Advertisement

ರಂಗಭೂಮಿ ಫೈನ್‌ ಆರ್ಟ್ಸ್ ನವಿಮುಂಬಯಿ 26ನೇ ವಾರ್ಷಿಕೋತ್ಸವ

02:47 PM Nov 17, 2017 | Team Udayavani |

ನವಿ ಮುಂಬಯಿ: ರಂಗಭೂಮಿ ಫೈನ್‌ ಆರ್ಟ್ಸ್ ಸಂಸ್ಥೆಯು ಕೇವಲ ರಂಗಕಲೆಗೆ ಸೀಮಿತವಾಗಿರದೆ ಪ್ರತಿಭೆಗಳನ್ನು ಗುರುತಿಸುವ ಕಾರ್ಯದಲ್ಲೂ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ  ತಾರತಮ್ಯವಿಲ್ಲದೆ ನಾವೆಲ್ಲಾ ಒಂದೇ ಎಂದು ಕಲಾ ಸೇವೆಯಲ್ಲಿ ನಿರತರಾಗಿದ್ದೇವೆ. ನಮ್ಮಲ್ಲಿ ಇಲ್ಲಿಯವರೆಗೆ ಜಾತಿ, ಮತ, ಬಡವ-ಶ್ರೀಮಂತ ಎಂಬ ಭೇದ-ಭಾವ ಬಂದಿಲ್ಲ. ಅದು ಮುಂದೆಯೂ ಬರುವುದಿಲ್ಲ. ಬರುವುದೂ ಬೇಡ. ಕಳೆದ ವರ್ಷ ವಿ. ಕೆ. ಸುವರ್ಣ ಅವರ  ರಜತ ಮಹೋತ್ಸವವನ್ನು ಆಚರಿಸಿದ ಈ ಸಂಸ್ಥೆಯು ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ ಎಂದು ಶ್ರೀ ಶನೀಶ್ವರ ಮಂದಿರ ನೆರೂಲ್‌ ಶ್ರೀ ಅಧ್ಯಕ್ಷ ಸಂತೋಷ್‌ ಡಿ. ಶೆಟ್ಟಿ ಎಂದು ಅಭಿಪ್ರಾಯಿಸಿದರು.

Advertisement

ನ. 14 ರಂದು ನೆರೂಲ್‌ ಶ್ರೀ ಶನಿಮಂದಿರದ ಸಭಾಗೃಹದಲ್ಲಿ ರಂಗಭೂಮಿ ಫೈನ್‌ ಆರ್ಟ್ಸ್ ನವಿಮುಂಬಯಿ ಇದರ 26ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ-ಬೆಳೆಸುವುದರೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತ, ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತಿರುವುದಲ್ಲದೆ, ಕಲಾವಿದರನ್ನು ಹಾಗೂ ಸಾಧನೆಗೈದ ಗಣ್ಯರನ್ನು ಗುರುತಿಸಿ ಸಮ್ಮಾನಿಸುವ ಪ್ರಕ್ರಿಯೆಯು ಈ ಸಂಸ್ಥೆಯಿಂದ ನಿರಂತರವಾಗಿ ನಡೆಯುತ್ತಿರುವುದು ಅಭಿನಂದನೀಯ. ನವಿ ಮುಂಬಯಿಯ ಎಲ್ಲ ತುಳು-ಕನ್ನಡಿಗರ ಸಮಸ್ಯೆಗಳಿಗೆ ನಾವು ಎಲ್ಲರೂ ಒಂದಾಗಿ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳೋಣ. ಮುಂದಿನ ದಿನಗಳಲ್ಲಿ ಶೈಕ್ಷಣಿಕವಾಗಿ ಹೆಚ್ಚಿನ ಮಕ್ಕಳನ್ನು ದತ್ತು ಸ್ವೀಕರಿಸಿ, ಅವರ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಭರಿಸುವ. ಇಂತಹ ಸಮಾಜಪರ ಕಾರ್ಯಗಳು ರಂಗಭೂಮಿಯಿಂದ ನಿರಂತರವಾಗಿ ನಡೆಯುತ್ತಿರಲಿ ಎಂದು ನುಡಿದು ಶುಭಹಾರೈಸಿದರು.

ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ, ಭಾರತ್‌ ಕೋಚ್‌ ಬಿಲ್ಡರ್ನ ಮಾಲಕ ಸದಾಶಿವ ಶೆಟ್ಟಿ ಅವರು ಮಾತನಾಡಿ, ನವಿಮುಂಬಯಿಯ ಮಕ್ಕಳಿಗೆ ತುಳುನಾಡಿನ ಸಂಸ್ಕೃತಿಯನ್ನು ಕಲಿಸುವ ಕೆಲಸವನ್ನು ರಂಗಭೂಮಿ ಮಾಡುತ್ತಿದೆ. ಮಕ್ಕಳಿಗೆ ವೇದಿಕೆಯನ್ನು ನೀಡಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಇದಾಗಿದ್ದು, ಇಂತಹ ಕಾರ್ಯವು ನಿರಂತರ ನಡೆಯುತ್ತಿರಲಿ ಎಂದು ನುಡಿದರು.

ಇನ್ನೋರ್ವ ಅತಿಥಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಆನಂದ ಶೆಟ್ಟಿ ಎಕ್ಕಾರ್‌ ಅವರು ಮಾತನಾಡಿ, ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ರಂಗಭೂಮಿಯು ಮಾಡುತ್ತಿದೆ. ಇಂತಹ ಉತ್ತಮ ಕಾರ್ಯಗಳಿಂದಾಗಿ ನವಿಮುಂಬಯಿಯ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿ ರಂಗಭೂಮಿ ಬೆಳೆದು ನಿಂತಿದೆ ಎಂದು ಹೇಳಿದರು.

ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್‌ ಟ್ರಸ್ಟ್‌ ಇದರ ಉಪಾಧ್ಯಕ್ಷ ಪ್ರಭಾಕರ ಎಸ್‌. ಹೆಗ್ಡೆ ಅವರು ಮಾತನಾಡಿ, ಒಂದು ಸಂಸ್ಥೆಯು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದರೆ ಮಾತ್ರ ಆ ಸಂಸ್ಥೆ ಬೆಳೆಯಲು ಸಾಧ್ಯ. ರಂಗಭೂಮಿ ಮಾಡಿದ ಜನಪರ ಕಾರ್ಯ ಹಾಗೂ ಕಲಾಸೇವೆಯಿಂದ ನವಿಮುಂಬಯಿಯಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು.

Advertisement

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ನವಿಮುಂಬಯಿ ಸ್ಥಳೀಯ ಸಮಿತಿಯ ಉಪಾಧ್ಯಕ್ಷ ವಿ. ಕೆ. ಪೂಜಾರಿ ಅವರು ಮಾತನಾಡಿ, ರಂಗಭೂಮಿಯ ಕಲಾ ಸೇವೆ, ಸಂಸ್ಕೃತಿ ಸೇವೆ ಶ್ಲಾಘನೀಯವಾಗಿದ್ದು, ಅವರಿಗೆ ನಾನು ಸದಾ ಋಣಿಯಾಗಿದ್ದೇನೆ. ಅವರ ಸಮಾಜಪರ ಕಾರ್ಯಗಳಿಗೆ ನಮ್ಮ ಸಹಕಾರ, ಪ್ರೋತ್ಸಾಹ ಸದಾಯಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಉದ್ಯಮಿ ಜಯಪ್ರಕಾಶ್‌ ಶೆಟ್ಟಿ, ತುಳುಕೂಟ ಐರೋಲಿಯ ಕಾರ್ಯದರ್ಶಿ ರಾಜೇಶ್‌ ಬಿ. ಶೆಟ್ಟಿ, ಉದ್ಯಮಿ ಪ್ರಮೋದ್‌ ಕರ್ಕೇರ, ತುಳು-ಕನ್ನಡ ವೆಲ್ಫೆàರ್‌ ಅಸೋಸಿಯೇಶನ್‌ ಕಾಮೋಟೆ ಇದರ ಉಪಾಧ್ಯಕ್ಷ ಬೇಬಿರಾಜ್‌ ಕೋಟ್ಯಾನ್‌ ಅವರು ಮಾತನಾಡಿ ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಗಣ್ಯರುಗಳಾದ ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ವಿಜಯ ಬಿ. ಹೆಗ್ಡೆ,  ಪತ್ರಕರ್ತ ಡಾ| ದಿನೇಶ್‌ ಶೆಟ್ಟಿ ರೆಂಜಾಳ ಹಾಗೂ ರಂಗನಟ, ಸಮಾಜ ಸೇವಕ ಜಗದೀಶ್‌ ಶೆಟ್ಟಿ ಪನ್ವೇಲ್‌ ದಂಪತಿಯನ್ನು  ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಮೈಸೂರು ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು. ಡಾ| ದಿನೇಶ್‌ ಶೆಟ್ಟಿ ರೆಂಜಾಳ ಅವರು ಮಾತನಾಡಿ ಸಂಸ್ಥೆಗೆ ಶುಭಹಾರೈಸಿದರು.

