ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೋವಿಡ್ ಅಟ್ಟಹಾಸ ಮೆರೆಯುತ್ತಿದ್ದು, ಇದೀಗ ಕನ್ನಡ ಚಿತ್ರರಂಗದ ಮತ್ತೊರ್ವನನ್ನು ಬಲಿ ಪಡೆದಿದೆ.
ಕೋವಿಡ್ ಪಾಸಿಟಿವ್ ಸೋಂಕಿನಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ಖ್ಯಾತ ಪೋಸ್ಟರ್ ಡಿಸೈನರ್ ಮಸ್ತಾನ್ ನಿನ್ನೆ ರಾತ್ರಿ ಹೆಸರಘಟ್ಟದ ಸಪ್ತಗಿರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮಸ್ತಾನ್ ಅವರಿಗೆ 63 ವರ್ಷ ವಯಸ್ಸಾಗಿತ್ತು.
ಕಳೆದ ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಸ್ಯಾಂಡಲ್ ವುಡ್ ನಲ್ಲಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಮಸ್ತಾನ್. ಇದುವರೆಗೂ 2000 ಚಿತ್ರಗಳಿಗೆ ಕೆಲಸ ಮಾಡಿದ್ದರು. ಇದಲ್ಲದೆ ಶುಕ್ಲಾಂಬರದರಂ, ಕಲ್ಲೇಶಿ ಮಲ್ಲೇಶಿ, ಸಿತಾರ ಎಂಬ ಮೂರು ಚಿತ್ರಗಳ ನಿರ್ದೇಶಕರೂ ಆಗಿದ್ದರು.
ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ‘ರಣಧೀರ’, ‘ಶಾಂತಿ ಕ್ರಾಂತಿ’, “ರಾಮಾಚಾರಿ”ಯಂತಹಾ ಚಿತ್ರಗಳ ಪೋಸ್ಟರ್ ಡಿಸೈನ್ ಮಾಡಿದ್ದದ್ದು ಮಸ್ತಾನ್ ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು.
ಇನ್ನು ಇತ್ತೀಚಿಗಷ್ಟೆ ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ 2 ಸಿನಿಮಾಗಳ ನಿರ್ಮಾಪಕ ಮಂಜುನಾಥ್ ಕೋವಿಡ್ ಸೋಂಕಿಗೆ ಬಲಿಯಾಗಿದ್ದರು.