Advertisement

ಚಿಲುಮೆ ಹಗರಣದಲ್ಲಿ ಕೇಂದ್ರ ಸರ್ಕಾರವೂ ಭಾಗಿ: ಸುರ್ಜೇವಾಲಾ

08:11 PM Nov 25, 2022 | Team Udayavani |

ಬೆಂಗಳೂರು: ಮತದಾರರ ಕಳವು ಹಗರಣದಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರವೂ ಭಾಗಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆರೋಪಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಿಟಿಜನ್‌ ಸರ್ವೀಸಸ್‌ ಸೆಂಟರ್‌ನಿಂದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು, ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್‌ ಅವರಿಗೂ ಪಾವತಿಯಾಗಿದೆ. ಇದರಿಂದ ಈ ಹಗರಣದ ಸ್ವರೂಪ ಬೃಹದಾಕಾರವಾಗಿರುವುದು ಸ್ಪಷ್ಟವಾಗಿದೆ. ಜನರ ಹಣ ಲೂಟಿ ಮಾಡಿ, ಅವ್ಯವಹಾರ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೊಮ್ಮಾಯಿ ಅವರ ಜತೆಗೆ ರವಿಕುಮಾರ್‌ ಅವರು ಹಾಗೂ ಅವರ ಆಪ್ತರ ಖಾತೆಗಳಿಗೆ ಕೇಂದ್ರ ಸರ್ಕಾರದ ಸಂಸ್ಥೆಯಿಂದ ಎಷ್ಟು ಕೋಟಿ ಹಣ ವರ್ಗಾವಣೆ ಮಾಡಲಾಗಿದೆ. ಈ ಹಣ ಪಡೆದವರು ಯಾರು ಎಂಬುದು ತನಿಖೆ ಮೂಲಕ ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.

ಪ್ರಕರಣದಲ್ಲಿ ಬೊಮ್ಮಾಯಿ ಅವರು ಪ್ರಮುಖ ಕಿಂಗ್‌ ಪಿನ್‌ ಆಗಿದ್ದು, ಈ ವಿಚಾರವಾಗಿ ಜನರು ಕೇಳುತ್ತಿರುವ ಪ್ರಶ್ನೆಗಳಿಗೆ ಅವರು ಉತ್ತರ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಸಂಸ್ಥೆಯಿಂದ ಆರೋಪಿ ಹಾಗೂ ಆತನ ಆಪ್ತರ ಖಾತೆಗಳಿಗೆ ಹಣ ವರ್ಗಾವಣೆ ಹೇಗಾಯಿತು. ಇದೆಲ್ಲದರ ಸತ್ಯಾಂಶ ಹೊರಬರಲು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಮತದಾರರ ಮಾಹಿತಿ ಕಳುವು -ಮಾರಾಟ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದಿರುವ ಬಗ್ಗೆ ತನಿಖೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಈ ಆಯೋಗವು ಉಪ ಆಯುಕ್ತರನ್ನು ತನಿಖೆಗೆ ನೇಮಕ ಮಾಡಿದ್ದು, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.

Advertisement

ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ತಗಾದೆ ಬಿಜೆಪಿಯ ಮ್ಯಾಚ್‌ ಫಿಕ್ಸಿಂಗ್‌. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದೆ. ಈ ವಿಚಾರವಾಗಿ ಫಡ್ನವೀಸ್‌ ಏನು ಹೇಳಿದ್ದಾರೆ. ಅವರು ಬೆಳಗಾವಿ ಮಾತ್ರವಲ್ಲ, ಕಾರವಾರವನ್ನೂ ಕಬಳಿಸಲು ನೋಡುತ್ತಿದ್ದಾರೆ. ಇದೆಲ್ಲವೂ ಪೂರ್ವನಿಯೋಜಿತ ಷಡ್ಯಂತ್ರ. ರಾಜ್ಯದ ಒಂದು ಅಡಿ ಜಾಗವನ್ನೂ ಬಿಟ್ಟುಕೊಡುವ ಪ್ರಶ್ನೆ ಇಲ್ಲ.
– ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷರು

ನಾವು ಈ ವಿಚಾರವನ್ನು ಪ್ರತಿ ಕ್ಷೇತ್ರ ಹಾಗೂ ಬೂತ್‌ ಗಳಿಗೆ ಈ ವಿಚಾರವನ್ನು ಕೊಂಡೊಯ್ಯುತ್ತೇವೆ ಎಂದು ಹೇಳಿದರು.

ಈ ಮಧ್ಯೆ ತಮ್ಮನ್ನು ತಾವೇ ಗಂಡಸು ಎಂದು ಗಂಡಸ್ಥನದ ಬಗ್ಗೆ ಮಾತನಾಡುತ್ತಿದ್ದವರು ಹಾಗೂ ಚಿಲುಮೆ ಸಂಸ್ಥೆಯ ಪ್ರಮುಖ ಕಿಂಗ್‌ ಪಿನ್‌ ಗಳು ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ಹಲವು ವ್ಯಕ್ತಿಗಳ ಖಾತೆಗೆ ಹಣ ಹಾಕಿಸಿ, ಅವುಗಳನ್ನು ನಗದೀಕರಣ ಮಾಡಿಕೊಂಡಿದ್ದಾರೆ. ಇವರೆಲ್ಲರೂ ಹೇಳಿಕೆ ನೀಡಿದ್ದಾರೆ . ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಈ ಹಣವನ್ನು ಯಾರು ಯಾವ ಕಾರಣಕ್ಕೆ ಯಾರಿಗೆ ವರ್ಗಾವಣೆ ಮಾಡಿದ್ದಾರೆ ಎಂಬ ಅಂಶ ಬೆಳಕಿಗೆ ಬರಬೇಕು ಎಂದರು.

ಪ್ರತಿ ಬೂತ್‌ ಗಳಲ್ಲಿ ಮತಗಳನ್ನು ಉಳಿಸಿಕೊಳ್ಳಲು ಜಾಗೃತಿ ಮೂಡಿಸಲು ಮಾರ್ಗದರ್ಶನ ನೀಡಲಾಗುವುದು. ಈ ಸರ್ಕಾರ ಅಲ್ಪಸಂಖ್ಯಾತರು, ಪರಿಶಿಷ್ಟರ ಮತಗಳನ್ನು ಕಿತ್ತುಹಾಕುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಅರ್ಜಿ ಹಾಕಿರುವ ಎಲ್ಲರೂ ಹಳ್ಳಿಗಳಿಗೆ ಹೋಗಿ ಪಕ್ಷ ಸಂಘಟನೆ ಮಾಡಬೇಕು. ಕ್ಷೇತ್ರ ಮಟ್ಟದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಹೋರಾಟ ಮಾಡಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next