ಹುಬ್ಬಳ್ಳಿ: ಕೋವಿಡ್ ಆತಂಕ, ಲಾಕ್‌ಡೌನ್ ಈ ಬಾರಿಯ ರಂಜಾನ್ ಸಂಭ್ರಮದ ಮೇಲೆ ಕರಿಛಾಯೆ ಮೂಡಿಸಿದಂತಾಗಿದ್ದು, ವ್ಯಾಪಾರ-ವಹಿವಾಟು ಕಳೆಗುಂದಿದಂತಾಗಿದೆ. ಪ್ರತಿ ವರ್ಷ ಒಂದು ತಿಂಗಳ ಕಾಲ ಉಪವಾಸ, ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ವಿಜೃಂಭಣೆಯಿಂದ ಆಚರಿಸುತ್ತಿದ್ದ ರಂಜಾನ್ ಹಬ್ಬ ಈ ಬಾರಿ ಸದ್ದಿಲ್ಲದೇ ನಡೆಯುವಂತಾಗಿದೆ. ರಂಜಾನ್ ವೇಳೆಗೆ ಪ್ರತಿವರ್ಷ ಜನರಿಂದ ತುಂಬಿರುತ್ತಿದ್ದ ಇಲ್ಲಿನ ಶಹಾ ಬಜಾರ್ ಭಣಗುಡುತ್ತಿದೆ. ದುರ್ಗದ ಬಯಲು ಇನ್ನಿತರ ಕಡೆಯಲ್ಲಿ ಜನರೇ ಇಲ್ಲದಂತಾಗಿದೆ.
ಝಗಮಗವೇ ಇಲ್ಲ: ಪ್ರತಿ ವರ್ಷ ರಂಜಾನ್ ಹಬ್ಬದ ಸಮಯದಲ್ಲಿ ವಿದ್ಯುತ್ ಅಲಂಕಾರ ಹಾಗೂ ಜನಜಂಗುಳಿಯಿಂದ ಕೂಡಿರುತ್ತಿದ್ದ ಶಹಾ ಬಜಾರ್ ಮಾರುಕಟ್ಟೆ ಬಿಕೋ ಎನ್ನುತ್ತಿದೆ. ಹುಬ್ಬಳ್ಳಿ ಮಾರುಕಟ್ಟೆ ಇದೀಗ ಕೊರೊನಾ ವೈರಸ್‌ನಿಂದ ನೆಲಕಚ್ಚಿದೆ. ರಂಜಾನ್ ಸಮಯದಲ್ಲಿ ಎಲ್ಲ ಬಟ್ಟೆ ಅಂಗಡಿಗಳು ಜನರಿಂದ
ತುಂಬಿರುತ್ತಿದ್ದವು. ಆದರೆ ಈ ಬಾರಿ ಅಂತಹ ಯಾವುದೇ ಸನ್ನಿವೇಶ ಕಂಡು ಬರುತ್ತಿಲ್ಲ ರಂಜಾನ್ ಹಬ್ಬದ ನಿಮಿತ್ತ ಖರೀದಿಗೆಂದು ಗದಗ, ಹಾವೇರಿ, ಕೊಪ್ಪಳ, ಬಾಗಲಕೋಟೆ, ಯಲ್ಲಾಪುರ, ಬೆಳಗಾವಿ ಇನ್ನಿತರ ಕಡೆಯಿಂದ ಜನರು ಹುಬ್ಬಳ್ಳಿ ಮಾರುಕಟ್ಟೆಗೆ ಬರುತ್ತಿದ್ದರು. ಈ ಬಾರಿ ಅದು ಇಲ್ಲವಾಗಿದೆ.
ದುರ್ಗದ ಬಯಲಿನಲ್ಲಿ ಖರೀದಿ: ರಂಜಾನ್ ಹಬ್ಬದ ನಿಮಿತ್ತ ಇಲ್ಲಿನ ದುರ್ಗದ ಬಯಲು ವೃತ್ತದ ಬಳಿ ಹಬ್ಬದ ಮುನ್ನಾ ದಿನವಾದ ಶನಿವಾರ ಭರ್ಜರಿ ವ್ಯಾಪಾರ ನಡೆಸಲಾಗುತ್ತಿತ್ತು. ಹಬ್ಬದ ಆಚರಣೆಗೆ ಬೇಕಾಗುವ ದಿನಸಿ, ಹಾಗೂ ಸಿಹಿ ಪದಾರ್ಥಗಳ ಖರೀದಿ ಜೋರಾಗಿ ನಡೆಯುತ್ತಿತ್ತು.
200ಕ್ಕೂ ಹೆಚ್ಚು ಮಳಿಗೆಗಳಿಗೆ ಬೀಗ: ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ರೋಗ ಭೀತಿಯಿಂದ ಶಹಾ ಬಜಾರ್ ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಕೆಲವೊಂದು ಕಡೆ ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು,ಮುಖಕ್ಕೆ ಮಾಸ್ಕ್ ಧರಿಸುವುದಾಗಲಿ, ಸಾಮಾಜಿಕ ಅಂತರ ಇಲ್ಲದಿರುವುದು ಕಂಡು ಬಂತು.