ನಾಗ್ಪುರ: ಸೌರಾಷ್ಟ್ರ ವಿರುದ್ಧದ ರಣಜಿ ಕ್ರಿಕೆಟ್ ಫೈನಲ್ ಪಂದ್ಯದ ಮೊದಲ ದಿನದ ಆಟದಲ್ಲೇ ಹಾಲಿ ಚಾಂಪಿಯನ್ ವಿದರ್ಭ ಬಾರೀ ಬ್ಯಾಟಿಂಗ್ ಆಘಾತ ಅನುಭವಿಸಿದೆ.
ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ವಿದರ್ಭ ದಿನದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 200 ರನ್‌ಗಳಿಸಿದೆ. ಅಕ್ಷಯ್ ಕರ್ನೆವರ್ (ಅಜೇಯ 31) ಹಾಗೂ ಇನ್ನೂ ಖಾತೆ ತೆರೆಯದ ಅಕ್ಷಯ್ ವಖಾರೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸೌರಾಷ್ಟ್ರ ಮಾರಕ ದಾಳಿ: ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ಭಾನುವಾರದ ಆಟದಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇನಿಂಗ್ಸ್ ಆರಂಭಿಸಿದ ನಾಯಕ ಫಯಾಜ್ ಫಜಲ್ (16 ರನ್) ಹಾಗೂ ಸಂಜಯ್ ರಘುನಾಥ್ (2 ರನ್) ಮೊದಲ ವಿಕೆಟ್‌ಗೆ ಕೇವಲ 21 ರನ್ ಜತೆಯಾಟ ನಿರ್ವಹಿಸಿದರು. ಈ ಹಂತದಲ್ಲಿ ಸಂಜಯ್ ಅವರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಸೌರಾಷ್ಟ್ರಕ್ಕೆ ಮೊದಲ ಯಶಸ್ಸನ್ನು ತಂದುಕೊಟ್ಟಿದ್ದು ತಂಡದ ನಾಯಕ ಕಮ್ ವೇಗದ ಬೌಲರ್ ಆಗಿರುವ ಜೈದೇವ್ ಉನಾಡ್ಕತ್. ತಂಡದ ಒಟ್ಟಾರೆ ಮೊತ್ತ 29 ರನ್ ಆಗಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ಫಯಾಜ್ ಫಜಲ್ ಕೂಡ ಔಟಾದರು. ಬಳಿಕ ಅಗ್ರ ಕ್ರಮಾಂಕದಲ್ಲಿ ವಾಸಿಂ ಜಾಫರ್ (23 ರನ್) ಮತ್ತು ಮೋಹಿತ್ ಕಾಳೆ (35 ರನ್) ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು. ಈ ಹಂತದಲ್ಲಿ ಜಾಫರ್ ಔಟಾಗಿದ್ದರಿಂದ ತಂಡಕ್ಕೆ ಮತ್ತೆ ಹೊಡೆತ ಬಿತ್ತು. ಆಗ ತಂಡದ ಒಟ್ಟು ಮೊತ್ತ 3 ವಿಕೆಟ್‌ಗೆ 60 ರನ್ ಆಗಿತ್ತು. ಈ ಹಂತದಲ್ಲಿ ಕನ್ನಡಿಗ ಕ್ರಿಕೆಟಿಗ ಗಣೇಶ್ ಸತೀಶ್ (32 ರನ್) ಹಾಗೂ ಮೋಹಿತ್ ಕಾಳೆ ನಿಧಾನವಾಗಿ ತಂಡದ ಒಟ್ಟು ಮೊತ್ತವನ್ನು ಹೆಚ್ಚಿಸುವ ಕಾಯಕದಲ್ಲಿ ತೊಡಗಿದರು. ತಂಡದ ಒಟ್ಟು ಮೊತ್ತ 106 ರನ್ ಆಗಿದ್ದಾಗ ಮೋಹಿತ್ ಔಟಾದರು. ಬಳಿಕ 5ನೇಯವರಾಗಿ ಗಣೇಶ್ ಸತೀಶ್ ಕೂಡ ಪೆವಿಲಿಯನ್ ಸೇರಿಕೊಂಡರು. ಅಲ್ಲಿಗೆ ವಿದರ್ಭ 134 ರನ್‌ಗೆ 5 ವಿಕೆಟ್ ಕಳೆದುಕೊಂಡು 150 ರನ್‌ಗೆ ಪತನಗೊಳ್ಳುವ ಆತಂಕದಲ್ಲಿತ್ತು.
