Advertisement

ರಣಜಿ: ಪೂಜಾರ-ಜಾಕ್ಸನ್‌ ತ್ರಿಶತಕದ ಜತೆಯಾಟ

10:02 AM Jan 13, 2020 | Team Udayavani |

ರಾಜ್‌ಕೋಟ್‌: ರಣಜಿ ಪಂದ್ಯದ ದ್ವಿತೀಯ ದಿನವೂ ಬ್ಯಾಟಿಂಗ್‌ ವೈಭವವನ್ನು ಮುಂದುವರಿಸಿದ ಚೇತೇಶ್ವರ್‌ ಪೂಜಾರ ಮತ್ತು ಶೆಲ್ಡನ್‌ ಜಾಕ್ಸನ್‌ ಕರ್ನಾಟಕದ ಬೌಲಿಂಗನ್ನು ಧೂಳೀಪಟ ಮಾಡಿದ್ದಾರೆ. ಸೌರಾಷ್ಟó 7 ವಿಕೆಟ್‌ ಕಳೆದುಕೊಂಡು 581 ರನ್‌ ಗಳಿಸಿ ಡಿಕ್ಲೇರ್‌ ಮಾಡಿದೆ. ಕರ್ನಾಟಕ 13 ರನ್‌ ಮಾಡುವಷ್ಟರಲ್ಲಿ ಒಂದು ವಿಕೆಟ್‌ ಉರುಳಿಸಿಕೊಂಡಿದೆ.

Advertisement

ಇನ್‌ಫಾರ್ಮ್ ಆರಂಭಕಾರ ದೇವದತ್ತ ಪಡಿಕ್ಕಲ್‌ ಖಾತೆ ತೆರೆಯುವ ಮೊದಲೇ ಉನಾದ್ಕತ್‌ಗೆ ವಿಕೆಟ್‌ ಒಪ್ಪಿಸಿದರು. ಆರ್‌. ಸಮರ್ಥ್ (6) ಮತ್ತು ರೋಹನ್‌ ಕದಮ್‌ (7) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

394 ರನ್‌ ಜತೆಯಾಟ
ಆತಿಥೇಯ ಸೌರಾಷ್ಟ್ರ ಮೊದಲ ದಿನ 2ಕ್ಕೆ 296 ರನ್‌ ಪೇರಿಸಿ ಬೃಹತ್‌ ಮೊತ್ತದ ಸೂಚನೆ ನೀಡಿತ್ತು. ಪೂಜಾರ 162 ಮತ್ತು ಜಾಕ್ಸನ್‌ 99 ರನ್‌ ಮಾಡಿ ಕ್ರೀಸಿನಲ್ಲಿದ್ದರು. ರವಿವಾರ ಇದೇ ಲಯದಲ್ಲಿ ಸಾಗಿ ತಂಡದ ಮೊತ್ತವನ್ನು ಏರಿಸುತ್ತ ಹೋದರು. 3ನೇ ವಿಕೆಟಿಗೆ 394 ರನ್‌ ಸೂರೆಗೈದು ವಿಜೃಂಭಿಸಿದರು. ಈ ಓಟದ ವೇಳೆ ಪೂಜಾರ ದ್ವಿಶತಕ ಬಾರಿಸಿ ತಮ್ಮ 50ನೇ ಪ್ರಥಮ ದರ್ಜೆ ಸೆಂಚುರಿಯನ್ನು ಸ್ಮರಣೀಯಗೊಳಿಸಿದರೆ, ಜಾಕ್ಸನ್‌ 161ರ ತನಕ ಸಾಗಿದರು.

ಚೇತೇಶ್ವರ್‌ ಪೂಜಾರ ಒಟ್ಟು 390 ಎಸೆತಗಳನ್ನು ಎದುರಿಸಿ 248 ರನ್‌ ಬಾರಿಸಿದರು. ಇದರಲ್ಲಿ 24 ಬೌಂಡರಿ, ಒಂದು ಸಿಕ್ಸರ್‌ ಒಳಗೊಂಡಿತ್ತು. ಜಾಕ್ಸನ್‌ 299 ಎಸೆತಗಳಿಂದ 161 ರನ್‌ ಗಳಿಸಿದರು. ಇದರಲ್ಲಿ 7 ಬೌಂಡರಿ ಹಾಗೂ 6 ಸ್ಫೋಟಕ ಸಿಕ್ಸರ್‌ ಒಳಗೊಂಡಿತ್ತು.

ಸ್ಕೋರ್‌ 427ಕ್ಕೆ ಏರಿದಾಗ ಜಾಕ್ಸನ್‌, ಪವನ್‌ ದೇಶಪಾಂಡೆಗೆ ವಿಕೆಟ್‌ ಒಪ್ಪಿಸಿದರು. ಸ್ಕೋರ್‌ 452 ರನ್‌ ಆದಾಗ ಪೂಜಾರ ವಿಕೆಟ್‌ ಬಿತ್ತು. ಮೋರೆ ಎಸೆತವನ್ನು ಪಡಿಕ್ಕಲ್‌ಗೆ ಕ್ಯಾಚ್‌ ನೀಡಿ ತಮ್ಮ ಮ್ಯಾರಥಾನ್‌ ಇನ್ನಿಂಗ್ಸ್‌ಗೆ ಮಂಗಳ ಹಾಡಿದರು.

Advertisement

ಉನಾದ್ಕತ್‌ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡುವಾಗ ಪ್ರೇರಕ್‌ ಮಂಕಡ್‌ 86 ರನ್‌ ಮಾಡಿ ಅಜೇಯರಾಗಿದ್ದರು.

ಕರ್ನಾಟಕ ಇನ್ನಿಂಗ್ಸ್‌ ಮುನ್ನಡೆ ಪಡೆಯುವುದು ಅನುಮಾನ. ಆದರೆ ಫಾಲೋಆನ್‌ನಿಂದ ಪಾರಾಗಿ ಪಂದ್ಯ ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿದೆ.

ಸಂಕ್ಷಿಪ್ತ ಸ್ಕೋರ್‌
ಸೌರಾಷ್ಟ್ರ-7 ವಿಕೆಟಿಗೆ 581 ಡಿಕ್ಲೇರ್‌ (ಪೂಜಾರ 248, ಜಾಕ್ಸನ್‌ 161, ಮಂಕಡ್‌ ಅಜೇಯ 86, ದುಬೆ 80ಕ್ಕೆ 2, ದೇಶಪಾಂಡೆ 98ಕ್ಕೆ 2, ಸುಚಿತ್‌ 129ಕ್ಕೆ 2). ಕರ್ನಾಟಕ-ಒಂದು ವಿಕೆಟಿಗೆ 13.

Advertisement

Udayavani is now on Telegram. Click here to join our channel and stay updated with the latest news.

Next