Advertisement

ರಣಜಿ: ಕರ್ನಾಟಕ 166ಕ್ಕೆ ಪತನ

10:07 AM Dec 27, 2019 | sudhir |

ಮೈಸೂರು: ಪ್ರವಾಸಿ ಹಿಮಾಚಲ ಪ್ರದೇಶ ಬೌಲರ್‌ಗಳ ಬಿಗು ದಾಳಿಗೆ ನಲುಗಿದ ಆತಿಥೇಯ ಕರ್ನಾಟಕ ತಂಡವು ರಣಜಿ ಲೀಗ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಆಲೌಟಾಗಿದೆ.

Advertisement

ಇಲ್ಲಿನ ಶ್ರೀಕಂಠದತ್ತ ನರಸಿಂಹ ರಾಜಾ ಒಡೆಯರ್‌ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಕರ್ನಾಟಕ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಕನ್ವರ್‌ ಅಭಿನಯ್‌ ಸಿಂಗ್‌ (37ಕ್ಕೆ 5), ರಿಷಿ ಧವನ್‌ (27ಕ್ಕೆ 3) ಮತ್ತು ವೈಭವ್‌ ಅರೋರಾ (41ಕ್ಕೆ 2) ಮಾರಕ ಬೌಲಿಂಗಿಗೆ ತತ್ತರಿಸಿದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 67.2 ಓವರ್‌ಗೆ ಕೇವಲ 166 ರನ್‌ ಗಳಿಸಿ ಆಲೌಟಾಯಿತು. ರಾಜ್ಯದ ಪರ ಕರುಣ್‌ ನಾಯರ್‌ (81 ರನ್‌) ಗರಿಷ್ಠ ರನ್‌ ಹೊರತುಪಡಿಸಿದಂತೆ ಉಳಿದ ಬ್ಯಾಟ್ಸ್‌ಮನ್‌ಗಳು ಭಾರೀ ವೈಫ‌ಲ್ಯ ಅನುಭವಿಸಿದರು.

ರಾಜ್ಯದ ಅಲ್ಪ ಮೊತ್ತಕ್ಕೆ ಉತ್ತರಿಸಲು ಹೊರಟಿರುವ ಹಿಮಾಚಲ ಪ್ರದೇಶ ತಂಡ ಕೂಡ ಸಂಕಷ್ಟಕ್ಕೆ ಸಿಲುಕಿದೆ. ಮೊದಲ ದಿನದ ಆಟದ ಅಂತ್ಯಕ್ಕೆ ಹಿಮಾಚಲ ಪ್ರದೇಶವು ಮೊದಲ ಇನ್ನಿಂಗ್ಸ್‌ ನಲ್ಲಿ 29 ರನ್ನಿಗೆ 3 ವಿಕೆಟ್‌ ಕಳೆದುಕೊಂಡಿದೆ.

ಪ್ರತೀಕ್‌ ಜೈನ್‌ 11ಕ್ಕೆ 2, ವಿ.ಕೌಶಿಕ್‌ 10ಕ್ಕೆ 1 ವಿಕೆಟ್‌ ಉರುಳಿಸಿ ಪ್ರವಾಸಿ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದಾರೆ. ಆರಂಭಿಕ ಬ್ಯಾಟ್ಸ್‌ ಮನ್‌ ಪ್ರಿಯಾಂಶು ಕಾಂದೂರಿ (ಅಜೇಯ 14 ರನ್‌) ಹಾಗೂ ಮಾಯಾಂಕ್‌ ದಾಗರ್‌ (ಅಜೇಯ 1 ರನ್‌) ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದು ಕೊಂಡಿದ್ದಾರೆ. ಹಿ.ಪ್ರದೇಶಕ್ಕೆ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆಯಲು ಇನ್ನೂ 137 ರನ್‌ ಬೇಕಿದೆ.

ಕರ್ನಾಟಕದ ಬ್ಯಾಟಿಂಗ್‌ ಪತನ
ಮೊದಲು ಬ್ಯಾಟಿಂಗ್‌ ನಡೆಸಿದ ಕರ್ನಾಟಕ ತಂಡ ಬ್ಯಾಟಿಂಗ್‌ನಲ್ಲಿ ಭಾರೀ ವೈಫ‌ಲ್ಯ ಅನುಭವಿಸಿತು. ಭಾರತೀಯ ಟೆಸ್ಟ್‌ ತಂಡದಲ್ಲಿ ಇನ್ನಿಂಗ್ಸ್‌ ಆರಂಭಿಸಿ ಖ್ಯಾತಿ ಪಡೆದಿದ್ದ ಮಾಯಾಂಕ್‌ ಅಗರ್ವಾಲ್‌ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ಆಗ ಕರ್ನಾಟಕ ಇನ್ನೂ ರನ್‌ ಖಾತೆ ತೆರೆದಿರಲಿಲ್ಲ. ಎರಡನೇ ವಿಕೆಟಿಗೆ ಬಂದ ದೇವತ್ತ ಪಡಿಕ್ಕಲ್‌ ಕೂಡ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ಆಗ ತಂಡದ ಮೊತ್ತ 2 ರನ್ನಿಗೆ 2 ವಿಕೆಟ್‌ ಆಗಿತ್ತು.

