ಹೊಸದಿಲ್ಲಿ: ಕೇಂದ್ರ ಸರ್ಕಾರ ಗೋಹತ್ಯೆಗೆ ಸಂಬಂಧಿಸಿದ ಕಾಯ್ದೆಯಲ್ಲಿ ಮಹತ್ವದ ತಿದ್ದುಪಡಿ ಮಾಡಿ ಆದೇಶಿಸಿರುವ ಕುರಿತಾಗಿ ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟ ರಣ್‌ದೀಪ್ ಹೂಡಾ ಫೇಸ್‌ಬುಕ್‌ನಲ್ಲಿ ಅರ್ಥಪೂರ್ಣವೆನಿಸುವಂತಹ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ.
40 ರ ಹರೆಯದ ಹೂಡಾ ಮಾಡಿರುವ ಪೋಸ್ಟ್‌ನಲ್ಲಿ ಜನರು ಸಾಮಾಜಿಕ ತಾಣಗಳಿಂದ ದೂರ ಇರುವಂತೆ ಕರೆ ನೀಡಿದ್ದಾರೆ. ಮಾತ್ರವಲ್ಲದೆ ಧಾರ್ಮಿಕ ವಿಚಾರಗಳ ಕುರಿತಾಗಿ ಚರ್ಚೆಗಳ ಸುದ್ದಿಗಳನ್ನು ವೀಕ್ಷಿಸದೇ ಇರುವಂತೆ ಮನವಿ ಮಾಡಿದ್ದಾರೆ.
ಪೋಸ್ಟ್‌ನಲ್ಲೇನಿದೆ?
‘ನೀವು ಮುಸ್ಲಿಮರಾಗಿದ್ದರೆ ನೀವು ಸಾವಿರಾರು ವರ್ಷಗಳಿಂದ ಬದುಕಿರುವ ಈ ದೇಶ ಅಸುರಕ್ಷಿತ ಎನಿಸುತ್ತದೆ.ನೀವು ದಲಿತರೆ, ಪ್ರತೀ ಕ್ಷಣವೂ ಅವಮಾನ ಅನುಭವಿಸಬೇಕಾಗುತ್ತದೆ.ನೀವು ಹಿಂದೂಗಳೇ, ಪ್ರತೀ ಕ್ಷಣ ದೇಶದ ಎಲ್ಲೆಡೆ ಗೋವುಗಳನ್ನು ವಧಿಸಲಾಗುತ್ತಿದೆ ಎಂದು ಯೋಚಿಸಬೇಕಾಗುತ್ತದೆ.ನೀವು ಜೈನರೇ,ನಿಮ್ಮ ಧರ್ಮನಿಷ್ಠೆಯೊಂದಿಗೆ ರಾಜಿ ಮಾಡಿಕೊಂಡಿದ್ದೀರಿ ಎನಿಸುತ್ತದೆ.ನೀವು ಪಂಜಾಬಿಗಳೇ ಪ್ರತೀ ಯುವಕನೂ ಮಾದಕ ದೃವ್ಯ ವ್ಯಸನಿ ಎನಿಸುತ್ತದೆ.ಅದಕ್ಕಾಗಿ ನೀವು ಒಂದು ಕೆಲಸಮಾಡಿ,ಸಾಮಾಜಿಕ ತಾಣಗಳಿಂದ ದೂರವಿರಿ, ನ್ಯೂಸ್ ನೋಡಬೇಡಿ, ಧಾರ್ಮಿಕ ವಿಚಾರಗಳ ಚರ್ಚೆಗಳಿಂದ ದೂರವಿರಿ.ಆವಾಗ ನಿಮಗೆ ವಿಶ್ವದ ಅತ್ಯುತ್ತಮ ದೇಶದಲ್ಲಿ ವಾಸಿಸುತ್ತಿದ್ದೀರಿ ಎನ್ನುವುದು ಅರಿವಾಗುತ್ತದೆ’ ಎಂದು ಬರೆದಿದ್ದಾರೆ.
ಹೂಡಾ ಮಾಡಿರುವ ಈ ಪೋಸ್ಟ್ ಭಾರೀ ಪ್ರಮಾಣದಲ್ಲಿ ಹಂಚಿಕೊಂಡಿದ್ದು ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.