ಬೆಂಗಳೂರು : ಎಂ.ಬಿ. ಪಾಟೀಲ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರು. ರಮ್ಯಾ ಅವರು ಪಕ್ಷದ ಮಾಜಿ ಸಂಸದೆ. ಇಬ್ಬರೂ ನಮಗೆ ಬೇಕಾದವರು. ಎಲ್ಲಿ, ಏನು ಅಪಾರ್ಥವಾಗಿದೆಯೋ ತಿಳಿದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿಕೆಯಿಂದಾದ ಹಾನಿ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರು , ಮಾಜಿ ಸಂಸದೆ ರಮ್ಯಾ ಅವರ ಟ್ವೀಟ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್ ಅವರು, ‘ನನಗೆ ಯಾವುದೇ ವಿಚಾರ ತಿಳಿದಿಲ್ಲ. ಮಾಧ್ಯಮಗಳು ನಮ್ಮ ಮನೆಗೆ ಬಂದು ಅಶ್ವತ್ಥ್ ನಾರಾಯಣ್ ಅವರು ಎಂ.ಬಿ ಪಾಟೀಲ್ ಅವರ ಮನೆಗೆ ಹೋಗಿದ್ದಾರೆ ಎಂದು ಪ್ರಶ್ನೆ ಕೇಳಿದರು. ನಾನು ರಕ್ಷಣೆಗೆ ಹೋಗಿರಬಹುದು ಎಂದು ಹೇಳಿದ್ದೇನೆ. ಇದರ ಹೊರತಾಗಿ ಬೇರೇನೂ ವಿಚಾರವಿಲ್ಲ. ಅನಗತ್ಯ ರಂಪಾಟ ಬೇಡ. ಯಾರಿಗೆ ಯಾವ ವಿಚಾರವಾಗಿ ನೋವಾಗಿದೆಯೋ ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಬಹಿರಂಗವಾಗಿ ಚರ್ಚೆ ಮಾಡಲು ಸಿದ್ಧವಿಲ್ಲ ಎಂದರು.
ಕುಮಾರಸ್ವಾಮಿ ಅವರ ಆರೋಪದಲ್ಲಿ ಸತ್ಯಾಂಶವಿದೆ
ಸದ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಅಕ್ರಮವನ್ನು ಮುಚ್ಚಿಹಾಕುವ ಪ್ರಯತ್ನದ ಬಗ್ಗೆ ಚರ್ಚೆ ಮಾಡೋಣ. ಪಿಎಸ್ಐ ಹಗರಣ, ಎಫ್ ಡಿಎ, ಕಿರಿಯ ಇಂಜಿನಿಯರ್ ನೇಮಕ ವಿಚಾರದಲ್ಲಿ ಏನಾಗಿದೆ ಎಂದು ತನಿಖೆ ಆಗಲಿ. ಈಗಾಗಲೇ ಬಂಧಿತರು ಜೆಇ ಹುದ್ದೆ ಅಕ್ರಮದಲ್ಲೂ ಭಾಗಿಯಾಗಿರುವುದಾಗಿ ಹೇಳಿಕೆ ನೀಡಿದ್ದರೂ ಅದನ್ನು ಪಕ್ಕಕ್ಕಿಟ್ಟು ಪಿಎಸ್ ಐ ವಿಚಾರವನ್ನು ಮಾತ್ರ ತನಿಖೆ ಮಾಡುತ್ತಿದ್ದಾರೆ. ಇದು ದೊಡ್ಡ ಡೀಲ್, 300 ಕೋಟಿ ರೂ . ಅವ್ಯವಹಾರ ನಡೆದಿದೆ ಎಂಬ ಕುಮಾರಸ್ವಾಮಿ ಅವರ ಆರೋಪದಲ್ಲಿ ಸತ್ಯಾಂಶವಿದೆ. ಈ ವಿಚಾರದಲ್ಲಿ ಚಿಂತನೆ ಮಾಡಬೇಕು ಎಂದು ಒತ್ತಾಯ ಮಾಡುತ್ತೇವೆ’ ಎಂದರು.
ಪಿಎಸ್ಐ ಹಾಗೂ ಇತರೆ ನೇಮಕಾತಿ ಅಕ್ರಮ ವಿಚಾರದಲ್ಲಿ ಸರ್ಕಾರ ಮೌನವಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಮೌನ ವಹಿಸಿಲ್ಲ. ಜನರ ಗಮನವನ್ನು ಈ ವಿಚಾರದಿಂದ ಬೇರೆಡೆ ಸೆಳೆಯಲು ಈ ಎಲ್ಲ ವಿಚಾರಗಳು ಬರುತ್ತಿವೆ. 40 ಪರ್ಸೆಂಟ್ ಕಮಿಷನ್, ನೇಮಕಾತಿ ಅಕ್ರಮ ನಮ್ಮ ಪ್ರಮುಖ ಅಜೆಂಡಾ. ಪಿಎಸ್ಐ ಅಕ್ರಮದಲ್ಲಿ ಕೇವಲ ಅಭ್ಯರ್ಥಿಗಳನ್ನು ಬಂಧಿಸಿದರೆ ಸಾಲದು, ನೀವು ಅಕ್ರಮದ ಅಂಗಡಿ ತೆರೆದಿದ್ದಕ್ಕೆ ಅವರು ಬಂದಿದ್ದಾರೆ. ಈ ಅಕ್ರಮದ ಅಂಗಡಿ ತೆರೆಯಲು ಬೆಂಬಲ ನೀಡಿದ ಪ್ರಮುಖರ ಹೆಸರು ಬಹಿರಂಗವಾಗಲಿ. ಯಾರು ಎಷ್ಟು ಜನರಿಗೆ ಬೆಂಬಲ ನೀಡಿದ್ದಾರೆ. ಯಾರ ಕಚೇರಿಯಿಂದ ಯಾರಿಗೆ ಎಷ್ಟು ಕರೆ ಹೋಗಿದೆ ಎಂಬ ಮಾಹಿತಿ ನಮ್ಮ ಬಳಿ ಇವೆ. ಸರ್ಕಾರ ತನಿಖೆಯನ್ನು ಯಾವ ರೀತಿ ಮಾಡುತ್ತದೆಯೋ ಮಾಡಲಿ. ಸಮಯ ಬಂದಾಗ ನಾವು ಮಾತನಾಡುತ್ತೇವೆ’ ಎಂದರು.
ದಿನನಿತ್ಯ ಅಶ್ವತ್ಥ್ ನಾರಾಯಣ್ ಅವರು ನಿಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, ‘ಮಾತನಾಡಲಿ, ಅವರು ನನ್ನ ಬಗ್ಗೆ ಮಾತನಾಡಿದರೆ ಅವರಿಗೆ ಅವರ ಪಕ್ಷದಲ್ಲಿ ಶಕ್ತಿ ಬರುತ್ತದೆ’ ಎಂದು ತಿರುಗೇಟು ಕೊಟ್ಟರು.