Advertisement

ತಂಡದ ಮೊತ್ತ 10 ರನ್‌ ಆಗುತ್ತಿದ್ದಂತೆ ಆರ್‌. ಸಮರ್ಥ್ (4 ರನ್‌) ಕೂಡ ಔಟಾದರು. ಆ ಬಳಿಕ ಡಿ. ನಿಶ್ಚಲ್‌ (16 ರನ್‌) ತಂಡದ ಮೊತ್ತ 30 ರನ್‌ ಆಗಿದ್ದಾಗ 4ನೆಯವರಾಗಿ ವಿಕೆಟ್‌ ಕಳೆದುಕೊಂಡರು. ಬಹುತೇಕ ಅಲ್ಲಿಗೆ ರಾಜ್ಯದ ಅಗ್ರ 4 ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಸೇರಿ ಆಗಿತ್ತು. ಕರ್ನಾಟಕ ತಂಡದಿಂದ ಕೆಳ ಕ್ರಮಾಂಕದಲ್ಲಿ ಯಾವುದೇ ಅಚ್ಚರಿಯ ಪ್ರದರ್ಶನ ಹೊಮ್ಮಲಿಲ್ಲ. ಹಿ. ಪ್ರ.ಕ್ಕೂ ಬ್ಯಾಟಿಂಗ್‌ ಕಂಟಕ ಕರ್ನಾಟಕದ ಸಣ್ಣ ಮೊತ್ತವನ್ನು ಬೆನ್ನಟ್ಟಿದ ಹಿಮಾಚಲ ಪ್ರದೇಶ ತಂಡ ಕೂಡ ನಿರೀಕ್ಷಿತ ಆರಂಭ ಪಡೆಯಲಿಲ್ಲ. ರಾಜ್ಯದ ಬೌಲರ್‌ಗಳ ಬಿಗು ದಾಳಿಗೆ ಸಿಲುಕಿ 29 ರನ್‌ ಆಗುವಷ್ಟರಲ್ಲಿ ಮೂವರು ಅಗ್ರ ಆಟಗಾರರನ್ನು ಕಳೆದುಕೊಂಡಿದ್ದಾರೆ.

ಬೌಲರ್‌ಗಳಿಗೆ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಿಕ್ಕಿದೆ. ಅದರಲ್ಲೂ ವೇಗದ ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳಿಗೆ ಅಪಾಯಕಾರಿಯಾಗಿದ್ದಾರೆ.

ಆರಂಭಿಕ ಪ್ರಿಯಾಂಶು ಕಾಂಡೂರಿ 14 ರನ್‌ ಗಳಿಸಲು ಬರೋಬ್ಬರಿ 46 ಎಸೆತ ತೆಗೆದುಕೊಂಡಿದ್ದಾರೆ.

ಗ್ರಹಣ: ರಣಜಿ ಪಂದ್ಯ ತಡವಾಗಿ ಆರಂಭ
ಮೈಸೂರು: ಕಂಕಣ ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ, ಗುರುವಾರ ರಣಜಿ ಪಂದ್ಯಗಳು ತಡವಾಗಿ ಆರಂಭ ವಾಗಲಿವೆ. ಮೈಸೂರಿನಲ್ಲಿ ನಡೆಯಲಿರುವ ಕರ್ನಾಟಕ-ಹಿಮಾಚಲ ಪ್ರದೇಶದ ನಡುವಿನ ಪಂದ್ಯ ಬೆಳಗ್ಗೆ ತಡವಾಗಿ ಅಂದರೆ 11.15ಕ್ಕೆ ಆರಂಭವಾಗಲಿದೆ. ನಿಯಮದ ಪ್ರಕಾರ ಬೆಳಗ್ಗೆ 9.30ಕ್ಕೆ ಆರಂಭವಾಗಬೇಕಿತ್ತು.

ಗ್ರಹಣದ ಬಗ್ಗೆ ಆರಂಭದಲ್ಲಿ ಬಿಸಿಸಿಐ ತಲೆಕೆಡಿಸಿಕೊಂಡಿರಲಿಲ್ಲ. ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ರೆಫ್ರಿಗಳಿಗೆ ಬಿಟ್ಟಿತ್ತು. ಪಂದ್ಯ ಶುರುವಾಗಲು ಒಂದು ದಿನ ಬಾಕಿಯಿದ್ದಾಗ, ತಡವಾಗಿ ಆರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೈಸೂರು ಪಂದ್ಯ ಆರಂಭವಾಗುವುದಕ್ಕೆ ಮುಂಚೆ ನಡೆದ ನಾಯಕರು ಮತ್ತು ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿರಲಿಲ್ಲ.

