ರಾಜ್‌ಕೋಟ್: ಪ್ರತಿಷ್ಠಿತ ದೇಶಿ ಕ್ರಿಕೆಟ್ ಕೂಟವಾದ ರಣಜಿ ಟ್ರೋಫಿ ಪಂದ್ಯಾವಳಿಯ ಫೈನಲ್ ಮುಖಾಮುಖೀ ಸೌರಾಷ್ಟ್ರ ಮತ್ತು ಬಂಗಾಲ ನಡುವೆ ಸೋಮವಾರದಿಂದ ರಾಜ್‌ಕೋಟ್‌ನಲ್ಲಿ ಮೊದಲ್ಗೊಳ್ಳಲಿದೆ. ಸತತ 2ನೇ ಫೈನಲ್ ಕಾಣುತ್ತಿರುವ ಸೌರಾಷ್ಟ್ರ ತವರಿನಂಗಳದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.
ಇನ್ನೊಂದೆಡೆ ಬಂಗಾಲ 13 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೆ ನೆಗೆದಿದ್ದು, ಇತಿಹಾಸ ನಿರ್ಮಿಸುವ ತವಕದಲ್ಲಿದೆ. ಅದು 1989-90ರ ಬಳಿಕ ರಣಜಿ ಚಾಂಪಿಯನ್ ಆಗಿಲ್ಲ.
ಸೆಮಿಫೈನಲ್‌ನಲ್ಲಿ ಗುಜರಾತ್ ವಿರುದ್ಧ ಸೌರಾಷ್ಟ್ರ ಮೇಲುಗೈ ಸಾಧಿಸಿದರೆ, ಬಂಗಾಲ ಪ್ರಬಲ ಕರ್ನಾಟಕ ವನ್ನು ಕೆಡವಿದ ಉತ್ಸಾಹದಲ್ಲಿದೆ. ಎರಡೂ ತಂಡಗಳು ಟೀಮ್ ಇಂಡಿಯಾದ ಸದಸ್ಯರ ಸೇರ್ಪಡೆಯಿಂದ ಹೆಚ್ಚು ಬಲಿಷ್ಠವಾಗಿ ಗೋಚರಿಸಿವೆ. ಸೌರಾಷ್ಟ್ರಕ್ಕೆ ಚೇತೇಶ್ವರ್ ಪೂಜಾರ, ಬಂಗಾಲಕ್ಕೆ ವೃದ್ಧಿಮಾನ್ ಸಾಹಾ ಬಲ ನೀಡಲಿದ್ದಾರೆ.
ಸೌರಾಷ್ಟ್ರ ಕಳೆದ ವರ್ಷ ವಿದರ್ಭ ವಿರುದ್ಧ ಫೈನಲ್‌ನಲ್ಲಿ ಎಡವಿ ಚಾಂಪಿಯನ್ ಪಟ್ಟದಿಂದ ದೂರಾಗಿತ್ತು. ಈ ಬಾರಿ ತವರಿನಲ್ಲೇ ಆಡುವುದರಿಂದ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ. ನಾಯಕ ಹಾಗೂ ಪ್ರಧಾನ ವೇಗಿ ಜೈದೇವ್ ಉನಾದ್ಕತ್ ಪ್ರಚಂಡ ಫಾರ್ಮ್ನಲ್ಲಿರುವುದು ಈ ನಿರೀಕ್ಷೆಗೆ ಇನ್ನೊಂದು ಮುಖ್ಯ ಕಾರಣ. ಈ ಋತುವಿನಲ್ಲಿ ಅವರು ಈಗಾಗಲೇ 12.17ರ ಸರಾಸರಿಯಲ್ಲಿ 65 ವಿಕೆಟ್ ಉಡಾಯಿಸಿದ್ದಾರೆ. ಬಿಹಾರದ ಅಶುತೋಷ್ ಅಮಾನ್ ಅವರ ಸಾರ್ವಕಾಲಿಕ ರಣಜಿ ದಾಖಲೆ ಯಿಂದ ಕೇವಲ 3 ವಿಕೆಟ್‌ಗಳ ಹಿನ್ನಡೆಯಲ್ಲಿದ್ದಾರೆ. ಕೇವಲ ಬೌಲಿಂಗ್‌ನಲ್ಲಷ್ಟೇ ಅಲ್ಲ, ನಾಯಕತ್ವದಲ್ಲೂ ಉನಾದ್ಕತ್ ಪ್ರಬುದ್ಧ ನಿರ್ವಹಣೆ ತೋರುತ್ತ ಬಂದಿದ್ದಾರೆ.
ಶೆಲ್ಡನ್ ಜಾಕ್ಸನ್ ಸೌರಾಷ್ಟ್ರ ತಂಡದ ಮತ್ತೋರ್ವ ಪ್ರಮುಖ ಬ್ಯಾಟ್ಸ್‌ಮನ್. ಸೆಮಿಫೈನಲ್‌ನಲ್ಲಿ ಜಾಕ್ಸನ್ ಜಬರ್ದಸ್ತ್ ಪ್ರದರ್ಶನ ನೀಡಿದ್ದರು.
ಬಂಗಾಲ ಸಮತೋಲಿತ ತಂಡ
ಬಂಗಾಲ ಕೂಡ ಸಮತೋಲಿತ ಹಾಗೂ ತಾರಾ ಆಟಗಾರರನ್ನು ಒಳಗೊಂಡ ತಂಡವಾಗಿದೆ. ಬ್ಯಾಟಿಂಗ್‌ನಲ್ಲಿ ಅನುಸ್ತೂಪ್ ಮಜುಮಾªರ್, ಸುದೀಪ್ ಚಟರ್ಜಿ, ಅರ್ನಾಬ್ ನಂದಿ, ನಾಯಕ ಅಭಿಮನ್ಯು ಈಶ್ವರನ್ ಅಪಾಯಕಾರಿ ಯಾಗಬಲ್ಲರು. 10 ಪಂದ್ಯಗಳಿಂದ 672 ರನ್ ಪೇರಿಸಿರುವ ಅನುಭವಿ ಮನೋಜ್ ತಿವಾರಿ ಸೌರಾಷ್ಟ್ರ ಮೇಲೆ ಸವಾರಿ ಮಾಡಿದರೆ ಅಚ್ಚರಿ ಇಲ್ಲ.
ಬಂಗಾಲದ ಬೌಲಿಂಗ್, ಅದರಲ್ಲೂ ಪೇಸ್ ವಿಭಾಗ ಹೆಚ್ಚು ಘಾತಕವಾಗಿದೆ.