ಸಿಂಧನೂರು: ಏಕಕಾಲಕ್ಕೆ ಮೇ 3ರಂದು ರಂಜಾನ್ ಹಾಗೂ ಬಸವ ಜಯಂತಿ ಬಂದಿವೆ. ಇಂತಹ ಸಂದರ್ಭದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವೆಂಬ ಭಾವೈಕ್ಯ ಸಂದೇಶ ಸಾರುವ ರೀತಿಯಲ್ಲಿ ವಿನೂತನ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಬಸವಕೇಂದ್ರದಲ್ಲಿ ಮುಸ್ಲಿಂ ಮುಖಂಡರು ಹಾಗೂ ಬಸವಬಳಗದ ನೇತೃತ್ವದಲ್ಲಿ ಬುಧವಾರ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಬಸವಕೇಂದ್ರದಿಂದ ಹಮ್ಮಿಕೊಂಡಿರುವ ವಚನಗಳಲ್ಲಿ ನಗೆಬೆಳಕು ಕಾರ್ಯಕ್ರಮವೂ ಕೂಡ ಬಸವ ಜಯಂತಿಯಂದು ಸಮಾರೋಪಗೊಳ್ಳುತ್ತದೆ. ಸಂಜೆ 4 ಗಂಟೆಗೆ ತಹಶೀಲ್ ಕಚೇರಿಯಿಂದ ಮೆರವಣಿಗೆ ಆರಂಭವಾಗುತ್ತದೆ. ಈ ವೇಳೆ ಅನುಭವ ಮಂಟಪ, ವಚನಗಳನ್ನು ಬಿತ್ತರಿಸುವ ಸ್ತಬ್ಧಚಿತ್ರಗಳಿರಲಿವೆ. ಜೊತೆಗೆ, ಕುರಾನ್ ಸಂದೇಶ, ಮೆಕ್ಕಾ ಮದಿನಾ ಸ್ತಬ್ಧ ಚಿತ್ರಗಳು ಜೊತೆಗೂಡಲಿವೆ. ಇದೊಂದು ಐತಿಹಾಸಿಕ, ವಿನೂತನ ಕಾರ್ಯಕ್ರಮವಾಗಲಿದೆ ಎಂದರು.
ಸಿಹಿ, ತಂಪು ಪಾನೀಯ ಹಂಚಿಕೆ: ಭಾವೈಕ್ಯತಾ ಸಂದೇಶ ಸಾರುವ ಈ ಮೆರವಣಿಗೆಯಲ್ಲಿ ಎಲ್ಲ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ ರಂಜಾನ್ ಪ್ರಾರ್ಥನೆ ಮುಗಿಸಿ ಮುಸ್ಲಿಮರು ಬಸವ ಸರ್ಕಲ್‌ಗೆ ಆಗಮಿಸಿದ ವೇಳೆ ತಂಪು ಪಾನೀಯ ನೀಡಲಾಗುತ್ತದೆ. ಸಂಜೆ 4 ಗಂಟೆಗೆ ಭಾವೈಕ್ಯತಾ ಮೆರವಣಿಗೆ ಬಸವ ಸರ್ಕಲ್ ಮಾರ್ಗವಾಗಿ ಬಡಿಬೇಸ್ ಮಸೀದಿ ತಲುಪಿದಾಗ ಅಲ್ಲಿ ಮುಸ್ಲಿಂ ಮುಖಂಡರು ಸಿಹಿಯನ್ನು ಹಂಚಲಿದ್ದಾರೆ. ಬಡಿಬೇಸ್ ಮಾರ್ಗವಾಗಿ ಸಿಪಿಎಸ್ ಶಾಲೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮ ಸ್ಥಳ ತಲುಪಿದ ಮೇಲೆ ಮೆರವಣಿಗೆ ಸಮಾರೋಪಗೊಳ್ಳಲಿದೆ ಎಂದರು.
ವಿನೂತನ ಹೆಜ್ಜೆಗೆ ಶ್ಲಾಘನೆ: ಮುಸ್ಲಿಂ ಸಮಾಜದ ಮುಖಂಡರಾದ ಎಂ.ಡಿ.ನದಿಮುಲ್ಲಾ, ಕೆ.ಜಿಲಾನಿಪಾಷಾ, ಬಿಸ್ಸೆನ್ನೆಎಲ್ ಹುಸೇನಸಾಬ್ ಮಾತನಾಡಿ, ಇಂತಹ ಒಂದು ವಿನೂತನ ಕಾರ್ಯಕ್ರಮದ ಆಲೋಚನೆಯನ್ನು ಹಂಚಿಕೊಂಡಿರುವ ಮಾಜಿ ಶಾಸಕ ಹಂಪನಗೌಡರ ನಡೆ ಶ್ಲಾಘನೀಯ. ಕರ್ನಾಟಕ ಭಾವೈಕ್ಯತೆಯಲ್ಲಿ ಮುಂದಿದೆ. ಯಾರೋ ಬೆರಳೆಣಿಕೆಯಷ್ಟು ಜನರಿಂದ ಸೌಹಾರ್ದತೆ ಕೆಡಲು ಸಾಧ್ಯವಿಲ್ಲ. ಅಂತಹ ಗಟ್ಟಿ ಸಂದೇಶವನ್ನು ಈ ಕಾರ್ಯಕ್ರಮ ರವಾನೆ ಮಾಡಲಿದೆ ಎಂದರು.
ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಪಿ.ವೀರಭದ್ರಪ್ಪ ಕುರುಕುಂದಿ, ವೀರಶೈವ ಸಮಾಜದ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಶರಣಪ್ಪ ಟೆಂಗಿನಕಾಯಿ, ಕರೇಗೌಡ ಕುರುಕುಂದಿ, ಎಂ.ಭಾಸ್ಕರ್, ಬೀರಪ್ಪ ಶಂಭೋಜಿ, ಸೋಮನಗೌಡ ಬಾದರ್ಲಿ, ಖಾಜಿಮಲಿಕ್, ಬಸವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಟಿ.ಎಂ.ಪಾಟೀಲ್, ಬಸವಕೇಂದ್ರದ ಅಧ್ಯಕ್ಷ ನಾಗಭೂಷಣ ಸೇರಿದಂತೆ ಅನೇಕರು ಇದ್ದರು.