Advertisement

ಮಂಡ್ಯ ರಮೇಶ್‌ಗೆ “ರಂಗ ಕಣ್ಮಣಿ’ಪ್ರಶಸ್ತಿ

01:18 AM Jan 03, 2020 | mahesh |

ಜಗದ ಎಲ್ಲಾ ವಿಷಯ, ವಿಚಾರಗಳನ್ನು ತೆರೆದ ಕಣ್ಣಿನಿಂದ ನೋಡಬಲ್ಲ ಅಂತರ್ಗಾಹಿ ಮಾತ್ರವೇ ರಂಗಕರ್ಮಿಯಾಗಲು ಸಾಧ್ಯ ಎಂಬ ಅಚಲ ನಂಬಿಕೆಯಿಂದ ನೆಲದವ್ವನ ಎದೆ ಬಯಲಿನ ಬಣ್ಣ ಹೆಕ್ಕುವ ಪುಳಕಕ್ಕೆ ತನ್ನನ್ನು ಸಮರ್ಪಿಸಿಕೊಂಡ ದಾರ್ಶನಿಕ ಮಂಡ್ಯ ರಮೇಶ್‌ಗೆ ರಂಗಭೂಮಿ ಉಡುಪಿಯ ಈ ವರ್ಷದ “ರಂಗ ಕಣ್ಮಣಿ ಬಿರುದು’ ಕೊಡಲ್ಪಡುತ್ತಿದೆ.

Advertisement

ಮೈಸೂರಿನಲ್ಲಿ ತನ್ನ ಕನಸಿನ ಬೇರಿಳಿಸಿಕೊಂಡು “ನಟನಾ’ ಎಂಬ ಅದ್ಭುತವೊಂದನ್ನು ರಾಜ್ಯಕ್ಕೆ ಪರಿಚಯಸಿದ ರಂಗಮಾಂತ್ರಿಕರಿವರು. ರಂಗಕ್ಕೆ ಜೀವನವನ್ನೇ ಕಸೂತಿಯಾಗಿಸಿ ಹೆಣೆದ, ಆ ಏಳು-ಬೀಳುಗಳು ಕಷ್ಟ-ನಷ್ಟಗಳು ಎಲ್ಲವೂ ರಂಗ ವ್ಯಾಮೋಹದಲ್ಲಿ ಇಷ್ಟವಾಗಿಸಿಕೊಂಡ ರಂಗತಜ್ಞ. ಮನೆಯನ್ನೇ ರಂಗಶಿಕ್ಷಣ, ಬಣ್ಣದ ಶಾಲೆ… ರಂಗವಾಗಿಸಿ ಪುಟ್ಟ ಪುಟ್ಟ ಕಂದಮ್ಮಗಳಿಂದ ಹಿಡಿದು “ನಾಟಕ’ ಎಂದವರಿಗೆಲ್ಲ ರಂಗದ ಪ್ರೀತಿಯನ್ನು ಬಳಿದವರು. ಅನಾಥ, ಬಡಮಕ್ಕಳಿಗೆ “ನಟನಾ’ ಎಂಬುದು ಅವ್ವನ ಮಡಿಲು. ಇಲ್ಲಿ ಶಾಸ್ತ್ರಬದ್ಧವಾಗಿ ಧ್ವನಿ, ಭಾಷೆ, ಅಭಿನಯದ ತರಬೇತು, ವಿವಿಧ ಮಜಲುಗಳನ್ನು ಪರಿಚಯಿಸುತ್ತಾ ರಂಗಪ್ರಜ್ಞೆnಯಮೂಲಕ ಹೊಸ ಸೃಷ್ಟಿಯ ಕೈಂಕರ್ಯದಲ್ಲಿ ತನ್ನನ್ನು ಸಮರ್ಪಿಸಿಕೊಂಡ ಕಲಾವಿದರಿವರು.

