Advertisement

Ranji Trophy: ಬಂಗಾಲಕ್ಕೆ ಅನುಸ್ತೂಪ್‌ ಬೆಂಗಾವಲು… 5ಕ್ಕೆ 249 ರನ್‌

11:19 PM Nov 06, 2024 | Team Udayavani |

ಬೆಂಗಳೂರು: ಬುಧವಾರ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಮೊದಲ್ಗೊಂಡ 4ನೇ ಸುತ್ತಿನ ರಣಜಿ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ತಾಳ್ಮೆಯ ಆಟವಾಡಿದ ಪಶ್ಚಿಮ ಬಂಗಾಲ 5 ವಿಕೆಟ್‌ ನಷ್ಟಕ್ಕೆ 249 ರನ್‌ ಗಳಿಸಿದೆ.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಂಗಾಲ ಪರ ನಾಯಕ ಅನುಸ್ತೂಪ್‌ ಮಜುಮಾªರ್‌ ಶತಕ ಬಾರಿಸಿ ಮಿಂಚಿದರು. ಸುದೀಪ್‌ ಚಟರ್ಜಿ ಅರ್ಧ ಶತಕ ಹೊಡೆದರು. ಶಾಬಾಜ್‌ ಅಹ್ಮದ್‌ ಅಜೇಯ 54 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮೊದಲನೇ ದಿನದಾಟ ಮಂದಬೆಳಕಿನ ಕಾರಣ ಅರ್ಧ ಗಂಟೆ ಮುಂಚಿತವಾಗಿ ಮುಗಿಯಿತು.

ಕರ್ನಾಟಕದ ಬೌಲರ್‌ಗಳ ತಾಳ್ಮೆ ಪರೀಕ್ಷಿಸಿದ ಅನುಸ್ತೂಪ್‌ 164 ಎಸೆತ ಎದುರಿಸಿ 16 ಬೌಂಡರಿಗಳೊಂದಿಗೆ 101 ರನ್‌ ಬಾರಿಸಿದರು. ಇವರನ್ನು ಔಟ್‌ ಮಾಡಲು ಬಳಸಿದ ತಂತ್ರಗಳೆಲ್ಲ ಕೈಕೊಟ್ಟವು. ಕಡೆಗೂ ಅವರು ಶ್ರೇಯಸ್‌ ಗೋಪಾಲ್‌ ಬೌಲಿಂಗ್‌ನಲ್ಲಿ ಲೆಗ್‌ ಬಿಫೋರ್‌ ಆಗಿ ಹೊರಬಿದ್ದರು. ಆರಂಭಿಕ ಸುದೀಪ್‌ ಚಟರ್ಜಿ 120 ಎಸೆತ ಎದುರಿಸಿ 55 ರನ್‌ ಬಾರಿಸಿದರು. ಇದರಲ್ಲಿ 5 ಬೌಂಡರಿಗಳಿದ್ದವು.

ಎಡಗೈ ಬ್ಯಾಟರ್‌, ಆಲ್‌ರೌಂಡರ್‌ ಶಾಬಾಜ್‌ ಅಹ್ಮದ್‌ ಅತ್ಯುತ್ತಮವಾಗಿ ಬ್ಯಾಟ್‌ ಮಾಡಿದರು. 103 ಎಸೆತ ಎದುರಿಸಿರುವ ಅವರು 6 ಬೌಂಡರಿ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇವರೊಂದಿಗೆ ವೃದ್ಧಿಮಾನ್‌ ಸಹಾ 6 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಆರಂಭಕಾರ ಶುವಂ ಡೇ (0) ಮೊದಲ ಓವರ್‌ನಲ್ಲೇ ಕೌಶಿಕ್‌ ಬಲೆಗೆ ಬಿದ್ದರು. ಸುದೀಪ್‌ ಘರಾಮಿ (5), ಅವಿನ್‌ ಘೋಷ್‌ (22) ಅಗ್ಗಕ್ಕೆ ಔಟಾದ ಮತ್ತಿಬ್ಬರು.

Advertisement

ಅಭಿಲಾಷ್‌ ಶೆಟ್ಟಿ ಮೊದಲ ಆಟ
ಕರ್ನಾಟಕದ ಪರ ಬಲಗೈ ವೇಗಿ ವಾಸುಕಿ ಕೌಶಿಕ್‌ 29 ರನ್‌ ನೀಡಿ 3 ವಿಕೆಟ್‌ ಉರುಳಿಸಿದರು. ಅಭಿಲಾಷ್‌ ಶೆಟ್ಟಿ, ಶ್ರೇಯಸ್‌ ಗೋಪಾಲ್‌ಗೆ ತಲಾ ಒಂದು ವಿಕೆಟ್‌ ಲಭಿಸಿದೆ.

ಇದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೂಡುಗಿಳಿಯಾರಿನ ಅಭಿಲಾಷ್‌ ಶೆಟ್ಟಿ ಅವರ ಪದಾರ್ಪಣ ರಣಜಿ ಪಂದ್ಯವಾಗಿದೆ. ಎಡಗೈ ಮಧ್ಯಮ ವೇಗಿಯಾಗಿರುವ ಅವರು ಅವಿನ್‌ ಘೋಷ್‌ ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರು. ಅಭಿಲಾಷ್‌ ಅವರ ಮೊದಲ ದಿನದ ಬೌಲಿಂಗ್‌ ಸಾಧನೆ ಹೀಗಿತ್ತು: 15-4-52-1.

ಸಂಕ್ಷಿಪ್ತ ಸ್ಕೋರ್‌: ಬಂಗಾಲ-5ಕ್ಕೆ 249 (ಅನುಸ್ತೂಪ್‌ ಮಜುಮಾªರ್‌ 101, ಸುದೀಪ್‌ ಚಟರ್ಜಿ 55, ಶಹಬಾಜ್‌ ಅಹ್ಮದ್‌ ಅಜೇಯ 54, ವಾಸುಕಿ ಕೌಶಿಕ್‌ 29ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next