Advertisement

ಬೆಂಗಳೂರಿನಲ್ಲಿ ವರ್ಷಪೂರ್ತಿ ಸಾಂಸ್ಕೃತಿಕ ಚಟುವಟಿಕೆ ಅನಾವರಣಕ್ಕಾಗಿ ರಂಗಮಂದಿರ ನಿರ್ಮಾಣ

04:07 PM Sep 09, 2020 | sudhir |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವರ್ಷಪೂರ್ತಿ ಸಾಂಸ್ಕತಿಕ ಚಟುವಟಿಕೆಗಳು ನಡೆಯಲು ಅನುಕೂಲವಾಗುವಂತೆ ನಗರದ ನಾಲ್ಕು ಕಡೆ ನಿರ್ಮಿಸಲು ಉದ್ದೇಶಿಸಿರುವ ರವೀಂದ್ರ ಕಲಾಕ್ಷೇತ್ರ ಮಾದರಿಯ ರಂಗಮಂದಿರಗಳಿಗೆ ಒಂದು ವಾರದೊಳಗೆ ನಿವೇಶನ ಗುರುತಿಸಿ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ರಂಗಮಂದಿರ ನಿರ್ಮಾಣ ಸಂಬಂಧ ಇಂದು ವಿಧಾನಸೌಧದಲ್ಲಿ ಬಿಡಿಎ, ಬಿಬಿಎಂಪಿ, ಬೆಂಗಳೂರು ನಗರ, ಬೆ.ಗ್ರಾಮಾಂತರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ ರಂಗಮಂದಿರ ನಿರ್ಮಿಸಲು ಸೂಕ್ತ ಸ್ಥಳದಲ್ಲಿ ಒಂದು ವಾರದೊಳಗೆ ನಿವೇಶನ ಗುರುತಿಸಿ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈಗಾಗಲೇ ವಿಶ್ವೇಶ್ವರಯ್ಯ ಲೇಔಟ್‍ನಲ್ಲಿ ಎರಡೂವರೆ ಎಕರೆ, ದೇವನಹಳ್ಳಿಯ ಕಸಬಾ ಹೋಬಳಿ, ಕುನ್ನಹಳ್ಳಿ ಬಳಿ ಐದು ಎಕರೆ, ಕೆಐಎಡಿಬಿ, ಕೆಹೆಚ್‍ಬಿಯಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟ ಸಿಎ ನಿವೇಶನಗಳನ್ನು ರಂಗಮಂದಿರ ನಿರ್ಮಾಣಕ್ಕೆ ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನಗರದಲ್ಲಿ ಒತ್ತುವರಿ ಮಾಡಿಕೊಂಡಿರುವ ಹಾಗೂ ಕಾನೂನು ತೊಡಕಿಲ್ಲದ ನಿವೇಶನವನ್ನು ಗುರುತಿಸಬೇಕು ಹಾಗೂ ಒಂದು ವಾರದೊಳಗೆ ಹಸ್ತಾಂತರ ಪ್ರಕ್ರಿಯೆ ಮುಗಿಯಬೇಕು. ವಿಳಂಬ ಮಾಡಿದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಸಿ.ಟಿ.ರವಿ ಎಚ್ಚರಿಕೆ ನೀಡಿದರು.

ಕಳೆದ ಬಜೆಟ್‍ನಲ್ಲಿ ನಾಡುನುಡಿ, ಸಂಸ್ಕೃತಿ, ಭಾಷೆ, ಜನಪದ ಬೆಳವಣಿಗೆಗಳಿಗೆ ಅನುಕೂಲವಾಗುವಂತೆ ನಗರದ ನಾಲ್ಕು ದಿಕ್ಕಿನಲ್ಲಿ ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ರಂಗಮಂದಿರ ನಿರ್ಮಿಸಲು 60 ಕೋಟಿ ಹಣವನ್ನು ಘೋಷಿಸಲಾಗಿದೆ ಎಂದು ಹೇಳಿದರು.

