Advertisement

ರಣಹೇಡಿ: ಡಿ ಗ್ಲಾಮ್ ಪಾತ್ರದಲ್ಲಿ ಗ್ಲಾಮರಸ್ ಗೊಂಬೆ ಐಶ್ವರ್ಯಾ!

09:49 AM Nov 28, 2019 | Team Udayavani |

ಪ್ರತೀ ನಟಿಯರೂ ಸಹ ಕನಸಿನ ಪಾತ್ರವೊಂದನ್ನು ಮನಸೊಳಗೆ ಸಾಕಿಕೊಂಡಿರುತ್ತಾರೆ. ಅದೆಷ್ಟು ಪಾತ್ರಗಳನ್ನು ನಿರ್ವಹಿಸಿ ಭಾರೀ ಪ್ರಸಿದ್ಧಿ ಪಡೆದುಕೊಂಡಾದ ನಂತರವೂ ಬಹುತೇಕರಲ್ಲಿ ಕನಸಿನ ಪಾತ್ರ ಹಾಗೆಯೇ ಉಳಿದುಕೊಂಡಿರುತ್ತದೆ. ಆದರೆ ಆರಂಭಿಕ ಹೆಜ್ಜೆಗಳಲ್ಲಿಯೇ ಅಂಥಾ ಕನಸಿನ ಪಾತ್ರ ತಾನೇ ತಾನಾಗಿ ಹುಡುಕಿಕೊಂಡು ಬರೋದು ಕೆಲವೇ ಕೆಲ ಅದೃಷ್ಟವಂತೆಯರನ್ನು ಮಾತ್ರ. ಈ ಹಿಂದೆ ರವಿ ಹಿಸ್ಟರಿ ಚಿತ್ರದಲ್ಲಿ ನಾಯಕಿಯರಲ್ಲೊಬ್ಬರಾಗಿ ನಟಿಸಿದ್ದ ಐಶ್ವರ್ಯಾ ರಾವ್ ಕೂಡಾ ಆ ಸಾಲಿನಲ್ಲಿ ಸೇರಿಕೊಳ್ಳುತ್ತಾರೆ. ಯಾಕೆಂದರೆ, ರಣಹೇಡಿ ಚಿತ್ರದ ಮೂಲಕ ಅವರ ಕನಸಿನಂಥಾ ಪಾತ್ರ ಅವರಿಗೆ ದಕ್ಕಿದೆ.

Advertisement

ಮನು ಕೆ ಶೆಟ್ಟಿಹಳ್ಳಿ ನಿರ್ದೇಶನದ ರಣಹೇಡಿ ಚಿತ್ರದಲ್ಲಿ ಐಶ್ವರ್ಯಾ ಪಾತ್ರಕ್ಕೆ ಗ್ಲಾಮರ್‌ನ ಯಾವ ಅಂಶಗಳೂ ಇಲ್ಲ. ಈ ಹಿಂದೆ ರವಿ ಹಿಸ್ಟರಿ ಚಿತ್ರದಲ್ಲಿ ಮಾಡ್ ಲುಕ್ಕಿನಲ್ಲಿ ಮಿಂಚಿದ್ದ ಐಶ್ವರ್ಯಾ ಇಲ್ಲಿ ಪಕ್ಕಾ ಕೂಲಿಕಾರರ ಹುಡುಗಿಯಾಗಿ ನಟಿಸಿದ್ದಾರೆ. ಬಳ್ಳಾರಿ ಸೀಮೆಯಿಂದ ಮಂಡ್ಯಕ್ಕೆ ಕಬ್ಬು ಕಟಾವಿಗೆ ಬರುವ ಕೂಲಿಕಾರರ ಕುಟುಂಬದ ಹುಡುಗಿಯಾಗಿ ಐಶ್ವರ್ಯಾ ನಟಿಸಿದ್ದಾರೆ. ಓರ್ವ ನಟಿಯಾಗಿ ಥರ ಥರದ ಪಾತ್ರಗಳನ್ನು ನಿರ್ವಹಿಸಬೇಕೆಂಬ ಆಸೆ ಹೊಂದಿರುವವರು. ರಣಹೇಡಿಯಲ್ಲಿ ಅವರಿಗೆ ಅದಕ್ಕೆ ತಕ್ಕುದಾದ ಪಾತ್ರವೇ ಸಿಕ್ಕಿದೆಯಂತೆ. ಈ ಪಾತ್ರದಲ್ಲಿ ಐಶ್ವರ್ಯಾ ಎಂಥವರೂ ಮೆಚ್ಚಿಕೊಳ್ಳುವಂತೆ ನಟಿಸಿದ್ದಾರೆಂಬ ಮೆಚ್ಚುಗೆ ಚಿತ್ರತಂಡದಲ್ಲಿದೆ.

ಐಶ್ವರ್ಯಾ ಪಾಲಿಗೆ ರವಿ ಹಿಸ್ಟರಿ ಮೊದಲ ಚಿತ್ರ. ಅದರ ಮೂಲಕವೇ ಗಮನ ಸೆಳೆದಿದ್ದ ಅವರಿಗೆ ರಣಹೇಡಿ ಎರಡನೇ ಅನುಭವ. ಈ ಎರಡನೇ ಹೆಜ್ಜೆಯಲ್ಲಿ ಅವರಿಗೆ ಸವಾಲಿನ ಪಾತ್ರವೇ ಸಿಕ್ಕಿದೆ. ಅದು ಯಾವುದೇ ಒನಪು ವಯ್ಯಾರಗಳಿಲ್ಲದ ಕಷ್ಟ ಜೀವಿಯಾದ ಹೆಣ್ಣುಮಗಳ ಪಾತ್ರ. ಅದನ್ನು ನಿರ್ವಹಿಸಲು ಹಲವಾರು ತಿಂಗಳುಗಳ ಕಾಲ ಐಶ್ವರ್ಯಾ ಮಾನಸಿಕವಾಗಿ ಸಿದ್ಧತೆ ನಡೆಸಿದ್ದಾರಂತೆ. ಆ ನಂತರದಲ್ಲಿ ಕರ್ಣ ಕುಮಾರ್‌ಗೆ ಜೋಡಿಯಾಗಿ ನಟಿಸಿರೋ ಐಶ್ವರ್ಯಾ ಬಡ ಕೂಲಿಕಾರ ಹೆಣ್ಣು ಮಗಳಾಗಿ ಕಾಣಿಸಿಕೊಂಡಿದ್ದಾರೆ. ಅವರೇ ಹೇಳಿಕೊಳ್ಳುವ ಪ್ರಕಾರ ಅಪರೂಪದ ಕಥೆಯನ್ನೊಳಗೊಂಡಿರುವ ಈ ಚಿತ್ರ ಅವರ ವೃತ್ತಿ ಬದುಕಿನಲ್ಲಿ ಮಹತ್ವದ್ದು.

Advertisement

Udayavani is now on Telegram. Click here to join our channel and stay updated with the latest news.

Next