Advertisement

Ranebennur Blackbuck Sanctuary: ಕೃಷ್ಣಮೃಗ ಅಭಯಾರಣ್ಯದಲ್ಲಿ ಸಫಾರಿ ವಾಹನ

05:33 PM Oct 10, 2024 | Team Udayavani |

ಉದಯವಾಣಿ ಸಮಾಚಾರ
ರಾಣಿಬೆನ್ನೂರ: ತಾಲೂಕಿನ ಗಂಗಾಜಲ ತಾಂಡಾ ಬಳಿ ಮೆಡ್ಲೇರಿ ರಸ್ತೆಯಲ್ಲಿರುವ ಕೃಷ್ಣಮೃಗ ಅಭಯಾರಣ್ಯ ರಾಜ್ಯದಲ್ಲಿಯೇ ಪ್ರಸಿದ್ಧಿ ಹೊಂದಿದೆ. ಈ ಕೃಷ್ಣಮೃಗ ಅಭಯಾರಣ್ಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಅರಣ್ಯ ಇಲಾಖೆಯಿಂದ ಸಫಾರಿ ಕೈಗೊಳ್ಳಲು ಒಂದು ಸುಸಜ್ಜಿತ ವಾಹನದ ವ್ಯವಸ್ಥೆ ಮಾಡಿದ್ದು, ಪ್ರವಾಸಿಗರು ಕೃಷ್ಣಮೃಗಗಳನ್ನು ಸಮೀಪದಿಂದ ನೋಡಿ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ.

Advertisement

ಕೃಷ್ಣಮೃಗ ಅಭಯಾರಣ್ಯವನ್ನು ವಿಶೇಷ ಪ್ರವಾಸಿ ತಾಣ ಮಾಡಲು ಚಿಂತನೆ ನಡೆದಿದೆ. ಇದುವರೆಗೂ ಅಭಯಾರಣ್ಯ ಪ್ರದೇಶದಲ್ಲಿ ಖಾಸಗಿ ವಾಹನಗಳಿಗೆ ಅವಕಾಶ ನೀಡಲಾಗಿತ್ತು. ಇದೀಗ ಸಫಾರಿ ವಾಹನದ ವ್ಯವಸ್ಥೆ ಮಾಡಿರುವುದರಿಂದ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಸಫಾರಿ ವಾಹನ ಜತೆ ಇಲಾಖೆ ಸಿಬ್ಬಂದಿ ವೀಕ್ಷಕರಿಗೆ ಮಾರ್ಗದರ್ಶನ ಮಾಡಲಿದ್ದಾರೆ.

ಅಭಯಾರಣ್ಯದ ಮಾಹಿತಿ: ಅಭಯಾರಣ್ಯ ಪ್ರದೇಶ ಹುಲ್ಲುಗಾವಲಿನಿಂದ ಕೂಡಿ ಸಮತಟ್ಟಾದ ಪ್ರದೇಶ ಹೊಂದಿದೆ. ಇಲ್ಲಿ ನೈಸರ್ಗಿಕವಾಗಿ ಬೆಳೆದ ಕಾಚು, ಕಗ್ಗಲಿ, ಆನೆಗೊಬ್ಬಳಿ, ಬಳ್ಳಾರಿ ಜಾಲಿ, ಕಮರ, ಚುಜ್ಜಲು, ಬಾರಿ, ದಿಡಿಲು ಮುಂತಾದ ಮರಗಳಿವೆ. ಬಂದರಿಕೆ, ತಂಗಡಿಕೆ, ಕಾರೆ, ಲಂಟಾನಾ ಇತ್ಯಾದಿ ಪೊದೆಗಳಿಂದ ದಟ್ಟವಾದ ಹುಲ್ಲಿನಿಂದ ಕೂಡಿದೆ. 1970 ರ ದಶಕದಲ್ಲಿ ಬೆಳೆಸಿದ ನಡುತೋಪುಗಳಲ್ಲಿ ನೀಲಗಿರಿ, ಬೇವು, ಕರಿಜಾಲಿ, ಕಮರ, ಹೊಂಗೆ ಇತ್ಯಾದಿ ಮರಗಳಿವೆ.

ಕೃಷ್ಣಮೃಗ ಅಭಯಾರಣ್ಯದಲ್ಲಿ ಸದ್ಯ ಸುಮಾರು 12 ಸಾವಿರಕ್ಕೂ ಅಧಿಕ ಕೃಷ್ಣಮೃಗಗಳಿವೆ. ಇವುಗಳಲ್ಲದೆ ಚಿರತೆ, ನರಿ, ನವಿಲು, ಕೌಜಗ, ಮುಳ್ಳು ಹಂದಿ, ಕಾಡುಬೆಕ್ಕು ಮುಂತಾದ ಪ್ರಾಣಿಗಳಿವೆ. ವಿಶೇಷವಾಗಿ ಕೃಷ್ಣಮೃಗಗಳು ಸುಲಭವಾಗಿ ಕಣ್ಣಿಗೆ ಬೀಳುತ್ತವೆ. ಅವು ನಿಂತ ಸ್ಥಳದಿಂದ ಒಮ್ಮೆಲೆ ಒಂದು ಮೀಟರ್‌ ಎತ್ತರ ನೆಗೆದು ಕೆಲವೇ ಹೆಜ್ಜೆಗಳಲ್ಲಿ ಹೆಚ್ಚಿನ ವೇಗ ಪಡೆಯುತ್ತವೆ. ಇವು ನೆಗೆದು ಜಿಗಿದು ಓಡುವ ದೃಶ್ಯ ಕಣ್ಣಿಗೆ ಮುದ ನೀಡುತ್ತವೆ.

