Advertisement

ಕರ್ನಾಟಕ-ತಮಿಳುನಾಡು ದಿಂಡಿಗಲ್‌ ಕದನ

10:02 AM Dec 09, 2019 | sudhir |

ದಿಂಡಿಗಲ್‌ (ತಮಿಳುನಾಡು): 86ನೇ ರಣಜಿ ಟ್ರೋಫಿ ಕ್ರಿಕೆಟ್‌ ಋತು ಸೋಮವಾರದಿಂದ ಆರಂಭವಾಗಲಿದ್ದು, 38 ತಂಡಗಳ ನಡುವೆ ದೇಶದ 60 ತಾಣಗಳಲ್ಲಿ “ದೇಶಿ ಕ್ರಿಕೆಟ್‌ ಸಮ್ರಾಟ’ ಪಟ್ಟಕ್ಕೆ ಸ್ಪರ್ಧೆ ನಡೆಯಲಿದೆ. ಈಗಾಗಲೇ ಪ್ರಸಕ್ತ ಸಾಲಿನ ವಿಜಯ್‌ ಹಜಾರೆ ಟ್ರೋಫಿ ಮತ್ತು ಸಯ್ಯದ್‌ ಮುಷ್ತಾಕ್‌ ಅಲಿ ಕೂಟಗಳಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿರುವ ಕರ್ನಾಟಕ, ರಣಜಿಯಲ್ಲೂ ಫೇವರಿಟ್‌ ಆಗಿದೆ.

Advertisement

“ಬಿ’ ವಿಭಾಗದಲ್ಲಿ ಸ್ಥಾನ ಪಡೆದಿರುವ ಕರ್ನಾಟಕ, ಮೊದಲ ಪಂದ್ಯದಲ್ಲಿ ತಮಿಳು ನಾಡನ್ನು ಎದುರಿಸಲಿದೆ. ದಿಂಡಿಗಲ್‌ನಲ್ಲಿ ನಡೆ ಯುವ ಈ ಮುಖಾಮುಖೀ ತಮಿಳುನಾಡು ಪಾಲಿಗೆ ತವರು ಪಂದ್ಯವಾಗಿದೆ.

ವಿಜಯ್‌ ಹಜಾರೆ ಮತ್ತು ಸಯ್ಯದ್‌ ಮುಷ್ತಾಕ್‌ ಅಲಿ ಕೂಟಗಳ ಫೈನಲ್‌ಗ‌ಳೆರಡರಲ್ಲೂ ತಮಿಳುನಾಡನ್ನೇ ಮಣಿಸಿ ಚಾಂಪಿಯನ್‌ ಆದ ಕರ್ನಾಟಕವೀಗ ಇದೇ ಜೋಶ್‌ನಲ್ಲಿ ಮತ್ತೆ ನೆರೆಯ ರಾಜ್ಯದ ಸವಾಲನ್ನು ಎದುರಿಸಲಿದೆ. ಹೀಗಾಗಿ ತಮಿಳುನಾಡು ಪಾಲಿಗಿದು ಸೇಡಿನ ಪಂದ್ಯವಾಗಿದೆ.

ಅನುಭವಿ ದಿನೇಶ್‌ ಕಾರ್ತಿಕ್‌ ನಾಯಕತ್ವ ಬಿಟ್ಟುಕೊಟ್ಟ ಕಾರಣ ಯುವ ಆಲ್‌ರೌಂಡರ್‌ ವಿಜಯ್‌ ಶಂಕರ್‌ ತಮಿಳುನಾಡು ತಂಡವನ್ನು ಮುನ್ನಡೆಸುತ್ತಿದ್ದಾರೆ. ಇನ್ನೊಂದೆಡೆ ಮನೀಷ್‌ ಪಾಂಡೆ ಗೈರಲ್ಲಿ ಕರ್ನಾಟಕದ ಸಾರಥ್ಯ ನಾಯರ್‌ ಪಾಲಾಗಿದೆ. ಪಾಂಡೆ ಸದ್ಯ ಟೀಮ್‌ ಇಂಡಿಯಾ ದಲ್ಲಿದ್ದು, ಮೊದಲೆರಡು ರಣಜಿ ಪಂದ್ಯಗಳಿಂದ ದೂರ ಉಳಿಯುವ ಸಾಧ್ಯತೆ ಇದೆ.

