Advertisement
ಪ್ರಮುಖ ಬ್ಯಾಟ್ಸ್‌ಮನ್, ಟೆಸ್ಟ್ ಸ್ಪೆಷಲಿಸ್ಟ್ ಖ್ಯಾತಿಯ ಚೇತೇಶ್ವರ್ ಪೂಜಾರ ಜ್ವರದಿಂದ ಕ್ರೀಸ್ ತೊರೆದದ್ದು ಸೌರಾಷ್ಟ್ರಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. 6ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಪೂಜಾರ 24 ಎಸೆತಗಳಿಂದ 5 ರನ್ ಮಾಡಿ ಡ್ರೆಸ್ಸಿಂಗ್ ರೂಮಿಗೆ ವಾಪಸಾದರು. ಗಂಟಲು ನೋವಿನಿಂದಾಗಿ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ದ್ವಿತೀಯ ದಿನ ಬ್ಯಾಟಿಂಗ್ ನಡೆಸುವ ನಿರೀಕ್ಷೆ ಇದೆ ಎಂದು ಸೌರಾಷ್ಟ್ರ ತಂಡದ ನಾಯಕ ಉನಾದ್ಕತ್ ಹೇಳಿದ್ದಾರೆ.
ಸೌರಾಷ್ಟ್ರದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಉತ್ತಮ ಮಟ್ಟದಲ್ಲೇ ಇತ್ತು. ಒಂದು ಹಂತದಲ್ಲಿ ಎರಡೇ ವಿಕೆಟಿಗೆ 163 ರನ್ ಬಾರಿಸಿ ಮುನ್ನುಗ್ಗುತ್ತಿತ್ತು. ಆದರೆ ದಿನದ ಕೊನೆಯ 15 ಓವರ್‌ಗಳಲ್ಲಿ ಬಂಗಾಲ ಬೌಲರ್‌ಗಳು ಭರ್ಜರಿ ಮೇಲುಗೈ ಸಾಧಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. 43 ರನ್ ಅಂತರದಲ್ಲಿ ಸೌರಾಷ್ಟ್ರದ ಕೊನೆಯ 3 ವಿಕೆಟ್ ಉರುಳಿದೆ. ಮಧ್ಯಮ ವೇಗಿ ಆಕಾಶ್ ದೀಪ್ 41ಕ್ಕೆ 3 ವಿಕೆಟ್ ಹಾರಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ಇಶಾನ್ ಪೊರೆಲ್ ಮತ್ತು ಎಡಗೈ ಸ್ಪಿನ್ನರ್ ಶಾಬಾಜ್ ನದೀಂ ಒಂದೊಂದು ವಿಕೆಟ್ ಉರುಳಿಸಿದರು. 81ನೇ ಓವರಿನಲ್ಲಿ ಚೇತನ್ ಸಕಾರಿಯಾ (4) ವಿಕೆಟ್ ಬಿದ್ದೊಡನೆ ದಿನದಾಟವನ್ನು ಕೊನೆಗೊಳಿಸಲಾಯಿತು.
Related Articles
ಸೌರಾಷ್ಟ್ರ ಆರಂಭಿಕರಾದ ಹಾರ್ವಿಕ್ ದೇಸಾಯಿ (38) ಮತ್ತು ಅವಿ ಬರೋಟ್ (54) 37.5 ಓವರ್ ನಿಭಾಯಿಸಿ 82 ರನ್ ಒಟ್ಟುಗೂಡಿಸಿ ಉತ್ತಮ ಅಡಿಪಾಯ ನಿರ್ಮಿಸಿದರು. ಬಳಿಕ ವಿಶ್ವರಾಜ್ ಜಡೇಜ (54) ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಸೆಮಿಫೈನಲ್‌ನಲ್ಲಿ ಶತಕ ಬಾರಿಸಿ ಮಿಂಚಿದ ಶೆಲ್ಡನ್ ಜಾಕ್ಸನ್ (14) ಅವರನ್ನು ಪೊರೆಲ್ ಬೇಗನೇ ಔಟ್ ಮಾಡಿ ಬಂಗಾಲಕ್ಕೆ ಮೇಲುಗೈ ಒದಗಿಸಿದರು.
Advertisement
94 ಎಸೆತಗಳಿಂದ 29 ರನ್ ಮಾಡಿರುವ ಅರ್ಪಿತ್ ವಸವಾಡ ಕ್ರೀಸ್‌ನಲ್ಲಿದ್ದಾರೆ.ಸಂಕ್ಷಿಪ್ತ ಸ್ಕೋರ್: ಸೌರಾಷ್ಟ್ರ-5 ವಿಕೆಟಿಗೆ 206 (ಬರೋಟ್ 54, ವಿ. ಜಡೇಜ 54, ಹಾರ್ವಿಕ್ 38, ವಸವಾಡ ಬ್ಯಾಟಿಂಗ್ 29, ಜಾಕ್ಸನ್ 14, ಆಕಾಶ್ ದೀಪ್ 41ಕ್ಕೆ 3).