Advertisement

ರಾಜ್ಯ ಬೌಲಿಂಗ್‌ ದಾಳಿಗೆ ತತ್ತರಿಸಿದ ರಾಜಸ್ಥಾನ

04:16 AM Jan 16, 2019 | |

ಬೆಂಗಳೂರು: ರಣಜಿ ಕ್ವಾರ್ಟರ್‌ ಫೈನಲ್‌ ಪಂದ್ಯದ ಮೊದಲ ದಿನವೇ ಕರ್ನಾಟಕ ಮೇಲುಗೈ ಸಾಧಿಸಿದೆ. ರಾಜ್ಯದ ಬೌಲಿಂಗ್‌ ದಾಳಿಗೆ ತತ್ತರಿಸಿದ ರಾಜಸ್ಥಾನ 224 ರನ್ನಿಗೆ ಆಲೌಟ್‌ ಆಗಿದೆ. ಜವಾಬು ನೀಡಲಾರಂಭಿಸಿದ ರಾಜ್ಯ ತಂಡ ವಿಕೆಟ್‌ ಕಳೆದುಕೊಳ್ಳದೆ 12 ರನ್‌ ಮಾಡಿದೆ. 

Advertisement

ಅಭಿಮನ್ಯು ಮಿಥುನ್‌ (48ಕ್ಕೆ 3), ಕೆ. ಗೌತಮ್‌ (54ಕ್ಕೆ 3), ವಿನಯ್‌ ಕುಮಾರ್‌ (29ಕ್ಕೆ 2) ಹಾಗೂ ಶ್ರೇಯಸ್‌ ಗೋಪಾಲ್‌ (41ಕ್ಕೆ 2) ಸೇರಿಕೊಂಡು ರಾಜಸ್ಥಾನದ ಮೇಲೆ ಸವಾರಿ ಮಾಡಿದರು. ರಾಜೇಶ್‌ ಬಿಶ್ನೋಯ್‌ (79) ಮತ್ತು ನಾಯಕ ಮಹಿಪಾಲ್‌ ಲೊನ್ರೋರ್‌ (50) ಅವರ ಅರ್ಧ ಶತಕದ ಹೊರತಾಗಿಯೂ ರಾಜಸ್ಥಾನ ಮೊದಲ ಇನ್ನಿಂಗ್ಸ್‌ನಲ್ಲಿ 224 ರನ್‌ಗೆ ಆಲೌಟಾಗಿದೆ. ಕರ್ನಾಟಕದ ಆರಂಭಿಕರಾದ ಆರ್‌. ಸಮರ್ಥ್ (7) ಹಾಗೂ ಡಿ. ನಿಶ್ಚಲ್‌ (5) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಬೆವರಿಳಿಸಿದ ಬೌಲರ್
ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ ಯಾವ ಹಂತದಲ್ಲೂ ಸವಾಲೊಡ್ಡಲಿಲ್ಲ. ಆರಂಭಿಕರಾದ ಅಮಿತ್‌ ಕುಮಾರ್‌ ಗೌತಮ್‌ (12) ಹಾಗೂ ಚೇತನ್‌ ಬಿಸ್ಟ್‌ (39) ಒಟ್ಟುಗೂಡಿಸಿದ್ದು 18 ರನ್‌ ಮಾತ್ರ. ಬಳಿಕ ಮಹಿಪಾಲ್‌, ಚೇತನ್‌ ಜತೆ ಸೇರಿಕೊಂಡು 46 ರನ್‌ ಜತೆಯಾಟ ನಡೆಸಿದರು. ಬಳಿಕ ರಾಬಿನ್‌ ಬಿಸ್ಟ್‌ (13) ಹಾಗೂ ಅಶೋಕ್‌ ಮೆನಾರಿಯ (0) ಬೇಗನೇ ವಿಕೆಟ್‌ ಒಪ್ಪಿಸಿದ್ದರಿಂದ ರಾಜಸ್ಥಾನದ ಆತಂಕ ಹೆಚ್ಚಾಯಿತು.

ರಾಜಸ್ಥಾನದ ಅರ್ಧದಷ್ಟು ಆಟಗಾರರು 111 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ತಂಡದ ಮೊತ್ತ 135 ರನ್‌ ಆಗಿದ್ದಾಗ ಅರ್ಧ ಶತಕ ದಾಖಲಿಸಿದ್ದ ಮಹಿಪಾಲ್‌ ಕೂಡ ಔಟಾದಾಗ ರಾಜಸ್ಥಾನದ ಇನ್ನಿಂಗ್ಸ್‌ ನೂರೈವತ್ತರ ಆಸುಪಾಸಿನಲ್ಲಿ ಮುಗಿಯುವ ಸಂಭವವಿತ್ತು. ಇಂತಹ ಪರಿಸ್ಥಿತಿಯಲ್ಲಿ ರಾಜೇಶ್‌ ಬಿಶ್ನೋಯ್‌ ಹಾಗೂ ದೀಪಕ್‌ ಚಹರ್‌ (22 ರನ್‌) ನೆರವಿನಿಂದ ತಂಡದ ಮೊತ್ತ 200 ರನ್‌ ಗಡಿ ದಾಟುವಂತಾಯಿತು. ರಾಜೇಶ್‌ ಬಿಶ್ನೋಯ್‌ 119 ಎಸೆತಗಳಿಂದ ಇನ್ನಿಂಗ್ಸ್‌ ಕಟ್ಟಿದರು. ಸಿಡಿಸಿದ್ದು 10 ಬೌಂಡರಿ ಹಾಗೂ 2 ಸಿಕ್ಸರ್‌.

ರಣಜಿ ಕ್ವಾರ್ಟರ್‌ ಫೈನಲ್ಸ್‌
* ನಾಗ್ಪುರ: ವಿದರ್ಭ ವಿರುದ್ಧದ ಪಂದ್ಯದಲ್ಲಿ ಉತ್ತರಖಂಡ್‌ 6 ವಿಕೆಟಿಗೆ 293 ರನ್‌ ಮಾಡಿದೆ.
* ವಯನಾಡ್‌: ಗುಜರಾತ್‌ ವಿರುದ್ಧದ ಮುಖಾಮುಖೀಯಲ್ಲಿ ಆತಿಥೇಯ ಕೇರಳ 185 ರನ್ನಿಗೆ ಕುಸಿದಿದೆ. ಬಳಿಕ ಗುಜರಾತ್‌ ಕೂಡ ಕುಸಿತ ಕಂಡಿದ್ದು, 4 ವಿಕೆಟಿಗೆ 97 ರನ್‌ ಮಾಡಿದೆ. 
* ಲಕ್ನೊ: ರಿಂಕು ಸಿಂಗ್‌ ಅವರ ಅಮೋಘ 150 ರನ್‌ ಸಾಹಸದಿಂದ ಸೌರಾಷ್ಟ್ರ ವಿರುದ್ಧ ಉತ್ತರಪ್ರದೇಶ 7 ವಿಕೆಟಿಗೆ 340 ರನ್‌ ಪೇರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next