ನೆರವಿಗೆ ಇದ್ದಾರೆ ಅಗರ್ವಾಲ್‌
ಭಾರತ ತಂಡದಲ್ಲಿರುವ ಮತ್ತೂಬ್ಬ ಆಟಗಾರ ಕೆ.ಎಲ್‌. ರಾಹುಲ್‌ ಸೇವೆಯೂ ರಾಜ್ಯಕ್ಕೆ ಲಭಿಸದು. ಆದರೆ ಟೆಸ್ಟ್‌ ಓಪನರ್‌ ಆಗಿ ಭರ್ಜರಿ ಯಶಸ್ಸು ಸಾಧಿಸಿರುವ ಮಾಯಾಂಕ್‌ ಅಗರ್ವಾಲ್‌ ಕರ್ನಾಟಕದ ನೆರವಿಗೆ ಇದ್ದಾರೆ. ರಣಜಿ ಮುಗಿಯುವ ತನಕ ಭಾರತಕ್ಕೆ ಯಾವುದೇ ಟೆಸ್ಟ್‌ ಸರಣಿ ಇಲ್ಲದ ಕಾರಣ ಅಗರ್ವಾಲ್‌ ಸೇವೆ ಈ ಕೂಟದುದ್ದಕ್ಕೂ ಲಭಿಸುವುದು ರಾಜ್ಯದ ಪಾಲಿಗೊಂದು ಸಿಹಿ ಸುದ್ದಿ.

Advertisement

ಕಳೆದ ಋತುವಿನಲ್ಲಿ ಅಗರ್ವಾಲ್‌ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶಿಸಿರಲಿಲ್ಲ. ಆದರೆ ಈ ಬಾರಿ ಅವರು ಪ್ರಚಂಡ ಫಾರ್ಮ್ನಲ್ಲಿದ್ದು, ಅಪಾರ ಅನುಭವದೊಂದಿಗೆ ಕಣಕ್ಕಿಳಿಯಲಿದ್ದಾರೆ. ಉಳಿದ ಆಟಗಾರರಿಗೆ ಸ್ಫೂರ್ತಿ ಆಗಲಿದ್ದಾರೆ ಎಂಬುದು ಕೋಚ್‌ ಯೆರೇ ಗೌಡ ವಿಶ್ವಾಸ.

ಯುವ ಓಪನರ್‌ ದೇವದತ್ತ ಪಡಿಕ್ಕಲ್‌ ಕೂಡ ಅಮೋಘ ಬ್ಯಾಟಿಂಗ್‌ ಲಯದಲ್ಲಿದ್ದಾರೆ. ಕಳೆದ ವರ್ಷ 5 ರಣಜಿ ಪಂದ್ಯಗಳಿಂದ 3 ಅರ್ಧ ಶತಕ ಬಾರಿಸಿದ ಪಡಿಕ್ಕಲ್‌, ಈ ಬಾರಿ ಇನ್ನಷ್ಟು ಹುರುಪಿನಲ್ಲಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ಅಭಿಮನ್ಯು ಮಿಥುನ್‌, ಪ್ರಸಿದ್ಧ್ ಕೃಷ್ಣ ಗೈರು ಹಿನ್ನಡೆಯಾಗಿ ಪರಿಣಮಿಸ ಬಹುದು. ಆದರೆ ಹೊಸ ಮುಖವಾಗಿರುವ ಕೆ.ಎಸ್‌. ದೇವಯ್ಯ “ವೆರೈಟಿ’ ಕೊಡಬಲ್ಲರೆಂಬ ನಂಬಿಕೆ ಇದೆ. ತಂಡದ ಬಹುತೇಕ ವೇಗಿಗಳು ಔಟ್‌ ಸ್ವಿಂಗ್‌ನಲ್ಲಿ ಪರಿಣತರಾಗಿರುವುದು ಕರ್ನಾಟಕ ಪಾಲಿಗೊಂದು ಪ್ಲಸ್‌ ಪಾಯಿಂಟ್‌. ಆಲ್‌ರೌಂಡರ್‌ಗಳಾದ ಶ್ರೇಯಸ್‌ ಗೋಪಾಲ್‌, ಕೆ. ಗೌತಮ್‌ ಘಾತಕವಾಗಿ ಎರಗಬೇಕಿದೆ.

