Advertisement
ನಿತ್ಯವೂ ನಾಟಕಗಳಿಂದಲೇ ಸುದ್ದಿಯಾಗುವ ರಂಗಶಂಕರಕ್ಕೆ ಜೂ.10ರಂದು ಹೋಗಿಬಿಟ್ಟರೆ, ಅಲ್ಲಿ ಮಾವಿನ ಹಣ್ಣಿನ ಪರಿಮಳವೇ ಮೂಗನ್ನು ಸವರುತ್ತದೆ. ಅಲ್ಲಿ ಎಲ್ಲಿ ನೋಡಿದರೂ, ಥರಹೇವಾರಿ ಮಾವಿನ ಹಣ್ಣುಗಳೇ ಕಣ್ಣಿಗೆ ಬೀಳುತ್ತವೆ. ಪ್ರತಿದಿನವೂ ನಾನಾ ಬಣ್ಣಗಳನ್ನು ಪ್ರೇಕ್ಷಕರ ಮುಂದಿಡುವ ರಂಗಶಂಕರದಲ್ಲಿ ಅಂದು ಕಾಣುವುದು ಕೇವಲ ಹೊಂಬಣ್ಣ! ಕಾರಣ, ಅವತ್ತು ಅಲ್ಲಿ ಮ್ಯಾಂಗೋ ಪಾರ್ಟಿ! ಬೆಂಗಳೂರಲ್ಲಿ ಪಾರ್ಟಿ ಅಂದ್ರೆ, ಅಲ್ಲಿ ನಾನಾ ಆಕರ್ಷಣೆಗಳೇ ಹೆಚ್ಚು. ಆದರೆ, ಇದು ಸಂಪೂರ್ಣ ಮಾವಿನ ಹಣ್ಣಿನದ್ದೇ ಸಮಾರಾಧನೆ.
ಇದು ಸಂಬಂಧಗಳನ್ನು ಬೆಸೆಯುವ ಪಾರ್ಟಿ. ಇಲ್ಲಿ ಮಾವು ಒಂದು ನೆಪ ಅಷ್ಟೇ. ನಗರದ ನಿತ್ಯದ ಜಂಜಾಟದಲ್ಲಿ ಪ್ರತಿವರ್ಷವೂ ಒಂದು ಸಿಹಿ ನೆನಪನ್ನು ಚಿರಸ್ಥಾಯಿಗೊಳಿಸಲು ರಂಗಶಂಕರ ಏರ್ಪಡಿಸಿರುವ ಕಾರ್ಯಕ್ರಮ. ಪುಟ್ಟ ಪುಟ್ಟ ಮಕ್ಕಳು ಎರಡೂ ಕೈಯಲ್ಲಿ ಮಾವಿನ ಹಣ್ಣನ್ನು ಹಿಡಿದು, ಬಟ್ಟೆ ತುಂಬಾ ಮಾವಿನ ಕಲೆಗಳನ್ನು ಮಾಡಿಕೊಂಡು, ನಡೆದಾಡುವ ಕಲಾಕೃತಿಯಂತೆ ಕಂಗೊಳಿಸುತ್ತಿರುತ್ತಾರೆ. ಯುವಕ- ಯುವತಿಯರು, ನಡುವಯಸ್ಸಿನವರು, ಹಿರಿಯರೆಲ್ಲ ನಿರ್ಮಲವಾದ ನಗುಸೂಸುತ್ತಾ, ಮಾವಿನ ಹಣ್ಣುಗಳನ್ನು ಕಚ್ಚುತ್ತಾ, ಅದರ ರಸಹೀರಿ ಹಿಗ್ಗುತ್ತಾ, ಅತ್ತಿತ್ತ ಓಡಾಡುತ್ತಿರುತ್ತಾರೆ. ಅಲ್ಲೇನು ವಿಶೇಷವಿರುತ್ತೆ?
ಪ್ರವೇಶ ಸಂಪೂರ್ಣ ಉಚಿತವಾದರೂ, ಎಲ್ಲರೂ ತಲಾ ಒಂದೊಂದು ಕೆ.ಜಿ. ಮಾವಿನಹಣ್ಣುಗಳನ್ನು ಕೊಂಡೊಯ್ಯಬೇಕು. ಅಲ್ಲದೇ, ರಂಗಶಂಕರದವರೂ ತಾಜಾ ಮಾವಿನ ಹಣ್ಣುಗಳನ್ನು ನೀರು ತುಂಬಿದ ದೊಡ್ಡ ದೊಡ್ಡ ಬೋಗುಣಿಗಳಲ್ಲಿ ಇಟ್ಟಿರುತ್ತಾರೆ. ಮನಸ್ಸೂ ಮಾವಾಗಿ ಮಾಗಲು ಆ ಪರಿಮಳವೇ ಸಾಕು.
Related Articles
Advertisement
ಕ್ಯಾಂಟೀನ್‌ನಲ್ಲೂ ಮಾವಿನ ಸ್ಪೆಷೆಲ್ಅಂದು ರಂಶಂಕರದ ಕ್ಯಾಂಟೀನ್ ಕೂಡ ಮಾವುಮಯ. ಮಾವಿನ ಹಣ್ಣಿನ ಲಸ್ಸಿ, ಜ್ಯೂಸ್, ಮಾವಿನಹಣ್ಣಿನ ಚಿತ್ರಾನ್ನ, ಕಾಡು ಮಾವಿನಗೊಜ್ಜು, ಮಜ್ಜಿಗೆ ಮಾವಿನ ಕಾಯಿ ಸೇರಿದಂತೆ ಹಲವು ವೈವಿಧ್ಯಗಳನ್ನು ಅಲ್ಲಿ ಸವಿಯಬಹುದು. ಇಟ್ಟಿನಲ್ಲಿ ಇದೊಂದು ಶೇಕಡಾ ನೂರರ ಪ್ರಮಾಣದ ಸಂತೋಷದ ಕೂಟ. ಇಲ್ಲಿ ಮಾವಿನ ಹಣ್ಣಿನದ್ದೇ ರಸದೂಟ. ಯಾವತ್ತು?: ಜೂ.10, ಭಾನುವಾರ, ಮ.3ರಿಂದ ರಾ.10
ಎಲ್ಲಿ?: ರಂಗಶಂಕರ, ಜೆ.ಪಿ. ನಗರ
ಪ್ರವೇಶ: ಉಚಿತ
ಮಾಹಿತಿಗೆ: www.rangashankara.org