Advertisement

ನೀಲಗಿರಿ ಮರಗಳ ತೆರವಿಗೆ ಚಿಂತನೆ: ಅಭಯಾರಣ್ಯದಲ್ಲಿ ಸುಮಾರು 30 ವರ್ಷಗಳ ಹಿಂದೆ ಗೇಟ್‌ ಇಂಡಿಯನ್‌  ಬಸ್ಟರ್ಡ್‌ (ಎರಲಡ್ಡು) ಪಕ್ಷಿಗಳಿದ್ದವು. ಆದರೆ ನಂತರದ ದಿನಗಳಲ್ಲಿ ಬೆಳೆದ ನೀಲಗಿರಿ ಮರಗಳಿಂದ ಅವು ಇಲ್ಲಿಂದ ಕಣ್ಮರೆಯಾಗಿವೆ. ಇದಲ್ಲದೆ ಕೃಷ್ಣಮೃಗಗಳು ಸ್ವತ್ಛಂದವಾಗಿ ಅರಣ್ಯ ಪ್ರದೇಶದಲ್ಲಿ ವಿಹರಿಸಲು ನೀಲಗಿರಿ ಮರಗಳು ಅಡ್ಡಿಯಾಗಿವೆ. ಆದ್ದರಿಂದ ಈಗಿರುವ ನೀಲಗಿರಿ ಮರಗಳನ್ನು ಇಲಾಖೆ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ತೆರವುಗೊಳಿಸಲು ಯೋಜನೆ ರೂಪಿಸಲಾಗಿದೆ.ಮುಂದಿನ ದಿನಗಳಲ್ಲಿ ಅಭಯಾರಣ್ಯ ಅಭಿವೃದ್ಧಿಗೆ ವಿಶೇಷ ಯೋಜನೆ ಕೈಗೊಳ್ಳಲಾಗಿದೆ.

ವೀಕ್ಷಣೆಗೆ ಸಕಾಲ: ಅಕ್ಟೋಬರ್‌ ತಿಂಗಳಿನಿಂದ ಮಾರ್ಚ್‌ ತಿಂಗಳ ಅವಧಿಯಲ್ಲಿ ಅಭಯಾರಣ್ಯದಲ್ಲಿ ಕೃಷ್ಣಮೃಗ ಹಾಗೂ
ಇತರೆ ಪ್ರಾಣಿಗಳನ್ನು ನೋಡಲು ಸಕಾಲವಾಗಿದೆ. ಬೆಳಿಗ್ಗೆ 6 ರಿಂದ 9ರವರೆಗೆ ಹಾಗೂ ಸಂಜೆ 4 ರಿಂದ 6 ರವರೆಗೆ ವೀಕ್ಷಣೆಗೆ ಸಮಯ ನಿಗದಿಪಡಿಸಲಾಗಿದೆ.

ಸಫಾರಿ ವಾಹನಕ್ಕೆ ಸದ್ಯ ಹಳೆಯ ದರಗಳನ್ನು ಪಡೆಯಲಾಗುತ್ತಿದೆ. ಶೀಘ್ರದಲ್ಲೇ ಹೊಸ ದರಗಳನ್ನು ನಿಗದಿಪಡಿಸಿಕೊಳ್ಳಲಾಗುವುದು. ಪ್ರಸ್ತುತ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಸಫಾರಿ ವಾಹನ ಜತೆ ಇಲಾಖೆ
ಸಿಬ್ಬಂದಿ ವೀಕ್ಷಕರಿಗೆ ಮಾರ್ಗದರ್ಶನ ನೀಡುತ್ತಾರೆ.
ತೀಶ ಪೂಜಾರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ರಾಣಿಬೆನ್ನೂರ

ಕೃಷ್ಣಮೃಗ ಅಭಯಾರಣ್ಯದ ಅಭಿವೃದ್ಧಿಗೆ ಸರ್ಕಾರ 50 ಲಕ್ಷ ರೂ. ಬಿಡುಗಡೆ ಮಾಡಿದೆ. ನನ್ನ ಅನುದಾನದಲ್ಲಿ 50 ಲಕ್ಷ ರೂ. ನೀಡಿದ್ದು ಪ್ರವಾಸಿಗರಿಗಾಗಿ ಸಫಾರಿಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು.
ಪ್ರಕಾಶ ಕೋಳಿವಾಡ, ಶಾಸಕರು, ರಾಣಿಬೆನ್ನೂರ.

■ ಮಂಜುನಾಥ ಎಚ್‌. ಕುಂಬಳೂರ

Advertisement

Udayavani is now on Telegram. Click here to join our channel and stay updated with the latest news.

Next