 77 ಸಾವಿರ ಪ್ರವಾಸಿಗರು ರಂಗನತಿಟ್ಟು ಪಕ್ಷಿಧಾಮಕ್ಕೆ ಭೇಟಿ ನೀಡಿದ್ದಾರೆ. ಇದರ ಪರಿಣಾಮ ಆದಾಯದ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ. ದೇಶದ ಪ್ರವಾಸಿಗರಲ್ಲದೆ 22 ಸಾವಿರ ವಿದೇಶಿಯರೂ ಭೇಟಿ ನೀಡಿ ಪಕ್ಷಿಧಾಮ ವೀಕ್ಷಿಸಿದ್ದಾರೆ.

ದ್ವೀಪಗಳ ದುರಸ್ತಿ: ವರ್ಷದಿಂದ ವರ್ಷಕ್ಕೆ ರಂಗನತಿಟ್ಟು ಪಕ್ಷಿಧಾಮ ತನ್ನ ಆದಾಯ ಹಾಗೂ ಪ್ರವಾಸಿಗರನ್ನು ಹೆಚ್ಚಿಸಿಕೊಳ್ಳತೊಡಗಿದೆ. ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮ ಕಳೆದ ವರ್ಷ ಕಾವೇರಿ ನೀರು ಹೆಚ್ಚಾಗಿ ಹರಿದು ಪಕ್ಷಿಗಳು ವಾಸಿಸುವ ದ್ವೀಪ(ಐಲ್ಯಾಂಡ್‌) ನೀರಿನಲ್ಲಿ ಕೊಚ್ಚಿಹೋಗಿತ್ತು. ರಭಸದಿಂದ ನುಗ್ಗಿಬಂದ ನೀರಿನಿಂದ ಹಾನಿಯಾಗಿದ್ದ ದ್ವೀಪಗಳನ್ನು ದುರಸ್ತಿಪಡಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈಗ ಅವೆಲ್ಲವೂ ಸಂಪೂರ್ಣ ದುರಸ್ತಿಯಾಗಿ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿವೆ.

ಪಕ್ಷಿಗಳ ಸಂಖ್ಯೆಯೂ ಹೆಚ್ಚಳ: ಎತ್ತ ನೋಡಿದರೂ ಪಕ್ಷಿಗಳ ಕಲರವ ಕೇಳಿ ಬರುತ್ತಿವೆ. ಜನವರಿಯಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿರುವ ಪಕ್ಷಿಗಳು, ಈಗ ಸ್ವಚ್ಛಂದವಾಗಿ ಹಾರಾಡುತ್ತಿವೆ. ಇದರಿಂದ ಪಕ್ಷಿಗಳ ಸಂಖ್ಯೆ ರಂಗನತಿಟ್ಟಿನಲ್ಲಿ ಗಣನೀಯವಾಗಿ ಹೆಚ್ಚಳವಾಗಿವೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಜೊತೆಗೆ ಬೇಸಿಗೆ ರಜೆ ಪ್ರವಾಸಿಗರ ಆಗಮನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

Advertisement

ಅಭಿವೃದ್ಧಿ ಕಾಮಗಾರಿ: ರಂಗನತಿಟ್ಟು ಪಕ್ಷಿಧಾಮದಲ್ಲಿ 35 ದ್ವೀಪಗಳಿವೆ. ಹಾನಿಗೊಳಗಾಗಿದ್ದ ದ್ವೀಪಗಳಲ್ಲಿ ಮರಳು ಚೀಲಗಳಿಂದ ಕಟ್ಟೆ ಮಾಡಿ ದ್ವೀಪಗಳ ಸುತ್ತಲೂ ಇಟ್ಟು ಸಮತಟ್ಟುಗೊಳಿಸಲಾಗಿದೆ. ಇದರಿಂದ ಪ್ರವಾಸಿಗರ ವಿಹಾರಕ್ಕೆ ಅನುಕೂಲವಾಗಿದೆ. ಇದರಿಂದ ಪೋಷಕರು ಮಕ್ಕಳೊಂದಿಗೆ ಪೋಷಕರು ಪಕ್ಷಿಧಾಮಕ್ಕೆ ಆಗಮಿಸಿ ಇಲ್ಲಿನ ಸೌಂದರ್ಯ ವೀಕ್ಷಣೆ ಮಾಡುತ್ತಿದ್ದಾರೆ. ಪ್ರವಾಸಿಗರು ಕುಳಿತುಕೊಳ್ಳಲು ವಿಶಾಲವಾದ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ.

ಶುಲ್ಕ ಹೆಚ್ಚಳ: ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವೇಶ ಶುಲ್ಕ ಹಾಗೂ ದೋಣಿ ವಿಹಾರದ ಶುಲ್ಕ ಕಳೆದ ಬಾರಿಗಿಂತ ಈ ಬಾರಿ ದರ ಏರಿಕೆ ಮಾಡಲಾಗಿದೆ. 60 ರೂ. ಇದ್ದ ಪ್ರವೇಶ ಶುಲ್ಕವನ್ನು 70 ರೂ.ಗಳಿಗೆ ಏರಿಸಲಾಗಿದೆ. ವಿದೇಶಿಯರಿಗೆ 300 ರೂ. ಇದ್ದ ಪ್ರವೇಶ ಶುಲ್ಕ 400 ರೂ.ಗೆ ಹೆಚ್ಚಿಸಿದೆ. ವಿಶೇಷ ದೋಣಿ ವಿಹಾರಕ್ಕೆ 1000 ರೂ ನಿಂದ 1500 ರೂ.ಗಳಿಗೆ ಶುಲ್ಕ ಹೆಚ್ಚಳ ಮಾಡಿದ್ದರೆ, ವಿದೇಶಿಯರಿಗೂ 2000 ರೂ.ನಿಂದ 3000 ಸಾವಿರ ರೂ.ಗೆ ಏರಿಕೆ ಮಾಡಿದೆ.

ಲೋಕಸಭೆ ಚುನಾವಣೆ ನಿಗದಿಯಾದ ಸಂಧರ್ಭದಲ್ಲಿ ಒಂದು ತಿಂಗಳಿಂದ ಎಲ್ಲಾ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದ್ದುವು. ಈಗ ರಾಜ್ಯ ಮತ್ತಿತತರ ಪ್ರದೇಶದಲ್ಲಿ ಚುನಾವಣೆಗಳು ಮುಗಿದಿರುವುದರಿಂದ ಪೋಷಕರೊಂದಿಗೆ ಮಕ್ಕಳು ಮೈಸೂರು ಭಾಗದ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಕಂಡು ಬಂದಿದೆ. ಇನ್ನು ಎರಡು ತಿಂಗಳು ರಂಗನತಿಟ್ಟು ಪರಿಸರ ಹಾಗೂ ಪಕ್ಷಿಪ್ರಿಯರಿಗೆ ಪಕ್ಷಿಗಳ ಕಲರವ ಮುದ ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next