ಶೇ.88ರಷ್ಟು ಸೂರ್ಯಗ್ರಹಣ
ಕಂಕಣ ಸೂರ್ಯಗ್ರಹಣ ಭಾರತದಲ್ಲಿ ಕೆಲವು ಭಾಗಗಳಲ್ಲಿ ಸ್ವಲ್ಪ ಪ್ರಮಾಣ ದಲ್ಲಿರುತ್ತದೆ. ಆದರೆ ದಕ್ಷಿಣ ಭಾರತದಲ್ಲಿ, ಅದರಲ್ಲೂ ಮೈಸೂರಿನಲ್ಲಿ ಅದರ ಪ್ರಮಾಣ ಗರಿಷ್ಠವಾಗಿದೆ. ಅಂದರೆ ಶೇ.88ರಷ್ಟು ಸೂರ್ಯಗ್ರಹಣ ಸಂಭವಿಸಲಿದೆ.

ಏನು ತೊಂದರೆ?
ಗ್ರಹಣದ ಅವಧಿಯಲ್ಲಿ ಸೂರ್ಯನಿಂದ ಅತಿ ಕಟುವಾದ ಕಿರಣಗಳು, ಭೂಮಿಯನ್ನು ಪ್ರವೇಶಿಸಲಿವೆ. ಅದು ಕಣ್ಣಿಗೆ ಮತ್ತು ಶರೀರಕ್ಕೆ ಅತ್ಯಂತ ಅಪಾಯಕಾರಿ. ಕ್ರಿಕೆಟಿಗರು ಅಂತಹ ಪ್ರಮುಖ ಹೊತ್ತಿನಲ್ಲೇ ಮೈದಾನದಲ್ಲಿರಬೇಕಾಗುತ್ತದೆ. ಆಗ ಅವರಿಗೆ ಬೇಕೋ, ಬೇಡವೋ ಸೂರ್ಯನನ್ನು ದಿಟ್ಟಿಸಬೇಕಾಗುತ್ತದೆ. ಕಿರಣಗಳು ನೇರವಾಗಿ ಆಟಗಾರರನ್ನು ತಾಕುತ್ತಿರುತ್ತವೆ. ಅದು ಭವಿಷ್ಯತ್ತಿನಲ್ಲಿ ಚರ್ಮರೋಗಕ್ಕೆ ಕಾರಣವಾಗಬಹುದು. ಸೂರ್ಯನನ್ನು ನೇರವಾಗಿ ದಿಟ್ಟಿಸಿದರೆ, ಅಲ್ಲಿಂದ ಹೊರಬರುವ ಕಿರಣಗಳು ನಮ್ಮ ರೆಟಿನಾವನ್ನು ಹಾಳು ಮಾಡುವ ಶಕ್ತಿ ಹೊಂದಿವೆ. ಅದೂ ಗ್ರಹಣ ಗರಿಷ್ಠ ಮಟ್ಟದಲ್ಲಿರುವಾಗ ಪರಿಣಾಮ ವಿಪರೀತವಾಗಿರುತ್ತದೆ.

1990ರಲ್ಲೂ ರಣಜಿ ತಡವಾಗಿತ್ತು
ಸೂರ್ಯಗ್ರಹಣದ ಪರಿಣಾಮ ರಣಜಿ ಪಂದ್ಯಗಳು ತಡವಾಗಿ ಆರಂಭವಾಗುತ್ತಿರುವುದು, ಇದೇ ಮೊದಲೇನಲ್ಲ. 1990ರಲ್ಲೂ ದೇಶಾದ್ಯಂತ ಪಂದ್ಯಗಳು ತಡವಾಗಿ ಆರಂಭವಾಗಿದ್ದವು.

ರಹಾನೆ, ಪೃಥ್ವಿ ಶಾ ವೈಫ‌ಲ್ಯ; ಮುಂಬಯಿ 114 ರನ್ನಿಗೆ ಆಲೌಟ್‌
ಮುಂಬಯಿ: ಟೆಸ್ಟ್‌ ಸ್ಪೆಷಲಿಸ್ಟ್‌ ಅಜಿಂಕ್ಯ ರಹಾನೆ ಮತ್ತು ಪೃಥ್ವಿ ಶಾ ಅವರು ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಕಂಡ ಕಾರಣ ಮುಂಬಯಿ ತಂಡವು “ಬಿ’ ಬಣದ ರಣಜಿ ಟ್ರೋಫಿ ಪಂದ್ಯದಲ್ಲಿ ರೈಲ್ವೇಸ್‌ ತಂಡದೆದುರು ಕೇವಲ 114 ರನ್ನಿಗೆ ಆಲೌಟಾಗಿದೆ.

