Advertisement

Ranaji Trophy: ಹೊರಮೈದಾನ ಒದ್ದೆ : ಕರ್ನಾಟಕ-ಕೇರಳ ಪಂದ್ಯಕ್ಕೆ ತೊಂದರೆ

08:00 AM Oct 19, 2024 | Team Udayavani |

ಬೆಂಗಳೂರು: ನಗರದಲ್ಲಿ ಗುರುವಾರ ಸುರಿದ ಭಾರೀ ಮಳೆಯಿಂದಾಗಿ ಆಲೂರಿನಲ್ಲಿ ಹೊರಮೈದಾನ ಒದ್ದೆಯಾಗಿದ್ದರಿಂದ ಕರ್ನಾಟಕ ಮತ್ತು ಕೇರಳ ನಡುವಣ ರಣಜಿ ಟ್ರೋಫಿಯ ಎಲೈಟ್‌ “ಸಿ’ ಬಣದ ದ್ವಿತೀಯ ಪಂದ್ಯದ ಮೊದಲ ದಿನ ಕೇವಲ 23 ಓವರ್‌ಗಳ ಆಟ ನಡೆಯಿತು.

Advertisement

ಹೊರಮೈದಾನ ಒದ್ದೆಯಾಗಿದ್ದರಿಂದ ಪಂದ್ಯ ತುಂಬಾ ತಡವಾಗಿ ಆರಂಭಗೊಂಡಿತ್ತು. ಟಾಸ್‌ ಗೆದ್ದ ಕರ್ನಾಟಕ ತಂಡವು ಪಿಚ್‌ನ ಲಾಭವೆತ್ತಲು ಮೊದಲು ಫೀಲ್ಡಿಂಗ್‌ ನಡೆಸಲು ನಿರ್ಧರಿಸಿತು. ಆದರೆ ಕೇರಳದ ಆರಂಭಿಕ ಆಟಗಾರರು ಬಹಳಷ್ಟು ಎಚ್ಚರಿಕೆಯ ಆಟವಾಡಿ 23 ಓವರ್‌ ಆಡಿ ಯಾವುದೇ ವಿಕೆಟ್‌ ಕಳೆದುಕೊಳ್ಳದೇ 88 ರನ್‌ ಗಳಿಸಿದರು. ಮಂದ ಬೆಳಕಿನಿಂದ ದಿನದಾಟ ನಿಲ್ಲಿಸಿದಾಗ ಕೇರಳ 88 ರನ್‌ ಗಳಿಸಿತ್ತು.

ಇನ್ನಿಂಗ್ಸ್‌ ಆರಂಭಿಸಿದ ರೋಹನ್‌ ಕುಣ್ಣುಮ್ಮಾಲ್‌ ಮತ್ತು ವತ್ಸಲ್‌ ಗೌಡ್‌ ಅವರು ಎಚ್ಚರಿಕೆಯ ಆಟವಾಡಿದರು. ಕರ್ನಾಟಕ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕುಣ್ಣುಮ್ಮಾಲ್‌ 74 ಎಸೆತ ಎದುರಿಸಿ 9 ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 57 ರನ್‌ ಗಳಿಸಿ ಅಜೇಯರಾಗಿ ಉಳಿದರು. ಅವರಿಗೆ ಉಪಯುಕ್ತ ಬೆಂಬಲ ನೀಡಿದ ವತ್ಸಲ್‌ ಗೌಡ್‌ 64 ಎಸೆಗಳಿಂದ 31 ರನ್‌ ಗಳಿಸಿ ಆಡುತ್ತಿದ್ದಾರೆ.

ಸಂಕ್ಷಿಪ್ತ ಸ್ಕೋರು: ಕೇರಳ ಪ್ರಥಮ ಇನ್ನಿಂಗ್ಸ್‌ 23 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 88 (ರೋಹನ್‌ ಕುಣ್ಣುಮ್ಮಾಲ್‌ 57 ಬ್ಯಾಟಿಂಗ್‌, ವತ್ಸಲ್‌ ಗೌಡ್‌ 31 ಬ್ಯಾಟಿಂಗ್‌).

ಮುಂಬಯಿಗೆ ಮೊದಲ ಇನ್ನಿಂಗ್ಸ್‌  ಮುನ್ನಡೆ
ಮುಂಬಯಿ: ಎಲೈಟ್‌ “ಎ’ ಬಣದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬಯಿ ವಿರುದ್ಧ ಮಹಾರಾಷ್ಟ್ರ ತಂಡವು ಕೇವಲ 126 ರನ್ನಿಗೆ ಆಲೌಟಾಗಿದೆ. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಆರಂಭಿಸಿದ ಮುಂಬಯಿ ತಂಡವು ದಿನದಾಟದ ಅಂತ್ಯಕ್ಕೆ ಮೂರು ವಿಕೆಟಿಗೆ 220 ರನ್‌ ಗಳಿಸಿದೆ. ತಂಡ ಈಗಾಗಲೇ ಮೊದಲ ಇನ್ನಿಂಗ್ಸ್‌ನಲ್ಲಿ 94 ರನ್‌ ಮುನ್ನಡೆ ಪಡೆದಿದೆ.

Advertisement

ಆರಂಭಿಕ ಆಟಗಾರ ಆಯುಷ್‌ ಮಾತ್ರೆ ಅವರ ಅಮೋಘ ಶತಕ ಹಾಗೂ ಅಜಿಂಕ್ಯ ರಹಾನೆ ಮತ್ತು ಶ್ರೇಯಸ್‌ ಅಯ್ಯರ್‌ ಜತೆಗೂಡಿ ಪೇರಿಸಿದ ಉತ್ತಮ ಜತೆಯಾಟದ ಆಟದಿಂದಾಗಿ ಮುಂಬಯಿ ಮುನ್ನಡೆ ಸಾಧಿಸುವಂತಾಯಿತು. ಆಯುಷ್‌ 163 ಎಸೆತ ಎದುರಿಸಿ 127 ರನ್‌ ಗಳಿಸಿ ಆಡುತ್ತಿದ್ದಾರೆ. 17 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದಾರೆ. ಅವರು ರಹಾನೆ ಜತೆ ಮೂರನೇ ವಿಕೆಟಿಗೆ 99 ಮತ್ತು ಅಯ್ಯರ್‌ ಜತೆ ಮುರಿಯದ ನಾಲ್ಕನೇ ವಿಕೆಟಿಗೆ ಈಗಾಗಲೇ 97 ರನ್‌ ಪೇರಿಸಿದ್ದಾರೆ. ಅಯ್ಯರ್‌ 45 ರನ್‌ ಗಳಿಸಿ ಆಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next