ಮುಂಬೈ: ಗೇಮಿಂಗ್ ಬೆಟ್ಟಿಂಗ್ Appನಲ್ಲಿ ಶಾಮೀಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಬಾಲಿವುಡ್ ನಟ ರಣಬೀರ್ ಕಪೂರ್ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಇದನ್ನೂ ಓದಿ:LPG Cylinders: ಪ್ರಧಾನಮಂತ್ರಿ ಉಜ್ವಲ ಸ್ಕೀಮ್ ಸಬ್ಸಿಡಿ ಏರಿಕೆ, 600 ರೂ.ಗೆ LPG ಸಿಲಿಂಡರ್
ಮಹಾದೇವ್ ಬುಕ್ App ಆನ್ ಲೈನ್ ಬೆಟ್ಟಿಂಗ್ ಫ್ಲ್ಯಾಟ್ ಫಾರಂ ಆಗಿದ್ದು, ಈ App ಮೂಲಕ ಕಾನೂನು ಬಾಹಿರವಾಗಿ ಹಣಕಾಸು ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಮತ್ತು ಮುಂಬೈ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು.
ಮಹಾದೇವ್ ಆನ್ ಲೈನ್ ಬುಕ್ App ಕಾನೂನು ಬಾಹಿರ ಬೆಟ್ಟಿಂಗ್ ವೆಬ್ ಸೈಟ್ ಆಗಿದ್ದು, ಈ App ಹೊಸ ಬಳಕೆದಾರರನ್ನು ಸೆಳೆದು ಯೂಸರ್ ಐಡಿಯನ್ನು ಕ್ರಿಯೇಟ್ ಮಾಡಿ ಅದರ ಮೂಲಕ ಬೇನಾಮಿ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ ಆರೋಪಿಸಿದೆ.
ದುಬೈಯಲ್ಲಿ ವಾಸ್ತವ್ಯ ಹೂಡಿರುವ ಸೌರಭ್ ಚಂದ್ರಾಕರ್ ಮತ್ತು ರವಿ ಉಪ್ಪಳ ನೇತೃತ್ವದ ಕಂಪನಿ ಬೆಟ್ಟಿಂಗ್ Appಗಳ ವಹಿವಾಟು ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ 417 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿತ್ತು. 2023ರ ಫೆಬ್ರವರಿಯಲ್ಲಿ ದುಬೈನಲ್ಲಿ ಚಂದ್ರಾಕರ್ ವಿವಾಹಕ್ಕಾಗಿ ಬರೋಬ್ಬರಿ 200 ಕೋಟಿ ರೂಪಾಯಿ ವ್ಯಯಿಸಿದ್ದ ನಂತರ ಈ ಹಗರಣ ಬೆಳಕಿಗೆ ಬಂದಿತ್ತು. ಚಂದ್ರಾಕರ್ ವಿವಾಹ ಕಾರ್ಯಕ್ರಮದಲ್ಲಿ ರಣಬೀರ್ ಕಪೂರ್ ಕೂಡಾ ಭಾಗಿಯಾಗಿರುವುದಾಗಿ ವರದಿ ತಿಳಿಸಿದೆ.
ಚಂದ್ರಾಕರ್ ವಿವಾಹ ಕಾರ್ಯಕ್ರಮದಲ್ಲಿ ಬಾಲಿವುಡ್ ನ ಘಟಾನುಘಟಿಗಳಾದ ಟೈಗರ್ ಶ್ರಾಫ್, ಸನ್ನಿ ಲಿಯೋನ್, ನೇಹಾ ಕಕ್ಕರ್, ವಿಶಾಲ್ ದದ್ಲಾನಿ, ಭಾರ್ತಿ ಸಿಂಗ್, ಭಾಗ್ಯಶ್ರೀ, ಕೃತಿ ಖರಬಂದಾ, ರಹಾತ್ ಫತೇಹ್ ಅಲಿ ಖಾನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.