41 ಬಾರಿಯ ರಣಜಿ ಚಾಂಪಿಯನ್ಸ್‌ ಮುಂಬಯಿ ತಂಡವು ಮುಂಬಯಿ ಅಥವಾ ಬೇರೆ ಕಡೆ ಇಷ್ಟು ಬೇಗ ಆಲೌಟ್‌ ಆಗಿರು ವುದು ಇದೇ ಮೊದಲ ಸಲ ಎನ್ನಬಹುದು.

ಇದಕ್ಕುತ್ತರವಾಗಿ ಮುಂಬಯಿ ದಾಳಿಗೆ ರೈಲ್ವೇಸ್‌ ಕೂಡ ಕುಸಿದಿತ್ತು. ಆದರೆ ನಾಯಕ ಕಣ್‌ì ಶರ್ಮ ಮತ್ತು 33ರ ಹರೆಯದ ಅರಿಂದಮ್‌ ಘೋಷ್‌ ಅವರ ಉಪಯುಕ್ತ ಆಟದಿಂದಾಗಿ ತಂಡ ಮೊದಲ ಇನ್ನಿಂಗ್ಸ್‌ ನಲ್ಲಿ ಮುನ್ನಡೆ ಸಾಧಿಸಲು ಯಶಸ್ವಿಯಾಯಿತು.

ಶರ್ಮ ಮತ್ತು ಘೋಷ್‌ ಮುರಿಯದ ಆರನೇ ವಿಕೆಟಿಗೆ ಈಗಾಗಲೇ 73 ರನ್‌ ಪೇರಿಸಿದ್ದಾರೆ. ಇದರಿಂದಾಗಿ ರೈಲ್ವೇಸ್‌ ಮಂದ ಬೆಳಕಿನಿಂದಾಗಿ ಮೊದಲ ದಿನದಾಟ ನಿಲ್ಲಿಸಿದಾಗ ರೈಲ್ವೇಸ್‌ ತಂಡವು 5 ವಿಕೆಟಿಗೆ 116 ರನ್‌ ಗಳಿಸಿತ್ತು. ಘೋಷ್‌ 52 ರನ್ನಿನಿಂದ ಆಡುತ್ತಿದ್ದಾರೆ.

ಪ್ರದೀಪ್‌ ಹೀರೊ
ಮಧ್ಯಮ ವೇಗಿ ಪ್ರದೀಪ್‌ ಟಿ ಅವರ ಮಾರಕ ದಾಳಿಗೆ ಮುಂಬಯಿ ಕುಸಿಯ ತೊಡಗಿತು. ಬ್ಯಾಟಿಂಗ್‌ ಸವ್ಯಸಾಚಿಗಳಾದ ರಹಾನೆ, ಪೃಥ್ವಿ ಶಾ ಬೇಗನೇ ಪೆವಿಲಿಯನ್‌ ಸೇರಿಕೊಂಡರು. ನಾಯಕ ಸೂರ್ಯಕುಮಾರ್‌ ಯಾದವ್‌ ಗರಿಷ್ಠ 39 ರನ್‌ ಹೊಡೆದರು.

ಮಾರಕ ದಾಳಿ ಸಂಘಟಿಸಿದ ಪ್ರದೀಪ್‌ 37 ರನ್ನಿಗೆ ಆರು ವಿಕೆಟ್‌ ಕಿತ್ತು ಮಿಂಚಿದರು. ಪ್ರದೀಪ್‌ ಈ ಹಿಂದೆ ಬಿಳಿ ಚೆಂಡಿನಲ್ಲಿ ಕರ್ನಾಟಕ ಪರ ಆಡಿದ್ದರು. ಅವರು ಐದಕ್ಕಿಂತ ಹೆಚ್ಚಿನ ವಿಕೆಟ್‌ ಪಡೆದಿರುವುದು ಇದೇ ಮೊದಲ ಸಲವಾಗಿದೆ.

ಸಂಕ್ಷಿಪ್ತ ಸ್ಕೋರು: ಮುಂಬಯಿ 114 (ಸೂರ್ಯಕುಮಾರ್‌ ಯಾದವ್‌ 39, ಜಯ್‌ ಬಿಸ್ತ 21, ಪ್ರದೀಪ್‌ 37ಕ್ಕೆ 6); ರೈಲ್ವೇಸ್‌ 5 ವಿಕೆಟಿಗೆ 116 (ಅರಿಂದಮ್‌ ಘೋಷ್‌ 52 ಬ್ಯಾಟಿಂಗ್‌, ಕಣ್‌ì ಶರ್ಮ 24 ಬ್ಯಾಟಿಂಗ್‌, ದೀಪಕ್‌ ಶೆಟ್ಟಿ 20ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next