ಪಣಜಿ: ಭಾರತೀಯ ಚಿತ್ರರಂಗದ ಪ್ರಸಿದ್ಧ ನಟ ರಾಜ್ ಕಪೂರ್ ರ ಹತ್ತು ಪ್ರಮುಖ ಚಲನಚಿತ್ರಗಳ್ನು ಪುನರ್ ರೂಪಿಸಿದ್ದು (ರೆಸ್ಟೋರ್ಡ್), ಮುಂದಿನ ತಿಂಗಳಲ್ಲಿ ಸಿನಿ ಪ್ರೇಕ್ಷಕರಿಗೆ ವೀಕ್ಷಣೆಗೆ ಚಿತ್ರ ಮಂದಿರಗಳಲ್ಲಿ ಲಭ್ಯವಾಗಲಿದೆ.
ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಇಫಿ) 55 ಆವೃತ್ತಿಯಲ್ಲಿ ರಾಜಕಪೂರ್ ರ ಜನ್ಮ ಶತಮಾನೋತ್ಸವ ಸಂಸ್ಮರಣೆಯಲ್ಲಿ ಭಾಗವಹಿಸಿದ್ದ ಅವರ ಮೊಮ್ಮಗ ನಟ ರಣಬೀರ್ ಕಪೂರ್, ನನ್ನ ಅಜ್ಜನ ಚಲನಚಿತ್ರಗಳು ಇಂದಿಗೂ ಪ್ರಸ್ತುತ. ಹಾಗಾಗಿಯೇ ಅವುಗಳ ಪುನರ್ ರೂಪಣೆ ಮೂಲಕ ಸಂರಕ್ಷಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಎನ್ ಎಫ್ ಡಿಸಿ, ಎನ್ ಎಫ್ ಎ ಐ ಹಾಗೂ ಫಿಲ್ಮ್ ಹೆರಿಟೇಜ್ ಫೌಂಡೇಷನ್ ಸಂಯುಕ್ತವಾಗಿ ಈಗಾಗಲೇ 10 ಸಿನಿಮಾಗಳನ್ನು ಪುನರ್ ರೂಪಿಸಿವೆ. ಉಳಿದವುಗಳ ಸಂರಕ್ಷಣೆಯೂ ಆಗಬೇಕಿದೆ. ಮುಂಬರುವ ಡಿಸೆಂಬರ್ ನಲ್ಲಿ ಪುನರ್ ರೂಪಿತ ಚಲನಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ ಎಂದರು.
ರಾಜ್ ಕಪೂರರ ಹಲವು ಚಿತ್ರಗಳು ಸಾರ್ವಕಾಲಿಕ ಮೌಲ್ಯವನ್ನು ಹೊಂದಿರುವಂಥವು. ಆವಾರದಲ್ಲಿನ ಜಾತಿವಾದ, ಶ್ರೀ 420 ಯಲ್ಲಿ ದುರಾಸೆ ಮತ್ತು ಆಕಾಂಕ್ಷೆಯ ಪರಿಣಾಮಗಳು, ರಾಮ್ ತೆರೆ ಗಂಗಾ ಮೈಲಿಯಂಥ ಮಹಿಳೆಯರ ಸವಾಲುಗಳನ್ನು ಚರ್ಚಿಸಿದವು. ಅವೆಲ್ಲವೂ ಇಂದಿನ ವಿಷಯಗಳೇ ಎಂದರು.
ಭಾರತೀ ಚಿತ್ರರಂಗಕ್ಕೆ ರಾಜ್ ಕಪೂರರ ಕೊಡುಗೆ ಅಪಾರ. ಮುಖ್ಯವಾಗಿ ಚಿತ್ರರಂಗದ ಬುನಾದಿಯನ್ನು ಗಟ್ಟಿ ಮಾಡುವಂಥ ಚಿತ್ರಗಳು. ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿದ್ದು, ಗಡಿ, ಪ್ರದೇಶ ಎಲ್ಲವನ್ನೂ ಮೀರಿ ಬಲ್ಲವು ಎಂದರು ರಣಬೀರ್ ಕಪೂರ್.
ಈ ಗೋಷ್ಟಿಯನ್ನು ಚಿತ್ರ ನಿರ್ದೇಶಕ ರಾಹುಲ್ ರವಲಿ ನಡೆಸಿಕೊಟ್ಟರು.
“ನನ್ನ ತಂದೆ ಹಾಕಿಕೊಟ್ಟ ಮಾರ್ಗದಲ್ಲೇ ಮುನ್ನಡೆಯುತ್ತಿರುವೆ. ನಮ್ಮ ಕ್ಷೇತ್ರದ ಪರಿಸರವನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಾಗು ಸಾಮಾಜಿಕ ಸವಾಲುಗಳನ್ನು ಅರಿಯುವ ಬಗೆಯನ್ನು ಕಲಿಸಿದ್ದಾರೆ. ಅವೆಲ್ಲವೂ ನನ್ನೊಳಗೆ ಚಿತ್ರರಂಗದ ಬಗ್ಗೆ ಆಸ್ಥೆ ಬೆಳೆಸಿತುʼ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಬಾರಿ ಇಫಿ ಉತ್ಸವದಲ್ಲಿ ಚಿತ್ರರಂಗದ ನಾಲ್ಕು ಮಂದಿಯ ಜನ್ಮ ಶತಮಾನೋತ್ಸವ ಸಂಸ್ಮರಣೆ ನಡೆಸಲಾಗಿದೆ. ನಟ ರಾಜಕಪೂರ್, ಅಕ್ಕಿನೇನಿ ನಾಗೇಶ್ವರರಾವ್, ತಪನ್ ಸಿನ್ಸಾ ಹಾಗೂ ಗಾಯಕ ಮೊಹಮ್ಮದ್ ರಫಿಯವರ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ.