Advertisement

ರಮ್ಯ, ಮನೋಹರ ವಯನಾಡ್‌

12:07 AM Dec 26, 2019 | Sriram |

“ದೇವರ ಸ್ವಂತ ನಾಡು’ ಕೇರಳದಲ್ಲಿ ಪ್ರವಾಸ ತಾಣಗಳಿಗೇನೂ ಕೊರತೆ ಇಲ್ಲ. ಹಸುರು ಬೆಟ್ಟ , ನದಿ, ಕಡಲ ಕಿನಾರೆ ಪ್ರವಾಸಿಗರಿಗೆ ಸ್ವರ್ಗಸದೃಶ ಅನುಭವ ಕಟ್ಟಿ ಕೊಡುತ್ತವೆ. ಅಂತಹ ನಿಸರ್ಗ ಚೆಲುವಿನಲ್ಲೊಂದು ಸುತ್ತು…

Advertisement

ರಮಣೀಯ ಪ್ರವಾಸಿ ತಾಣಗಳನ್ನು ಹೊಂದಿರುವ ದೇವರ ಸ್ವಂತ ನಾಡು ಕೇರಳಕ್ಕೆ ಪ್ರವಾಸ ಹೋಗಬೇಕೆಂದು ಯೋಚಿಸಿ ದಿನಾಂಕ ಹೊಂದಿಸುವಷ್ಟರಲ್ಲೇ ಹಲವು ದಿನಗಳು ಕಳೆದಿದ್ದವು. ಬೇರೆ ಬೇರೆ ಕಡೆ ಕೆಲಸ ಮಾಡುವ 5 ಮಂದಿ ಗೆಳೆಯರು ಸೇರಿ ಕೊನೆಗೂ ಒಂದು ದಿನ ಗೊತ್ತುಪಡಿಸಿ ಕಾರಿನಲ್ಲಿ ಎರಡು ದಿನಗಳ ಪ್ರವಾಸಕ್ಕೆ ಹೊರಟಿದ್ದಾಯಿತು.

ಮಂಗಳೂರಿನಿಂದ ಮಡಿಕೇರಿ ಮೂಲಕ ರಾತ್ರಿ ಪ್ರಯಾಣ ಆರಂಭವಾಯಿತು. ಮರುದಿನ ಮುಂಜಾವ ಸುಮಾರು 5.45ರ ವೇಳೆಗೆ ಮೊದಲೇ ಬುಕ್‌ ಮಾಡಿದ್ದ ವಯನಾಡ್‌ ಜಿಲ್ಲೆಯ ಕಲ್ಪೆಟ್ಟದ ಹೋಂ ಸ್ಟೇಯಲ್ಲಿ ವಿಶ್ರಾಂತಿ ಪಡೆದೆವು. ಬಳಿಕ ಹೊಟೇಲೊಂದರಲ್ಲಿ ಅಲ್ಲಿನ ಸಾಂಪ್ರದಾಯಿಕ ಉಪಾಹಾರವಾದ ಆಪ್ಪಂ, ಪುಟ್ಟ್, ಪತ್ತಿರಿ, ಮುಟ್ಟಕ್ಕರಿ (ಮೊಟ್ಟೆ ಸಾರು) ಸೇವಿಸಿ, ಎಡಕ್ಕಲ್‌ ಗುಹೆ ಸಂದರ್ಶಿಸಿದೆವು.