ಗೌರವ ಪ್ರಧಾನ ಕಾರ್ಯದರ್ಶಿ ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷರುಗಳಾದ ವಿ. ಕೆ. ಸುವರ್ಣ ಪಡುಬಿದ್ರೆ, ಅನಿಲ್‌ ಕುಮಾರ್‌ ಹೆಗ್ಡೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯ ರಘು ಮೂಲ್ಯ ಸಮ್ಮಾನ ಪತ್ರ ವಾಚಿಸಿದರು. ಜತೆ ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ ದೆಪ್ಪುಣಿಗುತ್ತು ವಂದಿಸಿದರು. ಜತೆ ಕಾರ್ಯದರ್ಶಿ ತಾರಾ ಆರ್‌. ಬಂಗೇರ, ಗೌರವ ಕೋಶಾಧಿಕಾರಿ ರೂಪಾ ಡಿ. ಶೆಟ್ಟಿ, ಕಾರ್ಯಕಾರಿ ಸಮಿತಿಯ ಆದ್ಯಪಾಡಿಗುತ್ತು ಕರುಣಾಕರ ಎಸ್‌. ಆಳ್ವ, ಜಗದೀಶ್‌ ಶೆಟ್ಟಿ ಬೆಳ್ಕಲೆ, ಕೃಷ್ಣ ಐ. ಕೋಟ್ಯಾನ್‌, ಸತೀಶ್‌ ಎರ್ಮಾಳ್‌, ನಿತೇಶ್‌ ಶೆಟ್ಟಿ, ಇಂದಿರಾ ಎಸ್‌. ಶೆಟ್ಟಿ, ಗೀತಾ ಎಸ್‌. ಶೆಟ್ಟಿ, ಉಷಾ ಆರ್‌. ಶೆಟ್ಟಿ, ತಾರಾ ಕೆ. ಶೆಟ್ಟಿ ಅವರು ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿವಿಧ ಸಂಸ್ಥೆಗಳ ವತಿಯಿಂದ ನೃತ್ಯ ವೈಭವ ಹಾಗೂ ರಂಗಭೂಮಿಯ ಕಲಾವಿದರಿಂದ ಏರೆಗ್ಲಾ ಪನೊಡಿc ನಾಟಕ ಪ್ರದರ್ಶನಗೊಂಡಿತು. 

ಇಂದು ನನಗೆ ನೀಡಿದ ಸಮ್ಮಾನ ನನ್ನ ಸಮಾಜಕ್ಕೆ ಸಂದ ಗೌರವ ಎಂದು ಪರಿಗಣಿಸುತ್ತೇನೆ. ಒಂದು ಉತ್ತಮ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ರಂಗಭೂಮಿ ಫೈನ್‌ಆರ್ಟ್ಸ್ ಕಲೆ ಹಾಗೂ ಸಾಮಾಜಿಕ ರಂಗದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ. ಸಂಸ್ಥೆಯು ನೀಡಿದ ಸಮ್ಮಾನ ನನ್ನಿಂದ ಇನ್ನಷ್ಟು ಸಮಾಜಪರ ಸೇವೆಗಳನ್ನು ಮಾಡಲು ಪ್ರೇರಣೆ ನೀಡಿದೆ. ರಂಗಭೂಮಿ ಹಾಗೂ ನನ್ನ ನಡುವೆ ಅವಿನಾಭಾವ ಸಂಬಂಧವಿದ್ದು, ನಿಮ್ಮ ಕಲಾಸೇವೆ, ಸಮಾಜ ಸೇವೆಗೆ ನನ್ನ ಸಂಪೂರ್ಣ ಸಹಕಾರವಿದೆ 
–  ವಿಜಯ ಬಿ. ಹೆಗ್ಡೆ (ಅಧ್ಯಕ್ಷರು : ಹೆಗ್ಗಡೆ ಸೇವಾ ಸಂಘ ಮುಂಬಯಿ).

