ಭಟ್ಕಳ: ಈದ್-ವುಲ್-ಫಿತ್ರ್ (ರಮ್ಜಾನ್ ಹಬ್ಬ) ದ ಕುರಿತು ಪೂರ್ವಭಾವಿಯಾಗಿ ಶಾಂತಿ ಸಮಿತಿಯ ಸಭೆಯು ತಹಸೀಲ್ದಾರ್ ಸುಮಂತ್ ಬಿ.ಇ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ನಾಗರೀಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಂಜೀಂ ಪ್ರಧಾನ ಕಾರ್ಯದರ್ಶಿ ಅಬ್ದುರ್ ರಖೀರ್ ಎಂ.ಜೆ. ನಾವೆಲ್ಲರೂ ಪರಸ್ಪರ ಸಹೋದರರಂತೆ ಇದ್ದೇವೆ. ಭಟ್ಕಳದಲ್ಲಿ ಎಲ್ಲಾ ಹಬ್ಬಗಳನ್ನೂ ಕೂಡಾ ನಾವು ಪರಸ್ಪರ ನಂಬಿಕೆ ವಿಶ್ವಾಸದಿಂದ ಆಚರಿಸುತ್ತಿದ್ದು ಈ ಬಾರಿಯೂ ಕೂಡಾ ನಾವು ಯಶಸ್ವೀಯಾಗಿ ಆಚರಿಸುತ್ತೇವೆ ಎಂದರು. ಇನ್ನೋರ್ವ ಪ್ರಮುಖ ಇನಾಯತ್‍ವುಲ್ಲಾ ಶಾಬಂದ್ರಿ ಮಾತನಾಡಿ ನಾವು ಪರಸ್ಪರ ನಂಬಿಕೆ ವಿಶ್ವಾಸದಿಂದ ಪ್ರತಿ ವರ್ಷವೂ ಎಲ್ಲಾ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದೇವೆ. ಈ ಬಾರಿಯೂ ಉತ್ತಮವಾಗಿ ಆಚರಿಸುತ್ತೇವೆ ಎಂದರು. ಪುರಸಭೆಯ ವತಿಯಿಂದ ಈದ್ಗಾ ಮೈದಾನ ಹಾಗೂ ಹೋಗುವ ರಸ್ತೆಗಳನ್ನು ಸ್ವಚ್ಚ ಗೊಳಿಸಲು ಸೂಚಿಸಬೇಕು. ಅಂದೇ ರಸ್ತೆ ಸ್ವಚ್ಚತೆಗೆ ತೊಡಗಿಕೊಂಡರೆ ಸಾಧ್ಯವಿಲ್ಲ, ಸ್ವಲ್ಪ ಮುಂಚಿತವಾಗಿ ಮಾಡಬೇಕು ಎಂದರು.
ಭಟ್ಕಳ ಅರ್ಬನ್ ಬ್ಯಾಂಕ್ ನಿರ್ದೇಶಕ ಶ್ರೀಧರ ನಾಯ್ಕ ಆಸರಕೇರಿ ಮಾತನಾಡಿ ನಮ್ಮ ಹಬ್ಬಗಳು ಬೇರೆ ಬೇರೆಯಾಗಿರಬಹುದು. ಆದರೆ ಆಚರಣೆಯ ಹಿಂದಿರುವ ಮರ್ಮ ಎಲ್ಲ ಧರ್ಮಗಳದ್ದೂ ಒಂದೇ ಆಗಿದೆ. ನಾವೆಲ್ಲರೂ ಕೂಡಾ ದೇವರು ಒಬ್ಬನೇ ಎನನುವ ನಂಬಿಕೆಯನ್ನಿಟ್ಟವರು. ಯಾವುದೇ ಹಬ್ಬಕ್ಕೆ ಇಲ್ಲಿ ತೊಂದರೆಯಾದ ಉದಾಹಣೆಯಿಲ್ಲ. ಈ ಬಾರಿಯೂ ಕೂಡಾ ಎಲ್ಲರೂ ಸೇರಿ ಉತ್ತಮ ರೀತಿಯಲ್ಲಿ ಹಬ್ಬದ ಆಚರಣೆ ನಡೆಯಲಿ ಎಂದು ಹಾರೈಸಿದರು.
ಸಭೆಯಲ್ಲಿ ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ ಮಾತನಾಡಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಎಲ್ಲರೂ ಸಹಕರಿಸಬೇಕು. ಯಾವುದೇ ಸಂಶಯದ ನಡವಳಿಕೆ, ಎಲ್ಲಿ ಯಾವ ರೀತಿಯ ತೊಂದರೆ ಆದರೂ ತಕ್ಷಣ ಇಲಾಖೆಗೆ ತಿಳಿಸಬೇಕು ಎಂದರು.
ಸಭೆಯಲ್ಲಿ ತಂಜೀಮ್ ಅಧ್ಯಕ್ಷ ಎಸ್. ಎಂ. ಪರ್ವೇಜ್, ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶಿಮಜಿ, ಉಪಾಧ್ಯಕ್ಷ ಖೈಸರ್ ಮೊಹತೆಶಂ, ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಎಂ.ಆರ್.ನಾಯ್ಕ, ಶ್ರೀಧರ ಮೊಗೇರ, ಶಾಂತಾರಾಮ ಭಟ್ಕಳ್, ಸರ್ಕಲ್ ಇನ್ಸಪೆಕ್ಟರ್ ದಿವಾಕರ ಪಿ.ಎಂ., ಸಬ್ ಇನ್ಸಪೆಕ್ಟರ್ ಹೆಚ್.ಬಿ. ಕುಡಗುಂಟಿ, ಸುಮಾ ಬಿ., ಅಗ್ನಿಶಾಮಕ ಠಾಣೆಯ ರಮೇಶ, ಪುರಸಭಾ ಪ್ರಭಾರ ಮುಖ್ಯಾಧಿಕಾರಿ ದೇವರಾಜ, ಹಿರಿಯ ಆರೋಗ್ಯಾಧಿಕಾರಿ ಸುಜಯಾ ಸೋಮನ್, ಹೆಸ್ಕಾಂ ಸಹಾಯಕ ಇಂಜಿನಿಯರ್ ಶಿವಾನಂದ ಮುಂತಾದವರು ಉಪಸ್ಥಿತರಿದ್ದರು.