ಪ್ರವಾಹದ ಚಿತ್ರಣ
ಮಧ್ಯಾಹ್ನದ ಬಳಿಕ ಸೂಚಿಪಾರ ಜಲಪಾತಕ್ಕೆಂದು ಹೊರಟೆವು. ಆ ದಾರಿಯಲ್ಲಿ ಸಾಗಿ ಸ್ಥಳೀಯ ಆಟೋ ಚಾಲಕರಲ್ಲಿ ವಿಚಾರಿಸಿದಾಗ ಪ್ರವಾಹದಿಂದಾಗಿ ಸುಮಾರು 8 ತಿಂಗಳುಗಳಿಂದ ಆ ಜಲಪಾತ ವೀಕ್ಷಣೆಗೆ ಲಭ್ಯವಿಲ್ಲ ಎನ್ನುವ ಮಾಹಿತಿ ಲಭಿಸಿತು. ಆದರೂ ಅಲ್ಲಿಂದ ತುಸು ದೂರ ಸಾಗಿದಾಗ ಕಳೆದ ವರ್ಷ ಉಂಟಾಗಿದ್ದ ಪ್ರವಾಹಕ್ಕೆ ನಲುಗಿದ್ದ ಪ್ರದೇಶ ಎದುರಾಯಿತು. ಕೆಸರಿನಲ್ಲಿ ಹುಗಿದು ಹೋದಂತಿದ್ದ ಮನೆ, ಎತ್ತರದ ಜಾಗದಲ್ಲಿದ್ದ ಮನೆಯ ಬಲ ಪಾರ್ಶ್ವದಲ್ಲಿ ಪ್ರವಾಹದಿಂದ ಉಂಟಾಗಿದ್ದ ಕಂದಕ, ಆ ಮನೆಯ ಎದುರು ಶೇಖರಗೊಂಡಿದ್ದ ಮಣ್ಣು, ಕೊಚ್ಚಿ ಬಂದು ಅಲ್ಲಲ್ಲಿ ಬಿದ್ದುಕೊಂಡಿದ್ದ ದೈತ್ಯ ಮರಗಳು, ಇಡೀ ಪ್ರದೇಶದಲ್ಲಿ ಹಬ್ಬಿದ್ದ ವಿಚಿತ್ರ ವಾಸನೆ.. ಎಲ್ಲವೂ ಪ್ರವಾಹದ ಭೀಕರತೆಯನ್ನು ಸೂಚಿಸುತ್ತಿದ್ದವು. ಅಲ್ಲಿಯೇ ಇದ್ದ ಅಂಗಡಿ ಯವರಲ್ಲಿ ಕರಾಳತೆಯನ್ನು ಕೇಳಿ, ಅಂದಿನ ಸುತ್ತಾಟ ಅಲ್ಲಿಗೆ ಮುಗಿಸಿದೆವು.

ಪೂಕೋಡ್‌ ಲೇಕ್‌
ಮರುದಿನ ಕಲ್ಪೆಟ್ಟದಿಂದ ಸುಮಾರು 15 ಕಿ.ಮೀ. ದೂರದಲ್ಲಿ ಲಕ್ಕಿಡಿ ಗ್ರಾಮದಲ್ಲಿರುವ ಪೂಕೋಡ್‌ ಲೇಕ್‌ಗೆ ಭೇಟಿ ನೀಡಿದೆವು. ಸುಮಾರು 13 ಎಕ್ರೆ ವಿಶಾಲವಾಗಿರುವ ಈ ಕೆರೆ ಏರಿಯಲ್‌ ವ್ಯೂನಲ್ಲಿ ಭಾರತದ ಭೂಪಟದ ಆಕೃತಿಯಲ್ಲಿ ಕಾಣುತ್ತದಂತೆ. 30 ರೂ. ಪಾರ್ಕಿಂಗ್‌ ಶುಲ್ಕ ಹಾಗೂ ಪ್ರತಿಯೋರ್ವರಿಗೆ 30 ರೂ. ಪ್ರವೇಶ ಶುಲ್ಕವಿದೆ. ಇಲ್ಲಿ ಬೋಟಿಂಗ್‌ಗೆ ಅವಕಾಶವಿದೆ. 7 ಮಂದಿ ಕೂರಬಹುದಾದ ಹುಟ್ಟು ಹಾಕುವ ದೋಣಿಯಲ್ಲಿ ಅರ್ಧ ಗಂಟೆಗೆ 500 ರೂ. ಪಾವತಿಸಿ ಸಂಚಾರ ಕೈಗೊಂಡೆವು. ದೋಣಿಯಾತ ನಮ್ಮನ್ನು ಕೆರೆಯ ದಿಕ್ಕುಗಳನ್ನು ಕಾಶ್ಮೀರ, ಕನ್ಯಾಕುಮಾರಿ, ಬಂಗಾಲ, ಗುಜರಾತ್‌ ಎಂದು ಪರಿಚಯಿಸಿ ನಮ್ಮ ಪೋನ್‌ನಲ್ಲಿ ನಮ್ಮ ಫೋಟೋ ತೆಗೆದುಕೊಟ್ಟರು. ಹುಟ್ಟು ಹಾಕುವುದಕ್ಕೂ ಓಕೆ ಅಂದರು. ಕೆರೆಯಲ್ಲಿ ಮೀನು ಸಾಕಾಣಿಕೆ ಇದೆ. ಕಟ್ಲ, ರೋಹು, ಮಹಶೀರ್‌ ಮೀನುಗಳನ್ನು ಸಾಕಲಾಗುತ್ತದೆ ಇತ್ಯಾದಿ ಮಾಹಿತಿ ನೀಡಿದರು.