Advertisement

ನಾಲ್ಕು ದಿಕ್ಕುಗಳಲ್ಲಿ ರಂಗಮಂದಿರವನ್ನು ನಿರ್ಮಿಸಲು ಸಮಗ್ರ ಯೋಜನಾ ವರದಿ(ಡಿಪಿಎಆರ್)ಯನ್ನು ಸಿದ್ದಪಡಿಸಬೇಕು, ಎರಡು ಎಕರೆಯಿಂದ ಐದು ಎಕರೆಗಳವರೆಗಿನ ಸ್ಥಳದಲ್ಲಿ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಈಗಾಗಲೇ ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ವಿಳಂಬವಾಗಿದೆ. ಪುನಃ ಕಾರಣಗಳನ್ನು ನೀಡದೇ ಆದಷ್ಟು ಶೀಘ್ರ ಕಾಮಗಾರಿಯನ್ನು ಆರಂಭಿಸಿ ಈ ವರ್ಷದ ಅಂತ್ಯದೊಳಗೆ ರಂಗಮಂದಿರಗಳು ಚಟುವಟಿಕೆಗಳನ್ನು ಆರಂಭಿಸಬೇಕು ಎಂದು ಹೇಳಿದ್ದಾರೆ.

ಅಧಿಕಾರಿಗಳು ಸಬೂಬು ಹೇಳದೆ, ಎಷ್ಟು ಸಾಧ್ಯವೋ ಅಷ್ಟು ಕಟ್ಟಡ ಪ್ರಾರಂಭಕ್ಕೆ ನೀಲನಕ್ಷೆ ಸಿದ್ದಪಡಿಸಬೇಕೆಂದು ಸಚಿವ ರವಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ರಶ್ಮಿ, ಬಿಡಿಎ ಆಯುಕ್ತ ಮಹಾದೇವು, ಬಿಬಿಎಂಪಿ ಪ್ರತಿನಿಧಿ, ಬೆಂಗಳೂರು ನಗರ, ಬೆ.ಗ್ರಾಮಾಂತರ ಅಪಾರ ಜಿಲ್ಲಾಧಿಕಾರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಹಾಗೂ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಮಹತ್ವದ ಯೋಜನೆ:
ಬೆಂಗಳೂರು ನಗರ, ಬೆ.ಗ್ರಾಮಾಂತರ ಜಿಲ್ಲೆಯ ಸುತ್ತಮುತ್ತ ವರ್ಷಪೂರ್ತಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಬೇಕೆಂಬುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉದ್ದೇಶವಾಗಿತ್ತು ಎಂದರು.

ರವೀಂದ್ರ ಕಲಾಕ್ಷೇತ್ರ ಮಾದರಿಯಂತೆ ನಗರದ ನಾಲ್ಕೂ ದಿಕ್ಕುಗಳಲ್ಲಿ ರಂಗಮಂದಿರ ನಿರ್ಮಿಸಿ ಸಾಂಸ್ಕೃತಿಕ ಚಟುವಟಿಕೆಗಳನ್ನು ವರ್ಷಪೂರ್ತಿ ನಡೆಸಬೇಕೆಂಬುದು ಹಲವು ದಿನಗಳ ಕನಸಾಗಿತ್ತು.

ಈ ಹಿಂದೆಯೇ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ ಸ್ಥಳ ಗುರುತಿಸುವಿಕೆ ವಿಳಂಬ, ಕಳೆದ 6 ತಿಂಗಳಿನಿಂದ ಕೋವಿಡ್‍ನಿಂದಾಗಿ ಯಾವುದೇ ಕಾಮಗಾರಿಗಳು ಆರಂಭವಾಗದೆ ವಿಳಂಬವಾಗಿತ್ತು.

ಇದೀಗ ಇಲಾಖೆಗಳ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನ ಮಾಡುವಂತೆ ಗಮನಹರಿಸಿರುವ ಸಚಿವ ರವಿ ಅವರು, ಮೊದಲ ಹಂತದಲ್ಲಿ 4 ರಂಗಮಂದಿರಗಳ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ನಿಗದಿಪಡಿಸಿರುವ ಬಾಡಿಗೆ ದುಬಾರಿಯಾಗಿದೆ ಎಂಬ ಕೊರಗು ಕೇಳಿಬಂದಿತ್ತು. ಅಲ್ಲದೆ ಬೇರೆ ಬೇರೆ ಭಾಗಗಳಿಂದ ಬರಲು ಸಂಚಾರ ದಟ್ಟಣೆಯಿಂದಾಗಿ ಇಲ್ಲಿಗೆ ಬರಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದರು.
ಇವೆಲ್ಲವನ್ನೂ ಪರಿಗಣಿಸಿಯೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಮುತ್ತಲ ಭಾಗಗಳಿಗೆ ಅನುಕೂಲವಾಗುವಂತೆ 4 ರಂಗಮಂದಿರಗಳು ತಲೆ ಎತ್ತಲಿವೆ.

Advertisement

Udayavani is now on Telegram. Click here to join our channel and stay updated with the latest news.

Next