ಕರ್ನಾಟಕ
ಕರುಣ್‌ ನಾಯರ್‌ (ನಾಯಕ), ಅಗರ್ವಾಲ್‌, ದೇವದತ್ತ ಪಡಿಕ್ಕಲ್‌, ಡೇಗ ನಿಶ್ಚಲ್‌, ಆರ್‌. ಸಮರ್ಥ್, ಕೆ. ಗೌತಮ್‌, ಎಸ್‌. ಶರತ್‌, ಬಿ.ಆರ್‌. ಶರತ್‌, ರೋನಿತ್‌ ಮೋರೆ, ಶ್ರೇಯಸ್‌ ಗೋಪಾಲ್‌, ಜೆ. ಸುಚಿತ್‌, ಪವನ್‌ ದೇಶಪಾಂಡೆ, ಡೇವಿಡ್‌ ಮಥಾಯಿಸ್‌, ವಿ. ಕೌಶಿಕ್‌, ದೇವಯ್ಯ.

ತಮಿಳುನಾಡು
ವಿಜಯ್‌ ಶಂಕರ್‌ (ನಾಯಕ), ಮುರಳಿ ವಿಜಯ್‌, ಅಭಿನವ್‌ ಮುಕುಂದ್‌, ಬಾಬಾ ಅಪರಾಜಿತ್‌, ದಿನೇಶ್‌ ಕಾರ್ತಿಕ್‌, ಅಭಿಷೇಕ್‌ ತನ್ವಾರ್‌, ಆರ್‌. ಸಾಯಿ ಕಿಶೋರ್‌, ಕೆ. ವಿಘ್ನೇಶ್‌, ಆರ್‌. ಅಶ್ವಿ‌ನ್‌, ಮುರುಗನ್‌ ಅಶ್ವಿ‌ನ್‌, ಟಿ. ನಟರಾಜನ್‌, ಶಾರೂಖ್‌ ಖಾನ್‌, ಎನ್‌. ಜಗದೀಶನ್‌, ಕೆ. ಮುಕುಂತ್‌, ಎಂ. ಸಿದ್ಧಾರ್ಥ್.

ರಣಜಿ ತಂಡಗಳು
ಎ ವಿಭಾಗ: ಆಂಧ್ರಪ್ರದೇಶ, ಬಂಗಾಲ, ದಿಲ್ಲಿ, ಗುಜರಾತ್‌, ಹೈದರಾಬಾದ್‌, ಕೇರಳ, ಪಂಜಾಬ್‌, ರಾಜಸ್ಥಾನ, ವಿದರ್ಭ.

ಬಿ ವಿಭಾಗ: ಬರೋಡ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮುಂಬಯಿ, ರೈಲ್ವೇಸ್‌, ಸೌರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ.

ಸಿ ವಿಭಾಗ: ಅಸ್ಸಾಮ್‌, ಚತ್ತೀಸ್‌ಗಢ, ಹರ್ಯಾಣ, ಜಮ್ಮು ಕಾಶ್ಮೀರ, ಜಾರ್ಖಂಡ್‌, ಮಹಾರಾಷ್ಟ್ರ, ಒಡಿಶಾ, ಸರ್ವೀಸಸ್‌, ತ್ರಿಪುರ, ಉತ್ತರಾಖಂಡ್‌.

ಪ್ಲೇಟ್‌ ಗ್ರೂಪ್‌: ಅರುಣಾಚಲ ಪ್ರದೇಶ, ಬಿಹಾರ್‌, ಚಂಡೀಗಢ, ಗೋವಾ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌, ಪುದುಚೇರಿ, ಸಿಕ್ಕಿಂ.

Advertisement

Udayavani is now on Telegram. Click here to join our channel and stay updated with the latest news.

Next