Advertisement

ರಂಗಪಂಚಮಿ ರಂಗು

02:22 PM Mar 14, 2020 | Suhan S |

ಗದಗ: ಕೊರೊನಾ ವೈರಸ್‌ ಆತಂಕದ ಮಧ್ಯೆಯೂ ರಂಗಪಂಚಮಿ ಅಂಗವಾಗಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಶುಕ್ರವಾರ ಬಣ್ಣದಾಟದ ಸಂಭ್ರಮ ಮನೆ ಮಾಡಿತ್ತು. ಹಿರಿಯ-ಕಿರಿಯ, ಮಹಿಳೆ- ಪುರುಷ ಹಾಗೂ ಜಾತಿಗಳ ಭೇದವಿಲ್ಲದೇ ಪರಿಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು. ಇಲ್ಲಿನ ಸ್ಟೇಷನ್‌ ರಸ್ತೆ ಸೇರಿದಂತೆ ವಿವಿಧೆಡೆ ಸಾರ್ವಜನಿಕ ರಸ್ತೆಗಳಲ್ಲಿ ಯುವ ಸಮುದಾಯ ಡಿಜೆ ಸದ್ದು ಹಾಗೂ ನೀರಿನ ಕಾರಂಜಿಯಡಿ ಕುಣಿದು ಕುಪ್ಪಳಿಸಿದರು.

Advertisement

ಪ್ರತಿ ವರ್ಷದಂತೆ ಹೋಳಿ ಹುಣ್ಣಿಮೆಯಾದ ಐದನೇ ದಿನದಂದು ಅವಳಿ ನಗರದಲ್ಲಿ ರಂಗಪಂಚಮಿ ಆಚರಿಸಲಾಗುತ್ತದೆ. ಅದರಂತೆ ಅವಳಿ ನಗರದ ವಿವಿಧ ಬಡಾವಣೆಗಳಲ್ಲಿ ಬೆಳಗಿನ ಜಾವ ಕಾಮದೇವನನ್ನು ದಹಿಸಿದ ಬಳಿಕ ಬಣ್ಣದೋಕುಳಿ ಚಾಲನೆ ಪಡೆಯುತ್ತದೆ. ನಗರದ ಗಾಂಧಿ  ಸರ್ಕಲ್‌, ವಿಶ್ವೇಶ್ವರಯ್ಯ ರೋಡ್‌, ಹಳೆ ಸರಾಫ್‌ ಬಜಾರ್‌, ಟಾಂಗಾ ಕೂಟ, ಸ್ಟೇಷನ್‌ ರಸ್ತೆ, ನಾಮಜೋಶಿ ರಸ್ತೆ, ಪಾಲಾಬಾದಾಮಿ ರೋಡ್‌, ಜೆಟಿ ಕಾಲೇಜ್‌ ರೋಡ್‌, ವೆಂಕಟೇಶ ಟಾಕೀಸ್‌ ರೋಡ್‌, ಬೆಟಗೇರಿ ಬಸ್‌ ನಿಲ್ದಾಣ, ಬಳಗಾನೂರ ರೋಡ್‌, ಮುಳಗುಂದ ನಾಕಾ, ಮುಳಗುಂದ ರಸ್ತೆ, ಹುಡ್ಕೊ ಕಾಲೋನಿ, ನರಸಪಾರು, ಬೆಟಗೇರಿ, ಗಂಗಾಪುರ ಪೇಟೆ ಸರ್ಕಲ್‌, ಹೊಸ ಬಸ್‌ ನಿಲ್ದಾಣದ ಹಿಂಭಾಗ ಸೇರಿದಂತೆ ಹಲವೆಡೆ ಜಮಾಯಿಸಿದ್ದ ಯುವಕ-ಯುವತಿಯರು ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು. ಸ್ನೇಹಿತರು, ಸಂಬಂಧಿ ಕರು ಬಣ್ಣಗಳಲ್ಲಿ ಮಿಂದೇಳುತ್ತಿದ್ದಂತೆ ಸಿಳ್ಳೆ, ಕೇಕೆ ಹಾಕಿದರು.