ನನ್ನ ಮನೆಯಿಂದ ದೊರೆತ ಈ ಸಮ್ಮಾನವನ್ನು ನಾನು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದವರಿಗೆ ಸಮರ್ಪಿಸುತ್ತಿದ್ದೇನೆ. ಶ್ರೀ ಶನೀಶ್ವರ ಮಂದಿರ ಮತ್ತು ರಂಗಭೂಮಿ ಫೈನ್‌ಆರ್ಟ್ಸ್ ನನ್ನ ಮನೆಯಿದ್ದಂತೆ. ನನ್ನ ಸೇವೆ ಇಲ್ಲಿ ಸದಾಯಿರುತ್ತದೆ. ಕಳೆದ ಹಲವಾರು ವರ್ಷಗಳಿಂದ ಸಂಸ್ಥೆಯಲ್ಲಿ ನಿಸ್ವಾರ್ಥವಾಗಿ, ಯಾವುದೇ ರೀತಿಯ ಫಲಾಪೇಕ್ಷೆಯಿಲ್ಲದೆ ಕಲಾಸೇವೆ, ಸಮಾಜ ಸೇವೆ ಮಾಡುತ್ತಿದ್ದೇನೆ. ಅದರ ಫಲವಾಗಿ ಈ ಸಮ್ಮಾನ ದೊರೆತಿದ್ದು, ಶ್ರೀ ಶನೀಶ್ವರ ಮಂದಿರದ ಸನ್ನಿಧಾನದಲ್ಲಿ ದೊರೆತ ಈ ಸಮ್ಮಾನವನ್ನು ತಲೆಬಾಗಿ ಸ್ವೀಕರಿಸುತ್ತಿದ್ದೇನೆ 
– ಜಗದೀಶ್‌ ಶೆಟ್ಟಿ ಪನ್ವೇಲ್‌ (ರಂಗನಟ, ಸಮಾಜ ಸೇವಕ).

ರಂಗಭೂಮಿ ಫೈನ್‌ ಆರ್ಟ್ಸ್ ಕಳೆದ ವರ್ಷ 25 ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಿ, ರಜತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಇದರ ಶ್ರೇಯಸ್ಸು ಅಂದಿನ ಅಧ್ಯಕ್ಷ ವಿ. ಕೆ. ಸುವರ್ಣರಿಗೆ ಸಲ್ಲುತ್ತದೆ. ಕೇವಲ ರಂಗಭೂಮಿ ಮಾತ್ರವಲ್ಲದೆ, ಸಾಮಾಜಿಕ, ವೈದ್ಯಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿದೆ. ಇಲ್ಲಿ ಬೆಳೆದ ಪ್ರತಿಭೆಗಳು ಇಂದು ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ನಮಗೆ ಹೆಮ್ಮೆಯಾಗಿದೆ. ಸಂಸ್ಥೆಯ ಎಲ್ಲಾ ಕಾರ್ಯಚಟುವಟಿಕೆಗಳಿಗೆ ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ 
– ತಾರಾನಾಥ ಶೆಟ್ಟಿ  ಪುತ್ತೂರು (ಅಧ್ಯಕ್ಷರು : ರಂಗಭೂಮಿ ಫೈನ್‌ ಆರ್ಟ್ಸ್  ನವಿಮುಂಬಯಿ).

Advertisement

Udayavani is now on Telegram. Click here to join our channel and stay updated with the latest news.

Next