Advertisement

ಪುಣ್ಯ ಸಂಪಾದನೆಗೆ ಪವಿತ್ರ ತಿಂಗಳು ರಮ್ಜಾನ್‌

09:44 PM May 28, 2019 | mahesh |

ಮುಸಲ್ಮಾನ್‌ ಬಂಧುಗಳು ತಿಂಗಳಾದ್ಯಂತ ಉಪವಾಸ ವ್ರತಾಚರಣೆಯ ಮೂಲಕ ಪವಿತ್ರ ರಮ್ಜಾನ್‌ನ್ನು ನಿಷ್ಠೆಯಿಂದ ಆಚರಿಸುತ್ತಾರೆ. ಈ ಪವಿತ್ರ ತಿಂಗಳಲ್ಲಿ ನಮಾಝ್, ಕುರಾನ್‌ ಪಠಣ ಹಾಗೂ ಬಡವರಿಗೆ ಜಕಾತ್‌ (ದಾನ) ನೀಡುವುದಲ್ಲದೇ ವೈಯಕ್ತಿಕವಾಗಿ ಉಪವಾಸದ ಮಾಡುವ ಮೂಲಕ ಆಚರಿಸಲಾಗುತ್ತದೆ. ರಮ್ಜಾನ್‌ ಮಾಸದ ಪಾವಿತ್ರ್ಯತೆ ಸಾರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. 

Advertisement

ಈ ದ್‌-ಉಲ್‌-ಫಿತ್ರ ಅನ್ನು ರಮ್ಜಾನ್‌ (ರಮ್‌ದಾನ್‌) ಹಬ್ಬ ಎನ್ನಲಾಗುತ್ತದೆ. ರಮ್‌ದಾನ್‌ ಆರಾಧನೆ, ದಾನ- ಧರ್ಮ, ಕುರಾನ್‌ ಪಾರಾಯಣ, ಉಪವಾಸ ವ್ರತಾಚರಣೆ ಮೂಲಕ ಪುಣ್ಯ ಸಂಪಾದನೆಗೆ ಇರುವ ಪವಿತ್ರ ತಿಂಗಳು ಎಂದೇ ಇದನ್ನು ಪರಿಗಣಿಸಲಾಗುತ್ತದೆ.

ಇಸ್ಲಾಮಿಕ್‌ ಪದ್ಧತಿಯ ಹಿಜರೀ ವರ್ಷದಲ್ಲಿ ಮೊಹರಂ, ಸಫ್ಗರ್‌, ರಬ್ಬೀಲ್‌ ಅವ್ವಲ್‌, ರಬ್ಬಿಲ್‌ ಆಖರ್‌, ಜುಮಾ ದಿಲ್‌ ಅವ್ವಲ್‌, ಜಿಮಾದಿಲ್‌ ಆಖರ್‌, ರಜ್ಜಬ್‌, ಶಾಬಾನ್‌, ರಮ್ಜಾನ್‌, ಶವ್ವಾಲ್‌, ಜಿಲ್‌ ಖೈರ್‌ ಮತ್ತು ಜಿಲ್‌ ಹಜ್‌ ಎಂಬ ಹನ್ನೆ ರೆಡು ತಿಂಗಳ ಪೈಕಿ 9ನೇ ರಮ್ಜಾನ್‌ ತಿಂಗಳ ಕೊನೆಯ ದಿನ ಚಂದ್ರ ದರ್ಶನವಾದ ತತ್‌ಕ್ಷಣ ಉಪವಾಸ ವ್ರತಾಚರಣೆಯನ್ನು ಕೊನೆಗೊಳಿಸುವುದು ಮತ್ತು ಮುಂದಿನ ದಿನ ಈದ್ಗಾ ಯಾ ಮಸೀದಿಗಳಲ್ಲಿ ಕೃತಾರ್ಥ ಭಾವದಿಂದ ಜಗದೊಡೆಯನಿಗೆ ಸಾಮೂಹಿಕ ನಮಾಝ್ ಸಲ್ಲಿಸುವ ಸಂಭ್ರಮೋಲ್ಲಾಸದ ಆಚರಣೆಯೇ ಈದ್‌-ಉಲ್‌-ಫಿತ್ರ.