ಎಲ್ಲೆಡೆ ಹಲಗೆ ಸದ್ದು: ಹೋಳಿ ಹಬ್ಬದ ನಿಮಿತ್ತ ಅವಳಿ ನಗರದ ಎಲ್ಲ ಬಡಾವಣೆ, ಪ್ರಮುಖ ರಸ್ತೆಗಳಲ್ಲಿ ಹಲಗೆ, ಪುಂಗಿ ಸದ್ದು ಜೋರಾಗಿತ್ತು. ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಜಮಾಯಿಸಿದ್ದ ಯುವಕರು ತಮಟೆ ಬಾರಿಸಿ, ಟಪ್ಪಾಂಗುಚ್ಚಿ ಹೆಜ್ಜೆ ಹಾಕಿದರು. ಕೆಲವರು ಬೈಕ್‌ಗಳಲ್ಲಿ ಹಲಗೆ ಬಾರಿಸುತ್ತ, ಸಿಳ್ಳೆ ಹಾಕುತ್ತ, ಕೇಕೆ ಹೊಡೆಯುತ್ತ ನಗರ ಸುತ್ತಿದರು.

ಈ ವೇಳೆ ಯುವತಿಯರೂ ನಾವೇನು ಕಮ್ಮಿ ಎನ್ನುವಂತೆ ಗೆಳತಿಯರ ಮನೆಗಳಿಗೆ ತೆರಳಿ ಬಣ್ಣ ಹಚ್ಚಿ, ನಗೆ ಬೀರಿದರು. ಇನ್ನುಳಿದಂತೆ ವಿವಿಧ ಬಡಾವಣೆಗಳಲ್ಲಿ ಮಹಿಳೆಯರೂ ಅಕ್ಕಪಕ್ಕದವರಿಗೆ ಬಣ್ಣಿ ಹಚ್ಚುವ ಮೂಲಕ ಸಂಭ್ರಮಾಚರಿಸಿದರು.

ಅಣಕು ಶವಯಾತ್ರೆ: ಇಲ್ಲಿನ ಶಹಪುರ ಪೇಟೆ, ಖಾನತೋಟ ಬೆಟಗೇರಿಯ ವಿವಿಧೆಡೆ ಚಿಣ್ಣರು, ಚಟ್ಟದಲ್ಲಿ ಗೆಳೆಯನನ್ನು ಮಲಗಿಸಿ “ಕಾಮಣ್ಣ ಸತ್ತಾನೋ’ ಎಂದು ಬಾಯಿ ಬಡೆದುಕೊಳ್ಳುತ್ತಿದ್ದರು. ಬಡಾವಣೆ ಮನೆ ಮನೆಗೆ ಅಣಕು ಶವಯಾತ್ರೆ ನಡೆಸಿ, ಕಾಮಣ್ಣ ಪಟ್ಟಿ (ದೇಣಿಗೆ) ಸಂಗ್ರಹಿಸುತ್ತಿರುವುದು ಕಂಡುಬಂತು.

Advertisement

ಕುಣಿದು ಕುಪ್ಪಳಿಸಿದರು: ಸ್ಟೇಷನ್‌ ರಸ್ತೆಯ ತೋಂಟದಾರ್ಯ ಆಟೋ ನಿಲ್ದಾಣದಲ್ಲಿ ಡಿಜೆ ಸೌಂಡ್‌ ನೊಂದಿಗೆ ನೂರಾರು ಯುವಕರು ಗಂಟೆಗಳ ಕಾಲ ಕುಣಿದು ಕುಪ್ಪಳಿಸಿದರು. ಡಿಜೆಯೊಂದಿಗೆ ಟ್ಯಾಂಕರ್‌ ಗೆ ಅಳವಡಿಸಿದ್ದ ಕಾರಂಜಿಯಲ್ಲಿ ಚಿಮ್ಮುತ್ತಿದ್ದ ನೀರಿನ ಸಿಂಚನಕ್ಕೆ ಮೈಯೊಡ್ಡಿ, ಹೆಜ್ಜೆ ಹಾಕಿದರು. ಕನ್ನಡ ಹಾಗೂ ಹಿಂದಿ ಚಲನಚಿತ್ರಗಳು ಹಲವು ಜನಪ್ರಿಯ ಹಾಡುಗಳು ಯುವಕರ ಸಂಭ್ರಮವನ್ನು ಇಮ್ಮಡಿಗೊಳಿಸಿದವು. ಇನ್ನೂ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕೆಲವರು ಮನೆಯಲ್ಲೇ ಕಾಲ ಕಳೆದರು. ಹೀಗಾಗಿ ನಗರದ ವಿವಿಧೆಡೆ ಹೋಳಿ ಮಂಕಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next