ಇತ್ತೀಚೆಗಷ್ಟೇ ತೆರೆಕಂಡ ಸಾಮಾಜಿಕ ಸಾಮರಸ್ಯದ ಕಥಾಹಂದರ ಹೊಂದಿದ್ದ “ರಂಜಾನ್’ ಸಿನಿಮಾಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಇದೀಗ ಸಿನಿಮಾವನ್ನು ಹಿಂದಿ ಭಾಷೆಯಲ್ಲೂ ತೆರೆಗೆ ತರಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ.
ಈ ಬಗ್ಗೆ ಮಾತನಾಡುವ “ರಂಜಾನ್’ ಸಿನಿಮಾದ ನಾಯಕ ನಟ ಸಂಗಮೇಶ್ ಉಪಾಸೆ, “”ರಂಜಾನ್’ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾದ ಬಗ್ಗೆ ಮೆಚ್ಚಿಕೊಳ್ಳುತ್ತಿದ್ದಾರೆ. ಇಡೀ ಕುಟುಂಬ ಕೂತು ನೋಡುವ, ಭಾವೈಕ್ಯತೆ ಸಾರುವ ವಿಷಯ ಸಿನಿಮಾದಲ್ಲಿದೆ ಎಂಬ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇಷ್ಟೇ ಅಲ್ಲದೆ “ರಂಜಾನ್’ ಸಿನಿಮಾವನ್ನು ಹಿಂದಿ ಭಾಷೆಯಲ್ಲಿ ಮತ್ತು ಓಟಿಟಿಯಲ್ಲೂ ಬಿಡುಗಡೆ ಮಾಡಲು ಬೇಡಿಕೆ ಬರುತ್ತಿದೆ. ಈಗಾಗಲೇ “ರಂಜಾನ್’ ಹಿಂದಿ ಡಬ್ಬಿಂಗ್ ಕಾರ್ಯಗಳು ನಡೆಯುತ್ತಿದ್ದು, ಶೀಘ್ರದಲ್ಲಿಯೇ ಸಿನಿಮಾ ಹಿಂದಿ ಭಾಷೆಯಲ್ಲೂ ತೆರೆ ಕಾಣಲಿದೆ’ ಎಂದು ಮಾಹಿತಿ ನೀಡಿದ್ದಾರೆ.
ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಸಂಗಮೇಶ ಉಪಾಸೆ ಮೊದಲ ಬಾರಿಗೆ “ರಂಜಾನ್’ ಸಿನಿಮಾದಲ್ಲಿ ಬಡ ಮುಸ್ಲಿಂ ವ್ಯಕ್ತಿಯಾಗಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಪ್ರೇಮಾವತಿ ಉಪಾಸೆ, ಬೇಬಿ ಈಶಾನಿ ಉಪಾಸೆ, ಮಾ. ವೇದಿಕ್, ಭಾಸ್ಕರ್, ಮಾ. ನೀಲ್, ಜಯಲಕ್ಷ್ಮೀ ಮಧುರಾಜ್, ಮಂಜುನಾಥ್ ಕರುವಿನಕಟ್ಟೆ, ಆರ್ಯನ್, ಆದ್ಯತಾ ಭಟ್ ಮುಂತಾದವರು “ರಂಜಾನ್’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಫಕೀರ್ ಮಹಮ್ಮದ್ ಕಟಾ³ಡಿ ಅವರ “ನೋಂಬು’ ಕಾದಂಬರಿ ಆಧಾರಿತ “ರಂಜಾನ್’ ಸಿನಿಮಾಕ್ಕೆ ಪಂಚಾಕ್ಷರಿ ಸಿ. ನಿರ್ದೇಶನವಿದ್ದು, ಮಡಿವಾಳಪ್ಪ ಎಂ. ಗೊಗಿ ನಿರ್ಮಾಣ ಮಾಡಿದ್ದಾರೆ.