ಕೊಪ್ಪಳ: ಸಿಎಂ ಬೊಮ್ಮಾಯಿ, ಕಟೀಲ್, ಅಶ್ವಥ್ ನಾರಾಯಣ ಅವರು ಸಿದ್ದರಾಮಯ್ಯರನ್ನ, ಡಿಕೆಶಿಯನ್ನು ಹೊಡೆದು ಹಾಕುತ್ತೇವೆ ಎಂದಿದ್ದಾರೆ. ನಾನು ಸಿದ್ದು, ಡಿಕೆಶಿ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರನ್ನು ಕರೆ ತರುವೆ. ಅವರು ಯಾರನ್ನು ಹೊಡೆದು ಹಾಕುತ್ತಾರೋ ನೋಡೋಣ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲ ಅವರು ಕಮಲ ನಾಯಕರಿಗೆ ಸವಾಲ್ ಹಾಕಿದರು.
ಕೊಪ್ಪಳದಲ್ಲಿ ಗ್ಯಾರಿಂಟಿ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿಗರಿಗೆ ಅಭಿವೃದ್ಧಿ ಬೇಕಿಲ್ಲ. ಬರಿ ಕೋಮು ದ್ವೇಷದ ಮಾತನ್ನಾಡುತ್ತಿದ್ದಾರೆ.
ಸಿಎಂ ಬೊಮ್ಮಾಯಿ, ಕಟೀಲ್, ಅಶ್ವಥ್ ಅವರು ಹೊಡೆದು ಹಾಕುವ ಸ್ಥಳ, ಸಮಯ ಹಾಗೂ ದಿನಾಂಕವನ್ನು ಹೇಳಿದರೆ ನಾವು ಅಲ್ಲಿಗೆ ಎಲ್ಲರೂ ಬರುತ್ತೇವೆ. ನೀವು ಅದು ಹೇಗೆ ಹೊಡೆದು ಹಾಕುತ್ತೀರಿ ನೋಡುತ್ತೇವೆ. ಯಾರನ್ನು ಹೊಡೆದು ಹಾಕುತ್ತೀರಿ ನೋಡಿಯೇ ಬಿಡೋಣ ಎಂದು ಸವಾಲ್ ಹಾಕಿದರಲ್ಲದೇ, ಬಿಜೆಪಿಗರು ಯಾಕೆ ಈ ಭಾಷೆಯನ್ನು ಬಳಸಿ ಮಾತನಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದರು.
ಬಿಜೆಪಿ 40 ಪರ್ಸೆಂಟ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ, ಪ್ರಶಾಂತ ಪ್ರಕರಣ, ಶಾಸಕನ ಪುತ್ರನ ಮೇಲೆ ಲೋಕಾಯುಕ್ತ ದಾಳಿ, ಮನೆಯಲ್ಲಿ 6 ಕೋಟಿಗೂ ಅಧಿಕ ಹಣ ದೊರೆತಿದ್ದು, ಎಂ.ಟಿ.ಬಿ ನಾಗರಾಜರ ಪೊಲೀಸ್ ಅಧಿಕಾರಿಗಳ 80 ಲಕ್ಷ ರೂ. ಲಂಚಾವತಾರ ಪ್ರಕರಣ ಸೇರಿ ಪೊಲೀಸ್ ನೇಮಕಾತಿಯಲ್ಲಿ ಜೈಲು ಸೇರಿರುವ ಎಡಿಜಿಪಿ ಪ್ರಕರಣ ಸೇರಿ ಸಾಲು ಸಾಲು ಭ್ರಷ್ಟಾಚಾರದ ಪ್ರಕರಣಗಳು ಬಿಜೆಪಿ ಸರ್ಕಾರದಲ್ಲಿ ರಾಜಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಎಂಟು ಬಾರಿ ಬಂದಿದ್ದಾರೆ. ಆದರೆ ಇದರ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪತ್ರಕ್ಕೆ ಉತ್ತರವೂ ಸಿಕ್ಕಿಲ್ಲ. ಇವರ ಸರ್ಕಾರ ಕಿತ್ತೊಗೆಯಲು ಜನರು ಸಿದ್ದರಾಗಬೇಕೆಂದರು.
ರಾಜ್ಯದ ಬಜೆಟ್ 3 ಲಕ್ಷ 10 ಸಾವಿರ ಕೋಟಿ ಇದೆ. ಬಿಜೆಪಿ ಸರ್ಕಾರವಿರದ್ದರೆ 1 ಲಕ್ಷ ಕೋಟಿ ರೂ. ಬರಿ 40 ಪರ್ಸೆಂಟ್ ಕಮೀಷನ್‌ಗೆ ಹೋಗುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರ ಕೊಟ್ಟರೆ ಗೃಹಲಕ್ಷ್ಮಿ, 10 ಕೆಜಿ ಉಚಿತ ಅಕ್ಕಿ, 2 ಸಾವಿರ ರೂ. ಮಹಿಳೆಯರಿಗೆ ಸಹಾಯಧನ, 200 ವಿದ್ಯುತ್ ಉಚಿತ ಯೋಜನೆ ಗ್ಯಾರಂಟಿ ಕೊಡಲಿದ್ದೇವೆ. ಈ ಎಲ್ಲ ಯೋಜನೆಗಳು ಬಜೆಟ್‌ನ 30-40 ಸಾವಿರ ಕೋಟಿ ವ್ಯಯವಾಗಲಿದೆ. ಬಿಜೆಪಿಗರ 40 ಪರ್ಸೆಂಟ್‌ನಲ್ಲಿಯೇ ನಾವು ಎಲ್ಲ ಯೋಜನೆಗಳನ್ನು ಜನರಿಗೆ ಕೊಡಲಿದ್ದೇವೆ. ನಮಗೆ ಅಧಿಕಾರ ಕೊಡಿ ಎಂದರು.