Advertisement

ಲಕ್ಕಿಡಿ ವ್ಯೂ ಪಾಯಿಂಟ್‌
ಪೂಕೋಡ್‌ನಿಂದ ಸುಮಾರು 3 ಕಿ.ಮೀ. ದೂರದಲ್ಲಿ ಲಕ್ಕಿಡಿ ವ್ಯೂ ಪಾಯಿಂಟ್‌ ಇದೆ. ಕೋಯಿಕ್ಕೋಡ್‌ನಿಂದ ವಯನಾಡ್‌ಗೆ ಇದು ಪ್ರವೇಶ ದ್ವಾರ. ಇಲ್ಲಿ ಸುಂದರ ಹಸುರು ದೃಶ್ಯ ಕಣ್ತುಂಬಿಕೊಂಡೆವು.

ಬಾಣಾಸುರ ಸಾಗರ ಡ್ಯಾಂ
ಪೂಕೋಡ್‌ನಿಂದ ಸುಮಾರು 25 ಕಿ.ಮೀ. ದೂರದಲ್ಲಿ ಭಾರತದ ಅತಿದೊಡ್ಡ ಮತ್ತು ಏಷ್ಯಾದ ಎರಡನೇ ಅತಿದೊಡ್ಡ ಅರ್ತ್‌ ಡ್ಯಾಂ ಸಿಗುತ್ತದೆ. ಬಲಿ ಚಕ್ರವರ್ತಿಯ ಮಗ, ಕೇರಳದ ಪ್ರಸಿದ್ಧ ದೊರೆ ಬಾಣನ ಹೆಸರಿನಲ್ಲಿ ಕರೆಯಲ್ಪಡುವ “ಬಾಣಾಸುರ ಸಾಗರ ಡ್ಯಾಂ’ ಕಲ್ಲು ಮತ್ತು ಬೌಲ್ಡರ್ ನಿಂದ ನಿರ್ಮಿತವಾದುದು. ಇಲ್ಲಿ 40 ರೂ. ಪಾರ್ಕಿಂಗ್‌ ಶುಲ್ಕ ಇದೆ. ವಿಶ್ವದ ಮೊದಲ ಡ್ಯಾಂಟಾಪ್‌ ಸೋಲಾರ್‌ ಪವರ್‌ ಪ್ಲಾಂಟ್‌ ಇಲ್ಲಿದೆ. ಇಲ್ಲಿನ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡೆವು. ರಾತ್ರಿ ತೋಳೆ³ಟ್ಟಿ ಅರಣ್ಯದ ಮಾರ್ಗವಾಗಿ ಮರಳುವಾಗ ರಸ್ತೆ ಬದಿ ಆನೆ, ಜಿಂಕೆಗಳನ್ನು ಕಂಡೆವು. ನಿರ್ಜನ ಪ್ರದೇಶವಾದ್ದರಿಂದ ಆನೆಗಳನ್ನು ಕಂಡು ದಿಗಿಲಾದರೂ ಸುದೈವವಶಾತ್‌ ವಾಹನ ಸಾಗುವುದಕ್ಕೆ ಏನೂ ತೊಂದರೆಯಾಗಲಿಲ್ಲ.

