ಮುಂಬಯಿ: ರಂಗ ಚಾವಡಿ ಸಾಹಿತ್ಯಿಕ-ಸಾಂಸ್ಕೃತಿಕ ಸಂಘಟನೆ ಕಳೆದ 20 ವರ್ಷಗಳಲ್ಲಿ ಉತ್ತಮ ಕಲಾ ಸೇವೆ ಮಾಡಿದೆ. ಬಹಳಷ್ಟು ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ರಂಗ ಚಾವಡಿಯ ಕಾರ್ಯ ಶ್ಲಾಘನೀಯ. ಸಮಾಜದಲ್ಲಿ ಉತ್ತಮ ಸೇವೆ ಮಾಡುವ ಸಾಧಕರು ಬಹಳಷ್ಟಿದ್ದಾರೆ ಎಂದು ಭವಾನಿ ಶಿಪ್ಪಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮುಂಬಯಿ ಆಡಳಿತ ನಿರ್ದೇಶಕ, ಭವಾನಿ ಫೌಂಡೇಷನ್ ಮುಂಬಯಿ ಸಂಸ್ಥಾಪಕಾಧ್ಯಕ್ಷ ಕೆ. ಡಿ. ಶೆಟ್ಟಿ ಅವರು ನುಡಿದರು.
ನ. 18ರಂದು ಸುರತ್ಕಲ್ ಬಂಟರ ಭವನದಲ್ಲಿ ನಡೆದ ರಂಗಚಾವಡಿ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಸೌರಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆಯ ಬೆಳವಣಿಗೆಯ ಹಿಂದೆ ಉತ್ತಮ ಉದ್ದೇಶ, ಗುರಿ ಇರುತ್ತದೆ. ತುಳು ರಂಗಭೂಮಿ ಬೆಳವಣಿಗೆ ಮತ್ತು ಸಾಧಕರನ್ನು ಹುಡುಕಿ ಗುರುತಿಸುವ ಕಾರ್ಯ ರಂಗ ಚಾವಡಿ ಮಾಡುತ್ತಿದೆ. ತುಳು ಭಾಷೆ, ಸಾಹಿತ್ಯದ ಹಿಂದೆ ಉತ್ತಮ ಕೆಲಸ ಮಾಡಿದರೆ ಮಾತ್ರ ರಂಗಭೂಮಿ ಬೆಳವಣಿಗೆ ಸಾಧ್ಯ. ಆ ಕೆಲಸವನ್ನು ಒಗ್ಗಟ್ಟಿನಿಂದ ಮಾಡಬೇಕಾಗಿದೆ ಎಂದು ನುಡಿದರು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ. ಸಿ. ಭಂಡಾರಿ ಮಾತನಾಡಿ, ತುಳುಭಾಷೆ ಪ್ರಸಿದ್ಧಿಗೆ ನಾಟಕ ರಂಗ ನೀಡಿದ ಕೊಡುಗೆ ಅನನ್ಯ. ಸಂಸ್ಥೆಗಳನ್ನು ದೊಡ್ಡ ಹಂತಕ್ಕೆ ಬೆಳೆಸಲು ಬಹಳಷ್ಟು ಕಷ್ಟವಿದೆ. ಸಮಾಜದಲ್ಲಿ ಗುರುತಿಸಬೇಕಾದ ಪ್ರತಿಭಾವಂತ ಜನರು, ಸಾಹಿತಿಗಳು, ಕಲಾವಿದರು ಬಹಳಷ್ಟು ಇದ್ದಾರೆ. ಆ ಕೆಲಸವನ್ನು ರಂಗ ಚಾವಡಿ ಸಂಘಟನೆ ಮಾಡುತ್ತಿದೆ. ತುಳು ಸಾಹಿತ್ಯ ಅಕಾಡೆಮಿಯು ತುಳು ನಾಟಕ ಮತ್ತು ಕಲಾವಿದರಿಗೆ ಹೆಚ್ಚು ಪ್ರೋತ್ಸಾಹ ನೀಡಿದೆ. ಹಿಂದೆ ತುಳು ಭಾಷೆ ಮಾತನಾಡಲು ಸಂಕೋಚವಾಗುತ್ತಿತ್ತು. ಶಾಲೆಯಲ್ಲಿ ತುಳು ಮಾತನಾಡಿದರೆ ಬೆಂಚಿನ ಮೇಲೆ ನಿಲ್ಲಿಸುತ್ತಿದ್ದ ಕಾಲವೊಂದಿತ್ತು. ಈಗ ತುಳು ಶಿಕ್ಷಣ ವ್ಯವಸ್ಥೆಯಾಗಿದೆ ಎಂದು ನುಡಿದರು.