ಅಕ್ಷಯ್ ತಾಳ್ಮೆಯ ಬ್ಯಾಟಿಂಗ್: ಒಂದು ಕಡೆ ನಿರಂತರ ವಿಕೆಟ್ ಉರುಳುತ್ತಿದ್ದರೆ ಮತ್ತೂಂದು ಕಡೆ ಅಕ್ಷಯ್ ವಡ್ಕರ್ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಆದಿತ್ಯ ಸರ್ವಟೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆಗ ತಂಡದ ಮೊತ್ತ 6 ವಿಕೆಟ್‌ಗೆ 139 ರನ್ ಆಗಿತ್ತು. ಇಂತಹ ಸಂದರ್ಭದಲ್ಲಿ ಒಟ್ಟಾರೆ 115 ನಿಮಿಷ ಕ್ರೀಸ್‌ನಲ್ಲಿ ನೆಲೆನಿಂತ ವಡ್ಕರ್ 5 ಬೌಂಡರಿ ಸಿಡಿಸಿದರು. ಒಟ್ಟು 45 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಇವರ ಸಾಹಸದಿಂದಾಗಿ ತಂಡ 200 ರನ್ ಸಮೀಪಕ್ಕೆ ಬಂತು. ಇವರಿಗೆ ಅಕ್ಷಯ್ ಕರ್ನೆವರ್ ಸಾಥ್ ನೀಡಿದರು. ತಂಡದ ಮೊತ್ತ 196 ರನ್ ಆಗಿದ್ದಾಗ ವಡ್ಕರ್ ಔಟಾದರು. ಈ ಮೂಲಕ ವಿದರ್ಭದ ದೊಡ್ಡ ಮೊತ್ತದ ಕನಸಿಗೆ ಪೆಟ್ಟುಬಿತ್ತು. ಅಕ್ಷಯ್ ಕರ್ನೆವರ್ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವುದರಿಂದ ತಂಡ 250 ರನ್‌ಗಳ ಗಡಿದಾಟಬಹುದು ಎಂದು ಅಂದಾಜಿಸಲಾಗಿದೆ.
ಸೌರಾಷ್ಟ್ರ ಪರ ಜೈದೇವ್ ಉನಾಡ್ಕತ್ 26ಕ್ಕೆ 2ವಿಕೆಟ್ ಉರುಳಿಸಿದರೆ ಉಳಿದಂತೆ ಸಕಾರಿಯ, ಮಂಕಡ್, ಧರ್ಮೇಂದ್ರ ಸಿನ್ಹ ಜಡೇಜ, ಮಕ್ವಾನ ಕ್ರಮವಾಗಿ ಒಂದೊಂದು ವಿಕೆಟ್ ಉರುಳಿಸಿದರು.
ರಣಜಿ ಫೈನಲ್
ರಣಜಿ ಫೈನಲ್ ವೀಕ್ಷಣೆಗೆ ಜನರೇ ಇಲ್ಲ!
ವಿದರ್ಭ-ಸೌರಾಷ್ಟ್ರ ನಡುವಿನ ರಣಜಿ ಫೈನಲ್ ಪಂದ್ಯದ ಮೊದಲ ದಿನದ ಆಟವನ್ನು ವೀಕ್ಷಿಸಲು ಜನರೇ ಇರಲಿಲ್ಲ. ನಾಗ್ಪುರ ಕ್ರೀಡಾಂಗಣದ ಗ್ಯಾಲರಿ ಇಡೀ ಖಾಲಿಯಾಗಿತ್ತು. ಆಟಗಾರರು, ಸಿಬ್ಬಂದಿಗಳು ಮಾತ್ರ ಕಂಡು ಬಂದರು.
ಸಂಕ್ಷಿಪ್ತ ಸ್ಕೋರ್
ವಿದರ್ಭ 1ನೇ ಇನಿಂಗ್ಸ್ 200/7 (ಅಕ್ಷಯ್ ವಡ್ಕರ್ 45, ಮೋಹಿತ್ ಕಾಳೆ 35, ಜೈದೇವ್ ಉನಾಡ್ಕತ್ 26ಕ್ಕೆ2) (ಮೊದಲ ದಿನದ ಅಂತ್ಯಕ್ಕೆ)