Advertisement

ಬೆಲೆ ಏರಿಕೆಯಲ್ಲೂ ರಂಜಾನ್‌ ಸಂಭ್ರಮ

03:39 PM Jun 16, 2018 | |

ವಿಜಯಪುರ: ಇಸ್ಮಾಂ ಧರ್ಮೀಯರ ಪವಿತ್ರ ಹಬ್ಬ ರಂಝಾನ್‌ ಉಪವಾಸ ವೃತ ಕೊನೆಗೊಳ್ಳುತ್ತಿದ್ದು, ಶನಿವಾರ ಅಂತಿಮದಿನ ಹಬ್ಬಕ್ಕೆ ಸಿದ್ಧತೆ ನಡೆದಿದೆ. ಮನುಸ್ಯನಿಗೆ ಹಸಿವು ಹಾಗೂ ಅನ್ನದ ಮಹತ್ವದ ಜೊತೆಗೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವ ಸಂದೇಶ ಸಾರುವ ಆತ್ಮಶುದ್ಧಿಯ ಹಬ್ಬಕ್ಕೆ ಸಿದ್ಧವಾಗುತ್ತಿದ್ದಾರೆ.

Advertisement

ಬೆಲೆ ಏರಿಕೆ ಮಧ್ಯೆಯೂ ರಂಜಾನ್‌ ಹಬ್ಬಕ್ಕಾಗಿ ವಿಜಯಪುರ ನಗರದ ಲಾಲ್‌ ಬಹಾದ್ದೂರ ಶಾಸ್ತ್ರೀ ಮಾರುಕಟ್ಟೆ ರಸ್ತೆ, ಕೆ.ಸಿ. ಮಾರುಕಟ್ಟೆ, ಬಾಗವಾನ ಮಾರ್ಕೆಟ್‌, ಜಾಮೀಯಾ ಮಸೀದಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ರಮಝಾನ್‌ ಹಬ್ಬದ ಭರ್ಜರಿ ಮಾರುಕಟ್ಟೆಗಳು ಜನಜಂಗುಳಿಯಾಗಿವೆ. ಹಗಲು ರಾತ್ರಿ ಎನ್ನದೇ ಹಬ್ಬದ ಖರೀದಿ ನಡೆದಿದೆ.

ಗ್ರಾಹಕರನ್ನು ಆಕರ್ಷಿಸಲು ಅಂಗಡಿಗಳು ದೀಪಾಲಂಕೃತ ಮಾಡಲಾಗಿದ್ದು, ಉಪವಾಸ ವೃತ ಮುಗಿಯುತ್ತಲೇ ಗ್ರಾಹಕರು ಮಾರುಕಟ್ಟೆಗೆ ವ್ಯಾಪಾರಕ್ಕಾಗಿ ಅಂಗಡಗಳಿಗೆ ಲಗ್ಗೆ ಇಡತೊಡಗಿದ್ದಾರೆ. ರಂಜಾನ್‌ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದ್ದರೂ ಇಸ್ಲಾಂ ಧರ್ಮಿಯರು ಮಾತ್ರ ಪವಿತ್ರ ಹಬ್ಬಕ್ಕಾಗಿ  ಬೆಲೆಯನ್ನೂ ಲೆಕ್ಕಿಸದೇ ಖರೀದಿಗೆ ಮುಂದಾಗಿದ್ದಾರೆ.

ಸಾಮಾನ್ಯ ದಿನಗಳಲ್ಲಿ ಪ್ರತಿ ಕೆ.ಜಿ.ಗೆ 700 ರೂ. ಇರುತ್ತಿದ್ದ ಗೋಡಂಬಿ ಹಬ್ಬಕ್ಕಾಗಿ ಸಾವಿರ ರೂ. ಗಡಿ ದಾಟಿದ್ದರೆ, ಪಿಸ್ತಾ ಬೆಲೆ ದುಪ್ಪಟ್ಟಾಗಿದ್ದು 1700 ರೂ.ಗೆ ಏರಿದೆ. ಬಾದಾಮಿ, ಒಣ ದ್ರಾಕ್ಷಿ, ವಿವಿಧ ಹಣ್ಣುಗಳ ಬೆಲೆಯ ಕಥೆಯೂ ಇದೆ ಆಗಿದೆ. ಸದರಿ ಹಬ್ಬದಲ್ಲಿ ವಿಶೇಷ ಆಕರ್ಷಣೆ ಎನಿಸಿರುವ ಖರ್ಜೂರಗಳು ವಿವಿಧ ತಳಿ ಹಾಗೂ ಗುಣಮಟ್ಟದ
ಆಧಾರದಲ್ಲಿ ಮಾರುಕಟ್ಟೆಗೆ ಬಂದಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ.

ಜಿಲ್ಲೆಯ ಪ್ರತಿ ಇಸ್ಲಾಂ ಧರ್ಮೀಯರ ಮನೆಗಳು ರಂಜಾನ್‌ ಹಬ್ಬದ ಸಂಭ್ರಮದ ಆಚರಣೆಗಾಗಿ ಕಳೆದ ಒಂದು ವಾರದಿಂದ ಸುಣ್ಣ-ಬಣ್ಣದಿಂದ ಸೌಂದರ್ಯೀಕರಣಗೊಂಡಿವೆ. ಮಹಿಳೆಯರು ಹಬ್ಬದ ವಿಶೇಷ ಖಾದ್ಯಗಳಾದ ಸುರಕುರಮಾ ಸೇರಿದಂತೆ ತರೆಹಾವರಿ ಅಡುಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಪ್ರತಿ ಮನೆಯಲ್ಲೂ ಇದೀಗ ಖಾಜು, ಬಾದಾಮಿ, ಚಾರೋಲಿ, ಪಿಸ್ತಾ, ದಾಲ್ಚೀನಿ, ಶಾವಿಗೆ ಸೇರಿದಂತೆ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ.