ಅಧ್ಯಕ್ಷ ಸ್ಥಾನ ವಹಿಸಿದ್ದ ಚಲನ ಚಿತ್ರ ನಿರ್ಮಾಪಕ ಡಾ| ಸಂಜೀವ ದಂಡೆಕೇರಿ ಮಾತನಾಡಿ, ನಾನು ಬಯ್ಯಮಲ್ಲಿಗೆ ನಾಟಕ ಬರೆದು 54 ವರ್ಷ ಸಂದಿದೆ. ಬಯ್ಯಮಲ್ಲಿಗೆ ನಾಟಕ ಈಗ ಐದು ಭಾಷೆಗಳಲ್ಲಿವೆ. ತುಳು ರಂಗಭೂಮಿ ಬೆಳವಣಿಗೆ ನನ್ನ ಗುರಿಯಾಗಿದೆ. ತುಳು ರಂಗ ಭೂಮಿ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಕೆ. ವಿಜಯ್ ಅವರಿಗೆ ರಂಗ ಚಾವಡಿ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ರಂಗನಟ ವಿ. ಜಿ. ಪಾಲ್ ಪ್ರಾಸ್ತಾವಿಕವಾಗಿ ನುಡಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ಚಲನಚಿತ್ರ ನಿರ್ಮಾಪಕ ರವಿ ರೈ ಕಳಸ, ಉದ್ಯಮಿ ರಮಾನಾಥ ಶೆಟ್ಟಿ, ಪಮ್ಮಿ ಕೊಡಿಯಾಲ್‌ಬೈಲ್, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ಹೊಸಬೆಟ್ಟು, ಗಿರೀಶ್ ಎಂ. ಶೆಟ್ಟಿ ಕಟೀಲು, ಸತೀಶ್ ಮುಂಚೂರು, ಎಂ. ದೇವಾನಂದ ಶೆಟ್ಟಿ, ಡಿವೈಎಸ್‌ಪಿ ಪಡ್ರೆ ದಿನಕರ ಶೆಟ್ಟಿ, ನಗರದ ಸೇವಕ ಅಶೋಕ್ ಶೆಟ್ಟಿ ಸುರತ್ಕಲ್, ರಂಗಚಾವಡಿ ಸಂಚಾಲಕ ಜಗನ್ನಾಥ್ ಶೆಟ್ಟಿ ಬಾಳ ಉಪಸ್ಥಿತರಿದ್ದರು. ಬಿಂದಿಯಾ ಶೆಟ್ಟಿ ಪ್ರಾರ್ಥಿಸಿದರು.
ನವೀನ್ ಶೆಟ್ಟಿ ಎಡೆ¾ಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ತುಳುವೆರೆ ತುಡರ್ ಜೋಡುಕಲ್ಲು ಕಲಾವಿದರಿಂದ ಡಾ| ಸಂಜೀವ ದಂಡೆಕೇರಿ ರಚಿಸಿದ ಬಯ್ಯಮಲ್ಲಿಗೆ ತುಳುನಾಟಕ ಸುರೇಶ್ ಶೆಟ್ಟಿ ಜೋಡುಕಲ್ಲು ನಿರ್ದೇಶನದಲ್ಲಿ ಪ್ರದರ್ಶಿಸಲ್ಪಟ್ಟಿತು.