ಬಿಎಸ್‌.ಸಿ. ಪದವಿ ನಾಮಕಾವಸ್ತೆಗೆ ಮಾಡಿ ಮನೆಯಲ್ಲಿ ಸುಳ್ಳು ಹೇಳಿ ಓಡಿದ್ದು “ನಿನಾಸಂ’ನ ತೆಕ್ಕೆಗೆ. ಇಲ್ಲಿ ಕೆ.ವಿ. ಸುಬ್ಬಣ್ಣ, ಪ್ರಸನ್ನ, ಜಂಬೆ ಮುಂತಾದವರ ಒಡನಾಟ, ಅವರ ಶಿಷ್ಯತ್ವ, ಶಿವರಾಮ ಕಾರಂತರಿಂದ ರಸಗ್ರಹಣೆಯಂತಹ ರಂಗ ಶಿಕ್ಷಣ, ಸಾಹಿತ್ಯ ಪ್ರೀತಿ, ಇವರ ಒಳಗನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಲೇ ಹೋಯಿತು. ಇವರು ನೀನಾಸಂ ಪ್ರಥಮ ತಿರುಗಾಟ ತಂಡದ ಕಲಾವಿದ.ಮುಂದೆ ರಂಗಾಯಣವು ರಂಗಭೂಮಿಗಿರುವ ಹೊಸ-ಹೊಸ ಸಾಧ್ಯತೆಗಳನ್ನು ಇವರೆದುರಿಗೆ ತೆರೆದಿಟ್ಟಿತು. ಬಿ.ವಿ ಕಾರಂತರ ಒಡನಾಟ ಇವರ ವ್ಯಕ್ತಿತ್ವಕ್ಕೆ ಮತ್ತಷ್ಟು ಗಟ್ಟಿತನವನ್ನು ತಂದುಕೊಟ್ಟಿತು.

ಪ್ರತಿಭಟನೆಯ ಅಸ್ತ್ರವಾಗಿ ಹಲವಾರು ಬೀದಿ ನಾಟಕಗಳನ್ನೂ ಮಾಡಿದ್ದಾರೆ. ಅಶೋಕ್‌ ಬಾದರದಿನ್ನಿಯವರ ಜೊತೆ ರಂಗ ಶಿಬಿರಗಳನ್ನು ನಡೆಸಿದ್ದಾರೆ. ಹೀಗಿದ್ದು ಸಂತೆಯೊಳಗಿನ ಮೌನ ಎನ್ನುತ್ತಾ ಮಾತಿನ ಗಡಿಯಾಚೆ ಸರಿದು ವಿಭಿನ್ನವಾಗಿ ಎಲ್ಲವನ್ನೂ ಗ್ರಹಿಸುತ್ತಾ ಬದುಕನ್ನೇ ರಂಗಭೂಮಿಯನ್ನಾಗಿಸಿಕೊಂಡ ರಂಗಸಂತರಿವರು. ಇವರು ಅಭಿನಯಿಸಿದ ನಾಟಕಗಳು ಸಾವಿರಾರು. ಅಕ್ಷರ ನಿರ್ದೇಶನದ “ಸಾಂಭಶಿವ ಪ್ರಹಸನ’ ಅತುಲ್‌ ತಿವಾರಿ ನಿರ್ದೇಶನದ “ಆವೆಮಣ್ಣಿನ ಬಂಡಿ’ ಚಿದಂಬರ ರಾವ್‌ ಜಂಬೆ ನಿರ್ದೇಶನದ “ಈ ಕೆಳಗಿನವರು’ ನಾಟಕದ ಸಂಕಪ್ಪ ಪಾತ್ರ, ಬಿ.ವಿ. ಕಾರಂತರ ನಿರ್ದೇಶನದ “ಮಿಸ್‌ಸದಾರಮೆ’ ನಾಟಕದ ಆದಿಮೂರ್ತಿ. ಕೆ.ಜಿ. ಕೃಷ್ಣಮೂರ್ತಿ ನಿರ್ದೇಶನದ “ಆಲಿಬಾಬ’ ನಾಟಕದ ಸಲೀಮ್‌, ಬಿ.ವಿ ಕಾರಂತರ “ಚಂದ್ರಹಾಸ’, ರಘು ನಂದನರ “ಎತ್ತಹಾರಿದ ಹಂಸ’ದ ನಾಯಕ ರಾಮಚಂದ್ರ, ಜರ್ಮನ್‌ ನಿರ್ದೇಶಕ ಬೆನ್‌ವಿಡ್ಜರ “ಚೆರ್ರಿಅರ್ಚಡ್‌ನ‌’ ಮುದುಕ ಫೀಡ್ಸ್‌, ದೇವನೂರು ಮಹಾದೇವರ “ಕುಸುಮ ಬಾಲೆ’ಯಕಿಟ್ಟಯ್ಯ ಪಾತ್ರ ಮಾತ್ರವಲ್ಲದೆ 42 ಪಾತ್ರ ನಿರ್ವಹಿಸಿದ ಸಾಧಕರಿವರು.

  • ಪೂರ್ಣಿಮಾ ಸುರೇಶ್‌
Advertisement

Udayavani is now on Telegram. Click here to join our channel and stay updated with the latest news.

Next