Advertisement

ರಂಜಾನ್‌ ಹಬ್ಬಕ್ಕೆ ಪ್ರತಿಯೊಬ್ಬರು ಹೊಸ ಬಟ್ಟೆ ಉಡುವುದು ಸಂಪ್ರದಾಯ. ಈ ಕಾರಣಕ್ಕಾಗಿ ಪ್ರತಿಯೊಬ್ಬರು ಹೊಸ ಬಟ್ಟೆ ಖರೀದಿಗೆ ಮುಂದಾಗಿದ್ದು, ಮಕ್ಕಳು, ಮಹಿಳೆಯರಂತೂ ಹೊಸ ಬಟ್ಟೆ ಖರೀದಿಗೆ ಕಾತರ ತೋರುತ್ತಿರುವ ಪರಿಣಾಮ ಬಟ್ಟೆ ಅಂಗಡಿಗಳು ಭರ್ತಿಯಾಗಿವೆ.

ಪುರುಷರು ಕುರ್ತಾ, ಪೈಜಾಮ್‌, ಹಬ್ಬದ ದಿನ ಸಾಮೂಹಿಕ ಪ್ರಾರ್ಥನೆಯಲ್ಲಿ ಧರಿಸಲು ವಿಶೇಷ ಆಕರ್ಷಣೆಯ ನಮಾಜ ಟೋಪಿಗಳನ್ನಿ ಕೊಳ್ಳಲು ಮುಂದಾಗಿದ್ದಾರೆ. ಸುಗಂಧ್ರ ದ್ರವ್ಯ ಖರೀದಿ ಅಂಗಡಿಗಳೂ ಜೋರಾಗಿ ವ್ಯಾಪಾರ ಮಾಡುತ್ತಿವೆ. ಮುಷ್ಕ, ಅಂಬರ್‌, ರೂಹೇ ಕಸ್ತೂರಿ, ಹೀನಾ, ಊದ್‌ ಸಂದಲಿಯಾ, ಜುಬೇದಾ, ಕೇಸರ್‌ ಚಂದಾನ್‌, ಜನ್ನತುಲ್‌ ರ್ಧೋಸ್‌, ಗುಲಾಬ್‌ ಹೀಗೆ ವಿವಿಧ ಬಗೆಯ ಸುಗಂಧ ದ್ರವ್ಯಗಳು ದುಬೈ, ಮುಂಬೈ, ಹೈದರಾಬಾದ್‌ ಸೇರಿದಂತೆ ಇತರೆ ಕಡೆಗಳಿಂದ ಗ್ರಹಕರ ಅಗತ್ಯೆ ತಕ್ಕಂತೆ ದುಬಾರಿ ಹಾಗೂ ಅಗ್ಗದ  ದರದ ಸುಗಂಧ ದ್ರವ್ಯಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ. ಶನಿವಾರದ ಸಾಮೂಹಿಕ ಪ್ರಾರ್ಥನೆ ನಡೆಯುವ ಮೈದಾನಗಳು ಸ್ವಚ್ಛಗೊಳ್ಳುತ್ತಿದ್ದು, ಪ್ರಾರ್ಥನೆಗೆ ಸಿದ್ಧಗೊಳಿಸಲಾಗುತ್ತಿದೆ.

ಸಾಮಾನ್ಯ ದಿನಗಳಿಗಿಂತ ರಂಜಾನ್‌ ಹಬ್ಬದ ಈ ಸಂದರ್ಭದಲ್ಲಿ ಡ್ರೈಪ್ರೂಟ್ಸ್‌ ಹಾಗೂ ಇತರೆ ವಸ್ತುಗಳ ಬೆಲೆ ಶೇ.30-40 ರಷ್ಟು ಹೆಚ್ಚಿದೆ. ಕೆಲವು  ವಸ್ತುಗಳ ಬೆಲೆ ದ್ವಿಗುಣಗೊಂಡಿದ್ದು, ಗೊಣಗುವಿಕೆ ಮಧ್ಯೆಯೇ ಗ್ರಾಹಕರ ತಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ಖರೀದಿಸುತ್ತಿದ್ದಾರೆ. ಕಳೆದ ಮೂರು ದಶಕಗಳಿಂದ ನಮ್ಮ ಕುಟುಂಬ ಒಣಹಣ್ಣುಗಳ ವ್ಯಾಪಾರದಲ್ಲಿ ತೊಡಗಿದ್ದು, ಇದೇ ಮೊದಲ ಬಾರಿಗೆ ಬೆಲೆ ಮುಗಿಲು ಮುಟ್ಟಿದೆ.

 ಆರೀಫ್‌ ಗಲಗಲಿ, ಸ್ಟಾರ್‌ ಮಸಾಲಾ ಸ್ಟ್ರೋರ್‌ ಎಲ್‌ಬಿಎಸ್‌ ಮಾರುಕಟ್ಟೆ  

Advertisement

Udayavani is now on Telegram. Click here to join our channel and stay updated with the latest news.

Next