Advertisement

‘ರಂಗ್ ದ ಬರ್ಸ’ ಆಯೋಜಿಸಿದ್ದು ಹಿಂದೂಗಳೇ: ದಾಳಿಕೋರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

05:57 PM Mar 28, 2023 | Team Udayavani |

ಮಂಗಳೂರು: ಗೆಳೆಯರ ಸಹಭಾಗಿತ್ವದಲ್ಲಿ ಹಿಂದೂಗಳೇ ಆಯೋಜಿಸಿದ್ದ ‘ರಂಗ್ ದ ಬರ್ಸ’ ಕಾರ್ಯಕ್ರಮಕ್ಕೆ ಕುಟುಂಬ ಸಹಿತ ಭಾಗವಹಿಸುವ ಅವಕಾಶ ಕಲ್ಪಿಸಿ ಪೊಲೀಸರಿಂದ ಅನುಮತಿಯನ್ನೂ ಪಡೆದುಕೊಳ್ಳಲಾಗಿತ್ತು. ಹಾಗಿದ್ದರೂ ಕಾರ್ಯಕ್ರಮಕ್ಕೆ ಕಿಡಿಗೇಡಿಗಳು ಆಗಮಿಸಿ ಅಡ್ಡಿ ಪಡಿಸಿ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಕಾರ್ಯಕ್ರಮ ಆಯೋಜಕ ಜೀವನ್ ಹೇಳಿದ್ದಾರೆ.

Advertisement

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಗರದ ಓಪನ್ ಗ್ರೌಂಡ್‌ನಲ್ಲಿ ಮುಚ್ಚು ಮರೆ ಇಲ್ಲದೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೋಲಿ ಹಿಂದೂ ಧಾರ್ಮಿಕ ಆಚರಣೆ. ಮಂಗಳೂರು ಎಜುಕೇಶನ್ ಹಬ್ ಆಗಿರುವ ಕಾರಣ ನಾನಾ ರಾಜ್ಯಗಳಿಂದ ಬಂದು ಇಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಹಾಗೂ ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಇದು ಆರನೇ ವರ್ಷದ ಕಾರ್ಯಕ್ರಮ. ಸಾಂಪ್ರದಾಯಿಕ ಹೋಲಿಯನ್ನು ಸ್ವಲ್ಪ ಮನರಂಜನಾತ್ಮಕವಾಗಿ ನಾವು ಆಯೋಜಿಸುತ್ತಾ ಬಂದಿದ್ದೇವೆಯೇ ವಿನಹ ಇಲ್ಲಿ ಯಾವುದೇ ರೀತಿಯ ಅನೈತಿಕತೆಗೆ ಅವಕಾಶವಿಲ್ಲ. ಕಳೆದ ತಿಂಗಳು ಕಾರ್ಯಕ್ರಮ ಆಯೋಜಿಸಲಾಗಿತ್ತಾದರೂ ಬಿಸಿಗಾಳಿಯ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಿ, ಮಾ. 26 ರಂದು ಆಯೋಜಿಸಲಾಗಿತ್ತು. ಮನರಂಜನೆಯ ಜತೆಗೆ ಇದು ಸ್ಟೇಜ್ ಸೆಟ್ಟಿಂಗ್, ಧ್ವನಿವರ್ದಕ , ಕ್ಯಾಟರಿಂಗ್, ಸಂಗೀತಗಾರರು, ವಿವಿಧ ಸ್ಟಾಲ್‌ಗಳವರಿಗೆ ಉದ್ಯೋಗದ ಅವಕಾಶವೂ ಇದಾಗಿತ್ತು. ಕಾರ್ಯಕ್ರಮದ ಟಿಕೆಟ್‌ಗಳು ಕೂಡಾ ಆನ್‌ಲೈನ್‌ನಲ್ಲಿ ಮಾರಾಟವಾಗಿತ್ತು. ಹೀಗಿರುವಾಗ ಯಾವುದೇ ಸಂಘಟನೆಯವರು ಎನ್ನಲಾದ ಕಿಡಿಗೇಡಿಗಳು ಕಾರ್ಯಕ್ರಮ ಹಾಳುಗೆಡವುದಾದರೆ ಇಲ್ಲಿ ಕಾನೂನು ವ್ಯವಸ್ಥೆ ಯಾವ ಮಟ್ಟಿಗೆ ತಲುಪಿದೆ ಎಂದವರು ಪ್ರಶ್ನಿಸಿದರು.

ನಾವು ಕಾರ್ಯಕ್ರಮಕ್ಕೆ ಹಾಕಿದ ಬಂಡವಾಳ ನಷ್ಟವಾಗಿದೆ. ದಾಳಿ ಮಾಡಿದವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಆದರೆ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಮುಂದೆ ಇಂತಹ ಪರಿಸ್ಥಿತಿ ಯಾರಿಗೂ ಎದುರಾಗಬಾರದು ಎಂದು ಜೀವನ್ ಹೇಳಿದರು.

ಗೋಷ್ಠಿಯಲ್ಲಿ ಕಾರ್ಯಕ್ರಮ ಆಯೋಜಕ ಅರ್ಜುನ್ ಹಾಗೂ ಸುಜೀರ್ ವಿನೋದ್ ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ: ತೀರ್ಥಹಳ್ಳಿ ಪೊಲೀಸ್ ಪೇದೆಯ ಹತ್ಯೆ ಪ್ರಕರಣ: ಓರ್ವ ಆರೋಪಿಯ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next