ಎಡಕ್ಕಲ್‌ ಗುಹೆ
ಕಲ್ಪೆಟ್ಟದಿಂದ ಸುಮಾರು 25 ಕಿ.ಮೀ. ದೂರದಲ್ಲಿ, ಸಮುದ್ರ ಮಟ್ಟದಿಂದ ಸುಮಾರು 1,200 ಮೀ. ಎತ್ತರದಲ್ಲಿ ಅಂಬುಕುತ್ತಿ ಮಲೆಯಲ್ಲಿರುವ ಎಡಕ್ಕಲ್‌ ಗುಹೆ ತಲುಪಲು ವಾಹನ ನಿಲ್ಲಿಸಿ ಸುಮಾರು ಒಂದೂವರೆ ಕಿ.ಮೀ. ನಡೆಯಬೇಕು. ಮೆಟ್ಟಲುಗಳನ್ನು ಏರಿ ಗುಹೆ ತಲುಪಬೇಕು. ಗುಹೆಯ ಒಳಗೆ ನೈಸರ್ಗಿಕ ಬೆಳಕಿದೆ. ನೈಸರ್ಗಿಕವಾಗಿ ರೂಪುಗೊಂಡಿರುವ ಈ ಗುಹೆಯ ಗೋಡೆಗಳ ಮೇಲೆ ಕ್ರಿ.ಪೂ. 6000ದ ಸಮಯದ್ದೆಂದು ಹೇಳಲಾಗುವ ಕೆತ್ತನೆ ಚಿತ್ರಗಳಿವೆ. ಮನುಷ್ಯರ, ಪ್ರಾಣಿಗಳ ಚಿತ್ರಗಳು ಇತಿಹಾಸಜ್ಞರ, ಪ್ರಾಕ್ತನಶಾಸ್ತ್ರಜ್ಞರ ಗಮನ ಸೆಳೆದಿವೆ. ಶಿಲಾಯುಗದ ಕೆತ್ತನೆಗಳನ್ನು ಹೊಂದಿರುವ ಭಾರತದ ಏಕೈಕ ಸ್ಥಳ ಎಡಕ್ಕಲ್‌ ಗುಹೆ ಎಂದೂ ಹೇಳಲಾಗುತ್ತದೆ. ತಮಿಳು ಮತ್ತು ಬ್ರಾಹ್ಮಿà ಲಿಪಿಯ ಬರಹಗಳನ್ನೂ ಕಾಣಬಹುದಾಗಿದೆ.

ರೂಟ್‌ ಮ್ಯಾಪ್‌
-ಪ್ರೇಕ್ಷಣೀಯ ಸ್ಥಳಗಳು ಸಾಕಷ್ಟಿವೆ. ಕಾರು ಅಥವಾ ಬೈಕ್‌ ಇದ್ದರೆ ಉತ್ತಮ.
-ಮಂಗಳೂರಿನಿಂದ ವಯನಾಡ್‌ಗೆ
ಸುಮಾರು 6 ಗಂಟೆ ಪ್ರಯಾಣ (ಕಾರಿನಲ್ಲಿ).
-ಊಟ, ತಿಂಡಿಗೆ ತೊಂದರೆಯಿಲ್ಲ. ಆದರೆ ಶುದ್ಧ ಸಸ್ಯಾಹಾರಿ ಹೊಟೇಲ್‌ ಸಿಗುವುದು ಕಷ್ಟ.
-ವಿಶ್ರಾಂತಿಗೆ ಡೋರ್ಮೆಟ್ರಿ, ಹೋಂಸ್ಟೇಗಳು ಲಭ್ಯವಿರುತ್ತವೆ.
– ಸ್ಥಳೀಯ ಮಿತ್ರರು ಗೈಡ್‌ಗಳಾಗಿದ್ದರೆ ಅತ್ಯುತ್ತಮ.

ಕುದ್ಯಾಡಿ ಸಂದೇಶ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next