ಈಗಾಗಲೇ ರಮ್ಜಾನ್‌ ವ್ರತಾಚರಣೆ ಆರಂಭವಾಗಿದ್ದು, ಜೂನ್‌ 4ರ ವರೆಗೆ ಇರಲಿದೆ. ದೇಶ- ವಿದೇಶಗಳಲ್ಲಿರು ಮುಸ್ಲಿಂ ಸಮುದಾಯದ ಬಹುತೇಕ ಎಲ್ಲರೂ ಇದನ್ನು ಕಟ್ಟು ನಿಟ್ಟಾಗಿ ಆಚರಿಸುತ್ತಾರೆ.

ವ್ರತಾಚರಣೆ ಯಾಕೆ ?
ಆಸ್ತಿ-ಆಂತಸ್ತು, ಆಡಂಬರದ ಬದುಕನ್ನು ಬಯಸುತ್ತಾ ಬದುಕಿನಲ್ಲಿ ಮಾಡಬಹುದಾದ ಧರ್ಮ ನಿಷಿದ್ಧ ಪಾಪ ಕಾರ್ಯಗಳಿಂದ ತಡೆದು, ಆಧ್ಯಾತ್ಮ ಚಿಂತನೆ ಮತ್ತು ಆರಾಧನೆಯ ಮೂಲಕ ಮನುಕುಲವನ್ನು ನರಕದಿಂದ ನಾಕದೆಡಗೆ ಪಯಣಿಸುವಂತೆ ಪ್ರೇರೇಪಿಸುವ ಸನ್ಮಾರ್ಗವೇ ಪರಿಶುದ್ಧ ರಮ್ಜಾನ್‌ ವ್ರತಾಚರಣೆ. ದೇವನೊಬ್ಬನೇ, ಮಹಮ್ಮದ್‌ (ಸ.ಅ.ಸ) ಅವರು ಅವನ ಪ್ರವಾದಿವರ್ಯರು ಎಂಬ ಸಂಕಲ್ಪವೂ ಸೇರಿದಂತೆ ಇಸ್ಲಾಂನ ಪಂಚ ಸ್ತಂಭಗಳಲ್ಲಿ ರಮ್ಜಾನ್‌ ತಿಂಗಳ ಉಪವಾಸದ ಆಚರಣೆಯೂ ಮಹತ್ವದಾಗಿದೆ. ಜಗದೊಡೆಯನೂ, ಸರ್ವಶಕ್ತನೂ ಆದ ದೇವರು ಮನು ಕುಲದ ಇಹ- ಪರ- ಶ್ರೇಯಸ್ಸಿಗೆ ಪರಿಶುದ್ಧ ಗ್ರಂಥ ಖುರಾನ್‌ನನ್ನು ಪ್ರವಾದಿ ಮಹಮ್ಮದ್‌ (ಸ.ಅ.ಸ) ರವರ ಮೂಲಕ ಭೂಮಿಗೆ ಅವತೀರ್ಣಗೊಳಸಿದ ತಿಂಗಳೂ ಕೂಡ ರಮ್ಜಾನ್‌ ಆಗಿದೆ.

Advertisement

ಯಾರಿಗೆ ರಿಯಾಯಿತಿ ?
ಮಕ್ಕಳು, ವೃದ್ಧರು, ಯಾತ್ರಿಕರು, ಋತುಸ್ರಾವ ಅವಧಿಯ ಮಹಿಳೆಯರು, ಬಾಣಂತಿಯರು, ರೋಗಿಗಳು, ದೈಹಿಕ ಮತ್ತು ಮಾನಸಿಕ ಅಸ್ವಸ್ಥತರಿಗೆ ರಿಯಾಯಿತಿ ಇದೆ. ಕಾಯಾ-ವಾಚಾ- ಮನಸಾ- ಸತ್‌ ಚಿಂತನೆ, ಆರಾಧನೆ, ಸತ್ಕಾರ್ಯಗಳಿಂದ ಅಂತರಂಗವನ್ನು ಶುದ್ಧೀಕರಿಸುವುದು. ತನ್ನ ಮತ್ತು ಮನುಕುಲದ ಇಹಪರದ ಒಳಿತಿಗಾಗಿ ಪ್ರಾರ್ಥಿಸುತ್ತಾ ವಿಶ್ವವೇ ಶಾಂತಿಯಿಂದಿರಲಿ ಎಂಬುವುದೇ ರಮ್ಜಾನ್‌ ಮಾಸ ಮತ್ತು ಈದ್‌-ಉಲ್‌- ಫಿತ್ರ ಆಚರಣೆಯ ಆದರ್ಶ ಆಶಯ.

– ಹಸನ್‌ ವಿಟ್ಲ

Advertisement

Udayavani is now on Telegram. Click here to join our channel and stay updated with the latest news.

Next